ಕಾಂಗ್ರೆಸ್ ಪಕ್ಷ ಕಾರ್ಗಿಲ್ ಯುದ್ದ ವಿಜಯೋತ್ಸವ ಮಾಡಿಲ್ಲ: ಶಶಿ ಆಲ್ದೂರ್ ಆರೋಪ

KannadaprabhaNewsNetwork | Published : Jul 26, 2024 1:34 AM

ಸಾರಾಂಶ

ನರಸಿಂಹರಾಜಪುರ, ವಾಜಪೇಯಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಕಾರ್ಗಿಲ್ ಯುದ್ಧವಾಗಿದ್ದು ಕಾರ್ಗಿಲ್ ವಿಜಯ ಬಿಜೆಪಿಗೆ ಲಾಭವಾಗುತ್ತದೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಿಲ್ಲ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಶಿ ಆಲ್ದೂರ್ ಆರೋಪಿಸಿದರು.

ನರಸಿಂಹರಾಜಪುರದಲ್ಲಿ ಕಾರ್ಗಿಲ್ ವಿಜಯ ಜ್ಯೋತಿ ರಥ ಯಾತ್ರೆಯಲ್ಲಿ ವಿಜಯೋತ್ಸವ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ವಾಜಪೇಯಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ಕಾರ್ಗಿಲ್ ಯುದ್ಧವಾಗಿದ್ದು ಕಾರ್ಗಿಲ್ ವಿಜಯ ಬಿಜೆಪಿಗೆ ಲಾಭವಾಗುತ್ತದೆ ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಿಲ್ಲ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಶಿ ಆಲ್ದೂರ್ ಆರೋಪಿಸಿದರು.

ಗುರುವಾರ ಪಟ್ಟಣವ ಅಂಬೇಡ್ಕರ್ ವೃತ್ತದಲ್ಲಿ ಕಾರ್ಗಿಲ್ ವಿಜಯ ಜ್ಯೋತಿ ರಥಯಾತ್ರೆ ಆಗಮನ ಅಂಗವಾಗಿ ಎನ್.ಆರ್. ಪುರ ಬಿಜೆಪಿ ಯುವ ಮೋರ್ಚಾ ಅಂಬೇಡ್ಕರ್ ವೃತ್ತದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಕಾರ್ಗಿಲ್ ಯುದ್ಧ ನಮ್ಮದೇಶದ ಉಳಿವಿಗಾಗಿ, ರಕ್ಷಣೆಗಾಗಿ ಆಗಿದ್ದೇ ವಿನಃ ಯಾವುದೇ ಬೇರೆ ದುರುದ್ದೇಶಕ್ಕೆ ಯುದ್ಧವಾಗಿದ್ದಲ್ಲ. ಆದರೆ, ಕಾಂಗ್ರೆಸ್ ಇದುವರೆಗೂ ಕಾರ್ಗಿಲ್ ವಿಜಯ ದಿನಆಚರಿಸದೇ ಇರುವುದು ಶೋಚನೀಯ. ಈ ವಿಜಯೋತ್ಸವ ದಿವಸ ದೇಶದ ಜನತೆಗೆ ಸಂತಸದ ದಿನವಾಗಿದೆ. ಇಂತಹ ದಿನವನ್ನು ಕೋಮುಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸವಾಗುತ್ತಿದೆ. ಇದು ದೇಶದಲ್ಲಿ ಆಗುತ್ತಿರುವ ಅತ್ಯಂತ ಕೀಳು ಮಟ್ಟದ ಬೆಳವಣಿಗೆ ಎಂದು ದೂರಿದರು.ನಿವೃತ್ತ ಯೋಧ ಗಣೇಶ್ ಮಾತನಾಡಿ, 1996 ರಿಂದ 2020ರವರೆಗೆ ನಾನು ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದೇನೆ. ಈ ಕಾರ್ಗಿಲ್ ಪ್ರದೇಶದ ಗುಡ್ಡದಲ್ಲಿ ದನ ಕಾಯುವವನೊಬ್ಬ ತನ್ನ ದನ ಕಾಣೆಯಾಗಿದೆ ಎಂದು ಹುಡುಕಲು ಹೋದಾಗ ಎದುರಿನ ಗುಡ್ಡದಲ್ಲಿ ಅಪರಿಚಿತ ದೇಶದ, ಅಪರಿಚಿತ ಸಮವಸ್ತ್ರದ ಸೈನಿಕರ ಕಂಡು ಭಾರತೀಯ ಸೇನೆಗೆ ತಿಳಿಸಿದಾಗಲೇ ಬೇರೆ ದೇಶದ ಸೈನಿಕರು ಆಕ್ರಮಣಕ್ಕೆ ಬರುತ್ತಿದ್ದಾರೆಂದು ತಿಳಿಯಿತು. ತಕ್ಷಣ ನಮ್ಮ ಸೈನಿಕರು ಯುದ್ದಕ್ಕೆ ತಯಾರಿ ನಡೆಸಿ ಕೊಳ್ಳುತ್ತಾರೆ. ಮೇ.1999 ಮೇ 3 ರಿಂದ ಮೇ 23 ರವರೆಗೆ ಈ ಯುದ್ಧ ನಡೆಯುತ್ತದೆ. ಯುದ್ಧದಲ್ಲಿ 400 ಕ್ಕೂ ಅಧಿಕ ಭಾರತೀಯ ಯೋಧರು ವೀರ ಮರಣ ಹೊಂದಿದರು. ಪಾಕಿಸ್ಥಾನದ 696 ಯೋಧರು ಸಾವನ್ನಪ್ಪುತ್ತಾರೆ. ಅವರು ಆಕ್ರಮಿಸಿದ ಪ್ರದೇಶಗಳನ್ನು ನಮ್ಮ ದೇಶದ ಯೋಧರು ವಶ ಪಡಿಸಿಕೊಳ್ಳಬೇಕಾದರೆ 83 ದಿನಗಳಾಯಿತು ಎಂದು ತಿಳಿಸಿದರು.ಬಿಜೆಪಿ ಮಂಡಲ ಅಧ್ಯಕ್ಷ ಅರುಣ್‌ಕುಮಾರ್ ಮಾತನಾಡಿ, ನಮ್ಮ ಪಕ್ಷದಿಂದ ರಾಜ್ಯದ ಮೂಲೆ, ಮೂಲೆಗೂ ಕಾರ್ಗಿಲ್ ವಿಜಯ ದಿವಸದ ನೆನಪನ್ನು ದೇಶದ ಜನರಿಗೆ, ಯುವಕರಿಗೆ ತಿಳಿಸಬೇಕೆಂಬ ಸದುದ್ದೇಶದಿಂದ ಈ ರಥ ಯಾತ್ರೆ ಕೈಗೊಳ್ಳಲಾಗಿದೆ. ಆದರೆ ಇಂದು ಪಟ್ಟಣದಲ್ಲಿ ಅನ್ಯ ಕೋಮಿನ ಧಾರ್ಮಿಕ ಕೇಂದ್ರಗಳಿಗೆ ಪೊಲೀಸ್ ಭದ್ರತೆ ಒದಗಿಸಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ. ನಾವು ನಮ್ಮ ದೇಶದ ವಿಜಯೋತ್ಸವ ದಿನವನ್ನು ಆಚರಿಸುತ್ತಿದ್ದೇವೆ. ಈ ರಥ ಯಾತ್ರೆಯನ್ನು ಎಲ್ಲಾ ಸಮುದಾಯದ ಜನರೂ ಸೇರಿ ಆಚರಿಸುತ್ತಿದ್ದೇವೆ. ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ಅಟೆಲ್ ಬಿಹಾರಿ ವಾಜಪೇಯಿ ನಮ್ಮ ದೇಶದ ಯೋಧರಿಗೆ ಆತ್ಮಸ್ಥೈರ್ಯ ತುಂಬಿದ್ದರು ಎಂದರು.ಬಿ.ಎಚ್.ಕೈಮರದಿಂದ ಪಟ್ಟಣದ ಅಂಬೇಡ್ಕರ್ ವೃತ್ತದವರೆಗೆ ವಾಹನಗಳ ಮೆರವಣಿಗೆಯೊಂದಿಗೆ ಕಾರ್ಗಿಲ್ ವಿಜಯ ಜ್ಯೋತಿ ರಥವನ್ನು ಕರೆ ತರಲಾಯಿತು. ಯುವ ಮೋರ್ಚಾ ಕಾರ್ಯಕರ್ತರು ದೇಶದ ಬಗ್ಗೆ , ವೀರ ಯೋಧರ ಪರ ಘೋಷಣೆ ಕೂಗಿದರು. ಕಾರ್ಗಿಲ್ ಯುದ್ಧದಲ್ಲಿ ಮರಣ ಹೊಂದಿದ ಯೋಧರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಅರ್ಪಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಉಪಾಧ್ಯಕ್ಷ ಶ್ರೇಯಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿ ಆಲ್ದೂರ್, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಪ್ರೀತಮ್‌ ಗೌಡ, ಕಾರ್ಯದರ್ಶಿ ಮೂಡಬಾಗಿಲು ಸಚಿನ್, ಮುಖಂಡರಾದ ಅಶ್ವನ್, ಕೆ.ಪಿ.ಸುರೇಶ್‌ಕುಮಾರ್, ಬಿ.ಎಸ್.ಆಶೀಶ್‌ಕುಮಾರ್, ಕೆಸವೆ ಮಂಜುನಾಥ್, ಎನ್.ಎಂ.ಕಾಂತರಾಜ್, ಎಂ.ಎನ್.ನಾಗೇಶ್, ಎಸ್.ಎಸ್.ಸಂತೋಷ್‌ಕುಮಾರ್, ಎ.ಬಿ.ಮಂಜುನಾಥ್, ಸುರಭಿ ರಾಜೇಂದ್ರ, ಮಂಜುನಾಥ್‌ಲಾಡ್, ಟಿ.ಆರ್.ಜಯರಾಂ, ವೈ.ಎಸ್.ರವಿ, ತಾಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿದಯಾನಂದ್, ಸವಿತಾ,ಎಂ.ಟಿ.ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.

Share this article