ಧಾರವಾಡ: ಮಕ್ಕಳ ಮಾನಸಿಕ ವಿಕಾಸಕ್ಕೆ ಪೂರಕ ಸಾಹಿತ್ಯವನ್ನು ಪ್ರೋತ್ಸಾಹಿಸಲು ಮತ್ತು ಈ ಕ್ಷೇತ್ರದ ಸಾಹಿತಿಗಳಿಗೆ ಸೂಕ್ತ ವೇದಿಕೆ ಕಲ್ಪಿಸಲು ಸರ್ಕಾರ ಕೂಡಲೇ ಪ್ರತ್ಯೇಕ ಮಕ್ಕಳ ಸಾಹಿತ್ಯ ಅಕಾಡೆಮಿ ಸ್ಥಾಪಿಸಬೇಕು ಎಂದು ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಒತ್ತಾಯಿಸಿದರು.
ಮಕ್ಕಳ ಉತ್ಕೃಷ್ಟ ಸಾಹಿತ್ಯ ಪ್ರಕಟವಾಗುತ್ತಿದ್ದರೂ ವಿಮರ್ಶಕರಿಂದ ತಾತ್ಸಾರಕ್ಕೆ ಒಳಗಾಗಿದೆ, ಸರ್ಕಾರಿ ಮಟ್ಟದಲ್ಲಿಯೂ ಅದಕ್ಕೆ ಸಿಗಬೇಕಾದ ಮನ್ನಣೆ ದೊರೆಯುತ್ತಿಲ್ಲ. 2010ರಲ್ಲಿಯೇ ಈ ಕುರಿತು ನಾನು ಲಿಖಿತವಾಗಿ ಮಕ್ಕಳ ಸಾಹಿತ್ಯ ಅಕಾಡೆಮಿ ಸ್ಥಾಪಿಸುವುದಕ್ಕಾಗಿ ಮನವಿ ಮಾಡಿದ್ದೆ. ಸರ್ಕಾರ ಇಂದಿನ ವರೆಗೂ ಕ್ರಮ ಕೈಗೊಂಡಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ, ವಿಶೇಷವಾಗಿ ವಿಜಯಪುರ ಜಿಲ್ಲೆಯಲ್ಲಿ ಮಕ್ಕಳ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಸಾಹಿತಿಗಳಿದ್ದಾರೆ.
ಈ ಹಿನ್ನೆಲೆಯಲ್ಲಿ ವಿಜಯಪುರದಲ್ಲೇ ಮಕ್ಕಳ ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟ ಅವರು, ಇಂದಿನ ತಾಂತ್ರಿಕ ಯುಗದಲ್ಲಿ ಭೌತಿಕ ವಸ್ತುಗಳ ವ್ಯಾಮೋಹದಿಂದ ಮನಸ್ಸು ಮನಸ್ಸು ದೂರವಾಗುತ್ತಿವೆ. ಮಕ್ಕಳನ್ನು ಭಾವನಾತ್ಮಕವಾಗಿ ಮತ್ತು ಸೃಜನಶೀಲವಾಗಿ ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯದ ಪಾತ್ರ ದೊಡ್ಡದಿದೆ. ಕರ್ನಾಟಕದ ಎಲ್ಲ ಗ್ರಾಪಂ ಮಟ್ಟದ ಗ್ರಂಥಾಲಯಗಳಲ್ಲಿ ಶಾಲೆಗಳಿಗೆ ಮಕ್ಕಳ ಸಾಹಿತ್ಯದ ಪುಸ್ತಕಗಳು ಲಭ್ಯವಾಗಬೇಕು.ಮಕ್ಕಳ ಮಾನಸಿಕ ವಿಕಾಸದ ಸಾಹಿತ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಘ, ಸಂಸ್ಥೆಗಳು ಜಂಟಿಯಾಗಿ ಕೆಲಸ ಮಾಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.
ಕಾರ್ಯಕ್ರಮದಲ್ಲಿ ಜಂಬುನಾಥ ಕಲ್ಯಾಣಿ, ಗುಂಡುರಾವ್ ದೇಸಾಯಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪುರಸ್ಕೃತರ ಪರವಾಗಿ ಜಂಬುನಾಥ ಕಲ್ಯಾಣಿ ಹಾಗೂ ಗುಂಡುರಾವ್ ದೇಸಾಯಿ ಮಾತನಾಡಿದರು.
ಹಿರಿಯ ಮಕ್ಕಳ ಸಾಹಿತಿಗಳಾ ಡಾ. ಆನಂದ ಪಾಟೀಲ, ನಿಂಗಣ್ಣ ಕುಂಟಿ, ಡಾ. ಸಂಜೀವ ಕುಲಕರ್ಣಿ, ವಿಶ್ವೇಶ್ವರಿ ಹಿರೇಮಠ, ಮಹೇಶ ಹೊರಕೇರಿ, ಶಶಿಧರ್ ತೋಡ್ಕರ್, ಚೇತನ್ ಸೊಲಗಿ, ವಿಶ್ವಾಸ ಸೊಲಗಿ, ಶರಣು ಸೊಲಗಿ, ಶಿವಕುಮಾರ ಪಾಗದ, ಅಂಕಿತಾ ಸೊಲಗಿ, ಸಹನಾ ಕುಷ್ಟಗಿ, ವಿಕಾಸ ಪಾಗಾದ, ಸಂದೇಶ ಸೊಲಗಿ ನಿರ್ವಹಿಸಿದರು.