ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ಶ್ರೀಕ್ಷೇತ್ರ ಕರುನಾಡಿನ ಕೊಲ್ಲಾಪುರ ಎಂದು ಗೌರಿಗದ್ದೆ ಶ್ರೀಕ್ಷೇತ್ರದ ಅವಧೂತ ಶ್ರೀವಿನಯ್ ಗುರೂಜಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ಶ್ರೀಕ್ಷೇತ್ರ ಕರುನಾಡಿನ ಕೊಲ್ಲಾಪುರ ಎಂದು ಗೌರಿಗದ್ದೆ ಶ್ರೀಕ್ಷೇತ್ರದ ಅವಧೂತ ಶ್ರೀವಿನಯ್ ಗುರೂಜಿ ತಿಳಿಸಿದರು.ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ದೇವಾಲಯದ ಆವರಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಶ್ರೀಮಹಾಲಕ್ಷ್ಮೀ ದೇವಾಲಯದ ಪ್ರಕಾರ, ನೂತನ ದಾಸೋಹ ನಿಲಯ ಮತ್ತು ನವೀಕೃತ ಕಲ್ಯಾಣ ಮಂಟಪ ಉದ್ಘಾಟಿಸಿ ಮಾತನಾಡಿದರು.ಗೊರವನಹಳ್ಳಿ ಶ್ರೀ ಕ್ಷೇತ್ರದ ಸೃಷ್ಟಿಕರ್ತೆ ಶ್ರೀಮಾತೆ ಕಮಲಮ್ಮ ಅಜ್ಜಿ. ಕಮಲಮ್ಮ ಅಜ್ಜಿಯ ಭಕ್ತಿಯ ಸ್ವರೂಪದ ಪ್ರತಿಫಲವೇ ಶ್ರೀಕ್ಷೇತ್ರದ ಇಂದಿನ ಸಾಧನೆ. ಮನುಷ್ಯ ಮಾಡಿದ ಪಾಪ ಪುಣ್ಯಕ್ಷೇತ್ರದಲ್ಲಿ ನಿವಾರಣೆ ಮಾಡಿಕೊಳ್ತಾನೇ. ಆದರೆ ಪುಣ್ಯಕ್ಷೇತ್ರದಲ್ಲಿ ಮನುಷ್ಯ ಮಾಡಿದ ಪಾಪವು ವಜ್ರದಲ್ಲಿ ಬರೆಯಲ್ಪಡುತ್ತೆ. ಕಮಲಮ್ಮ ಮಾತೆಯ ಸವಿನೆನಪಿಗಾಗಿ ಗೊರವನಹಳ್ಳಿ ಶ್ರೀಕ್ಷೇತ್ರದಲ್ಲಿ ೧೦ಸಾವಿರ ಹಣ್ಣಿನ ಸಸಿಗಳನ್ನು ನೆಟ್ಟು ಕಮಲಮ್ಮ ನರ್ಸಿಂಗ್ ಹೋಂ ಮತ್ತು ರೆಸಿಡೆನ್ಸಿಯಲ್ ಸ್ಕೂಲ್ ಪ್ರಾರಂಭಿಸಬೇಕಿದೆ ಎಂದರು.ಹೊರನಾಡು ಅನ್ನಪೂಣೇಶ್ವರಿ ದೇವಾಲಯದ ಧರ್ಮಕರ್ತರಾದ ಡಾ.ಜಿ.ಭೀಮೇಶ್ವರ ಜೋಷಿ ಮಾತನಾಡಿ, ಶ್ರೀಮಾತೆ ಕಮಲಮ್ಮ ನೆಲೆಸಿದ ಪವಿತ್ರ ಪುಣ್ಯಕ್ಷೇತ್ರ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ಶ್ರೀಕ್ಷೇತ್ರ. ಕರುನಾಡಿನ ಅದ್ಭುತವಾದ ಶ್ರೀಕ್ಷೇತ್ರವು ಸೃಷ್ಟಿಯ ವಿಸ್ಮಯವಾಗಿದೆ. ಭಕ್ತರಿಗೆ ದೇವರ ದರ್ಶನ ಮಾಡಿಸೋದು ಗುರುಪೀಠದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.ಪಾವಗಡ ರಾಮಕೃಷ್ಣ ಸೇವಾಶ್ರಮದ ಶ್ರೀಜಪಾನಂದ ಮಹಾರಾಜರು ಮಾತನಾಡಿ ದೇವರು ಕೇವಲ ದೇವಾಲಯದಲ್ಲಿ ಮಾತ್ರ ಇಲ್ಲ. ಸೃಷ್ಟಿಯ ಎಲ್ಲಾ ಕಡೆಯು ದೇವರಿದ್ದಾನೆ. ಟ್ರಸ್ಟ್‌ನ ಅಧ್ಯಕ್ಷರು ಮತ್ತು ಸದಸ್ಯರು ಸೇವಕರ ರೀತಿಯಲ್ಲಿ ದೇವಿಯ ಕೆಲಸ ಮಾಡಬೇಕಿದೆ. ಶ್ರೀಮಾತೆ ಕಮಲಮ್ಮ ನೆಲಸಿದ ಪುಣ್ಯಕ್ಷೇತ್ರವು ಇನ್ನೂ ಆಕಾಶದ ಎತ್ತರಕ್ಕೆ ಬೆಳೆಯಲಿ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಮುರುಘಾ ಮಠದ ಶ್ರೀಬಸವಪ್ರಭು ಸ್ವಾಮೀಜಿ, ಮಾಣಿಲ ಶ್ರೀದಾಮದ ಸಂಸ್ಥಾಪಕ ಶ್ರೀಮೋಹನದಾಸ್ ಪರಮಹಂಸ ಸ್ವಾಮೀಜಿ, ಮೂಡಿಗೇರೆ ಶಾಸಕಿ ನಯನಮೋಟಮ್ಮ, ಅಪರ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ತಹಶೀಲ್ದಾರ್ ಮಂಜುನಾಥ.ಕೆ, ಶ್ರೀಲಕ್ಷ್ಮೀಪ್ರಸಾದ್, ಅರ್ಚಕ ಸುಬ್ರಹ್ಮಣ್ಯ, ನಿರೂಪಕಿ ಸುಕನ್ಯ ಸೇರಿದಂತೆ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.