ಮಹಿಳಾ ಮೀಸಲಿಗೆ ಕಾಂಗ್ರೆಸ್ ವಿರೋಧ: ನಾರಿಶಕ್ತಿ ಫೋರಂ ಪ್ರತಿಭಟನೆ

KannadaprabhaNewsNetwork |  
Published : Apr 27, 2026, 02:00 AM IST
ಮಹಿಳಾ ಮೀಸಲಾತಿ ಜಾರಿಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ನಿಲುವು ಖಂಡಿಸಿ ಬಿಜೆಪಿಯ ನಾರಿಶಕ್ತಿ ಫೋರಂ ವತಿಯಿಂದ ಬಳ್ಳಾರಿಯ ಗಡಗಿಚನ್ನಪ್ಪ ವೃತ್ತದಲ್ಲಿ ಶನಿವಾರ ಸಂಜೆ ಪ್ರತಿಭಟನೆ ನಡೆಯಿತು.  | Kannada Prabha

ಸಾರಾಂಶ

ಶೇ.33ರಷ್ಟು ಮಹಿಳಾ ಮೀಸಲಾತಿ ವಿಧೇಯಕಕ್ಕೆ ಕಾಂಗ್ರೆಸ್ ಪಕ್ಷವು ರಾಜಕೀಯ ಬೆರೆಸಿರುವುದು ಖಂಡನೀಯ.

ಬಳ್ಳಾರಿ: ಮಹಿಳಾ ಮೀಸಲಾತಿ ಜಾರಿಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ನಿಲುವು ಖಂಡಿಸಿ ಬಿಜೆಪಿಯ ನಾರಿಶಕ್ತಿ ಫೋರಂನಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸರ್ವಾನುಮತದಿಂದ ಗೆಲುವು ಸಾಧಿಸಬೇಕಾಗಿದ್ದ ಶೇ.33ರಷ್ಟು ಮಹಿಳಾ ಮೀಸಲಾತಿ ವಿಧೇಯಕಕ್ಕೆ ಕಾಂಗ್ರೆಸ್ ಪಕ್ಷವು ರಾಜಕೀಯ ಬೆರೆಸಿರುವುದು ಖಂಡನೀಯ. ಕಾಂಗ್ರೆಸ್ ಪಕ್ಷದ ಈ ಹಿಂದಿನಿಂದಲೂ ಮಹಿಳಾ ವಿರೋಧಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದು, ಮಹಿಳಾ ವಿಧೇಯಕಕ್ಕೆ ವಿರೋಧಿಸುವ ಮೂಲಕ ಪಕ್ಷದ ಧೋರಣೆಯನ್ನು ಹಾರ ಹಾಕಿದೆ.

ಮಹಿಳೆಯರು ಅಡುಗೆ ಮನೆಗೆ ಸೀಮಿತಗೊಳ್ಳದೇ ರಾಜಕೀಯ ವಲಯದಲ್ಲೂ ಮುನ್ನೆಲೆಗೆ ಬರಬೇಕು. ಈಗಾಗಲೇ ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳೆಗೆ ರಾಜಕೀಯದಲ್ಲೂ ಪೂರಕ ಅವಕಾಶ ನೀಡಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮಹಿಳಾ ಮೀಸಲಾತಿ ಜಾರಿಗೆ ಮುಂದಾಗಿದ್ದರು. ಆದರೆ, ಕಾಂಗ್ರೆಸ್ ಪಕ್ಷ ಮೀಸಲಾತಿ ಜಾರಿಗೆ ವಿರೋಧ ವ್ಯಕ್ತಪಡಿಸಿ, ನಾರಿಶಕ್ತಿಗೆ ಅಪಮಾನ ಮಾಡಿದೆ ಎಂದು ಪ್ರತಿಭಟನಾಕಾರರು ದೂರಿದರು.

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮಹಿಳಾಪರ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದೇಶದಲ್ಲಿ 12 ಕೋಟಿ ಮಹಿಳೆಯರಿಗೆ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ವಿವಿಧ ಯೋಜನೆಗಳ ಮೂಲಕ ಮಹಿಳಾ ಆರ್ಥಿಕ ಸಬಲೀಕರಣಕ್ಕಾಗಿ ಕ್ರಮ ವಹಿಸಲಾಗಿದೆ. ಮಹಿಳೆಯರು ರಾಜಕೀಯದಲ್ಲೂ ಪ್ರಗತಿ ಕಾಣಬೇಕು ಎಂಬ ಉದ್ದೇಶದಿಂದ ಮಹಿಳಾ ಮೀಸಲಾತಿ ಜಾರಿಗೆ ಮುಂದಾಗಿದ್ದ ಪ್ರಧಾನಮಂತ್ರಿ ಮಹಿಳಾಪರ ಕಾಳಜಿಯ ಕಾರ್ಯಕ್ಕೆ ಕಾಂಗ್ರೆಸ್ ಸಹಕರಿಸದೆ, ಮಹಿಳಾ ಸಮುದಾಯಕ್ಕೆ ಅನ್ಯಾಯ ಎಸಗಿದೆ ಎಂದು ತಿಳಿಸಿದರು.

ನಗರದ ಶ್ರೀ ಕನಕ ದುರ್ಗಮ್ಮ ದೇವಸ್ಥಾನದಿಂದ ಗಡಗಿಚನ್ನಪ್ಪ ವೃತ್ತದವರೆಗೆ ಶನಿವಾರ ಸಂಜೆ ಮೆರವಣಿಗೆ ಹೊರಟ ಫೋರಂನ ಬಿಜೆಪಿ ಮಹಿಳಾ ಘಟಕದ ಸದಸ್ಯರು ಗಡಗಿಚನ್ನಪ್ಪ ವೃತ್ತದಲ್ಲಿ ಸಮಾವೇಶಗೊಂಡು ಮಹಿಳಾ ಮೀಸಲಾತಿಗೆ ವಿರೋಧಿಸಿದ ಕಾಂಗ್ರೆಸ್ ನಡೆ ವಿರುದ್ಧ ಘೋಷಣೆ ಕೂಗಿದರು.

ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಹಂಪಿ ರಮಣ ಮಾತನಾಡಿದರು. ರಾಜ್ಯ ಕಾರ್ಯಕಾರಿಣಿ ಸದಸ್ಯೆ ಡಾ.ಅರುಣಾ, ರಾಜ್ಯ ಉಪಾಧ್ಯಕ್ಷೆ ಕೆ.ಆರ್. ವಿಜಯಲಕ್ಷ್ಮಿ, ಪಾಲಿಕೆ ಸದಸ್ಯೆ ಸುರೇಖಾ ಮಲ್ಲನಗೌಡ, ಪಕ್ಷದ ಮಹಿಳಾ ಘಟಕದ ಹಿರಿಯ ಸದಸ್ಯರಾದ ಸಾಹನಾ ಹಿರೇಮಠ್, ಡಾ.ರೇಣುಕಾ, ಗ್ರಾಯತ್ರಿರೆಡ್ಡಿ, ಪುಷ್ಪಲತಾ, ಚಾಂದಿನಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೀಸಲಾತಿಯಲ್ಲಿ ವಾಲ್ಮೀಕಿ ಸಮುದಾಯಕ್ಕೆ ದೊಡ್ಡ ಅನ್ಯಾಯ-ರಾಜುಗೌಡ
ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಸಾಮರಸ್ಯ ಉತ್ತೇಜಿಸುತ್ತವೆ-ಶಾಸಕ ಬಣಕಾರ