ಅಂತರ್ ಜಿಲ್ಲೆ, ರಾಜ್ಯಗಳಿಗೆ ಕಬ್ಬನ್ನು ರೈತರು ಸಾಗಿಸಿದರೇ ನಿರ್ಬಂಧ ಹಾಕಬಾರದು: ಜಿಲ್ಲಾಧಿಕಾರಿ

KannadaprabhaNewsNetwork |  
Published : Jul 11, 2025, 12:32 AM IST
8 | Kannada Prabha

ಸಾರಾಂಶ

ರೈತರಿಗೆ ಕಾರ್ಖಾನೆಯು 14 ದಿನದ ಒಳಗೆ ಪಾವತಿ ಮಾಡಬೇಕು. ಏನಾದರೂ ವಿಳಂಬವಾದರೆ ಅದಕ್ಕೆ ಶೇ.14 ಸೇರಿಸಿ ಕಾರ್ಖಾನೆಯವರು ರೈತರಿಗೆ ಕೊಡಬೇಕು. ಇಳುವರಿಯನ್ನು ಪ್ರತಿನಿತ್ಯ ವಿಡಿಯೋ ರೆಕಾರ್ಡ್ ಮಾಡಬೇಕು. ಕಾರ್ಖಾನೆ ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಯಿಂದ ಪರಿಶೀಲನೆಗೆ ಒಳಪಡಿಸುತ್ತೇವೆ.

ಕನ್ನಡಪ್ರಭ ವಾರ್ತೆ ಮೈಸೂರು

ಅಂತರ್ ಜಿಲ್ಲೆ ಹಾಗೂ ಬೇರೆ ರಾಜ್ಯಗಳಿಗೆ ಕಬ್ಬನ್ನು ರೈತರು ಸಾಗಾಣಿಕೆ ಮಾಡಿದರೆ ಯಾವುದೇ ನಿರ್ಬಂಧ ಹಾಕಬಾರದು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದರು.

ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರಿಗೆ ಕಾರ್ಖಾನೆಯು 14 ದಿನದ ಒಳಗೆ ಪಾವತಿ ಮಾಡಬೇಕು. ಏನಾದರೂ ವಿಳಂಬವಾದರೆ ಅದಕ್ಕೆ ಶೇ.14 ಸೇರಿಸಿ ಕಾರ್ಖಾನೆಯವರು ರೈತರಿಗೆ ಕೊಡಬೇಕು. ಇಳುವರಿಯನ್ನು ಪ್ರತಿನಿತ್ಯ ವಿಡಿಯೋ ರೆಕಾರ್ಡ್ ಮಾಡಬೇಕು. ಕಾರ್ಖಾನೆ ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಯಿಂದ ಪರಿಶೀಲನೆಗೆ ಒಳಪಡಿಸುತ್ತೇವೆ ಎಂದು ಹೇಳಿದರು.

ಸಕ್ಕರೆ ಕಾರ್ಖಾನೆ ಮುಂಭಾಗ ತೂಕದ ಯಂತ್ರ ಅಳವಡಿಕೆ ಕಡ್ಡಾಯ ಮಾಡಲೇಬೇಕು. ಆದೇಶ ದ್ವಿಪಕ್ಷಿಯ ಒಪ್ಪಂದ ಪತ್ರವನ್ನು ಕಾರ್ಖಾನೆಯವರು ಜಾರಿಗೆ ತರಲು ಕ್ರಮ ಕೈಗೊಳ್ಳಬೇಕು ಎಂದರು.

ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಇಳುವರಿಯಲ್ಲಿ ಮೋಸ ಮಾಡುತ್ತಿದ್ದಾರೆ. ಸ್ಥಳೀಯ ತಜ್ಞರ ಸಮಿತಿ ರಚಿಸಬೇಕು. ತೂಕದಲ್ಲಿ ಮೋಸ ತಪ್ಪಿಸಲು ಕಾರ್ಖಾನೆ ಮುಂಭಾಗ ತೂಕದ ಯಂತ್ರ ಅಳವಡಿಸಬೇಕು. ಪ್ರಸಕ್ತ ಸಾಲಿಗೆ 4 ಸಾವಿರ ರೂ. ಅಡ್ವಾನ್ಸ್ ನೀಡಲು ಕ್ರಮ ಕೈಗೊಳ್ಳಬೇಕು. ರಾಜ್ಯ ಸಲಹಾ ಬೆಲೆ ಕಾಯ್ದೆಯ ನೀತಿ ಜಾರಿಗೆ ತಂದು ಕಟಾವು ಕೂಲಿಯನ್ನು ಏಕ ರೀತಿ ನಿಗದಿ ಮಾಡಬೇಕು. ಕಾರ್ಖಾನೆಯ ಮುಂಭಾಗ ಯಂತ್ರ ತೂಕದ ಯಂತ್ರ ಅಳವಡಿಸಬೇಕು ಎಂದು ಆಗ್ರಹಿಸಿದರು.

ಕಬ್ಬು ದರ 4500 ನಿಗದಿಗೊಳಿಸಿ:

ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಮಾತನಾಡಿ, ಈ ಸಾಲಿಗೆ ಕಬ್ಬಿನ ಎಫ್ಆರ್ ಪಿ ದರ ಟನ್ ಗೆ ಕೇವಲ 150 ರೂ. ಏರಿಕೆ ಮಾಡಿರುವುದು ಅವೈಜ್ಞಾನಿಕವಾಗಿದ್ದು, ಪುನರ್ ಪರಿಶೀಲನೆ ಮಾಡಿ ಸಿಎಸಿಪಿ ವರದಿಯಂತೆ ಪ್ರತಿ ಟನ್ ಕಬ್ಬಿಗೆ 4500 ರೂ. ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಸಕ್ಕರೆ ಕಾರ್ಖಾನೆಗಳಿಂದ ಕಳೆದ ವರ್ಷದ ಉಪ ಉತ್ಪನ್ನಗಳ ಲಾಭ ಹಂಚಿಕೆ ಮಾಡಿ ಕೊಡಿಸಬೇಕು. ಹೆಚ್ಚುವರಿಯಾಗಿ ಟನ್ ಗೆ 150 ರೂ. ಬೆಲೆ ನಿಗದಿ ಪಡಿಸಿದ್ದು, ಕಾರ್ಖಾನೆಗಳು ಇನ್ನು ಕೊಟ್ಟಿರುವುದಿಲ್ಲ. ಅದಕ್ಕೆ ಬಡ್ಡಿ ಸೇರಿಸಿ ತಕ್ಷಣವೇ ಬಾಕಿ ಹಣ ಕೊಡಿಸಬೇಕು. ಬಣ್ಣಾರಿ ಸಕ್ಕರೆ ಕಾರ್ಖಾನೆಯಲ್ಲಿ ಸಕ್ಕರೆ ಇಳುವರಿ ಮೋಸ ತಪ್ಪಿಸಲು ಇಳುವರಿ ಮಿತಿ ಕನಿಷ್ಟ ಶೇ.9ಕ್ಕೆ ನಿಗದಿ ಆಗಬೇಕು. ಕಬ್ಬಿನ ತೂಕದಲ್ಲಿ ಮೋಸ ತಪ್ಪಿಸಲು ಕಾರ್ಖಾನೆಗಳ ಮುಂದೆ ಸರ್ಕಾರದಿಂದ ತೂಕದ ಯಂತ್ರ ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದರು.

ವಿವಿಧ ಇಲಾಖೆಯ ಅಧಿಕಾರಿಗಳು, ರೈತ ಮುಖಂಡರಾದ ಕಿರಗೂರು ಶಂಕರ್, ಬರಡನಪುರ ನಾಗರಾಜ್, ವಳಗೆರೆ ಗಣೇಶ್, ಹನುಮಯ್ಯ, ಕೆರೆಹುಂಡಿ ರಾಜಣ್ಣ, ಚಂದ್ರು, ಜಗದೀಶ್, ಸಿದ್ದಪ್ಪ, ಮುದ್ದಹಳ್ಳಿ ಮಧು, ಶಿವಣ್ಣ, ಪುಟ್ಟಸ್ವಾಮಿ, ಚಿದಂಬರ್, ಶ್ರೀಕಂಠ ಮೊದಲಾದವರು ಇದ್ದರು.

PREV