ಕನ್ನಡಪ್ರಭ ವಾರ್ತೆ ಮೈಸೂರು
ರೈತರ ಬಗ್ಗೆ ಕಾಳಜಿ ಇಲ್ಲದೆ ನಿರಂತರ ಅಹೋರಾತ್ರಿ ಧರಣಿ ನಡೆಸಿದ ರೈತರಿಗೆ ನೀಡಿದ ಭರವಸೆಯಂತೆ ನಡೆದುಕೊಳ್ಳದ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮುಖ್ಯಮಂತ್ರಿಗಳ ವಿರುದ್ಧ ಜು.27 ರಂದು ಕಪ್ಪು ಬಾವುಟ ಪ್ರದರ್ಶನಕ್ಕೆ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘವು ನಿರ್ಧರಿಸಿದೆ.ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಜು.27 ರಂದು ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಬರುವ ಮುಖ್ಯಮಂತ್ರಿಗಳಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.
ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಿದಾದ, ರೈತರ ಜೊತೆ ಜಿಲ್ಲಾಧಿಕಾರಿ ಮಾತನಾಡಿ, ಜು.27 ರಂದು ಸಭೆ ನಡೆಸುತ್ತೇವೆ ಎಂದು ಹೇಳಿ, ಈಗ ಸಭೆಯ ಬಗ್ಗೆ ಯಾವುದೇ ಮಾಹಿತಿ ನೀಡದೇ ರೈತರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ, ಮೈಸೂರಿಗೆ ಮುಖ್ಯಮಂತ್ರಿ ಬಂದಾಗ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿ ಜೈಲ್ ಬರೋ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.ಕಬ್ಬು ಬೆಳೆಗಾರರಿಗೆ ಪ್ರಸಕ್ತ ಸಾಲಿಗೆ ಅಡ್ವಾನ್ಸ್ 4000 ರೂ. ನಿಗದಿ ಮಾಡಿ, ಕಳೆದ ಸಾಲಿನ ಲಾಭಾಂಶ ಸರ್ಕಾರದ ಆದೇಶದಂತೆ ಪ್ರತಿ ಟನ್ ಗೆ 150 ರೂ. ಹಾಗೂ ಸಕ್ಕರೆ ಕಾರ್ಖಾನೆಯ ಮುಂದೆ ಎಪಿಎಂಸಿ ಮುಖಾಂತರ ಮುಖ್ಯ ದ್ವಾರದಲ್ಲಿ ತೂಕದ ಯಂತ್ರ ಅಳವಡಿಸಬೇಕು. ಅಂತರ ಜಿಲ್ಲಾ ಕಬ್ಬು ಸಾಗಣೆ ನಿರ್ಬಂಧವನ್ನು ಹೇರಬಾರದು ಎಂದು ಅವರು ಆಗ್ರಹಿಸಿದರು.
ಕೇಂದ್ರ ಸರ್ಕಾರ ಎಫ್.ಆರ್.ಪಿ ದರವನ್ನು ಇಳುವರಿ ಪ್ರತಿ ಟನ್ ಕಬ್ಬಿಗೆ 10.5ಕ್ಕೆ ಏರಿಕೆ ಮಾಡಿ 3400 ರೂ. ನಿಗದಿ ಮಾಡಿರುವುದು ರೈತರಿಗೆ ಮಾಡಿದ ದ್ರೋಹ. ತಕ್ಷಣ ಇದನ್ನು ಮರುಪರಿಶೀಲನೆ ಮಾಡಿ 8.5ಕ್ಕೆ ಇಳುವರಿಯನ್ನು ನಿಗದಿ ಮಾಡಬೇಕು. ಬಣ್ಣಾರಿ ಸಕ್ಕರೆ ಕಾರ್ಖಾನೆಯ ಲಾಭಾಂಶ ಮತ್ತು ಖರ್ಚಿನ ಬ್ಯಾಲೆನ್ಸ್ ಸೀಟನ್ನು ತನಿಖೆ ಮಾಡಿ, ರೈತರಿಗೆ ನ್ಯಾಯ ಕೊಡಿಸಬೇಕು. ಕಬ್ಬು ಕಟಾವು ಸಾಗಾಣಿಕೆ ಕೂಲಿಯನ್ನು ಮನ ಬಂದಂತೆ ನಿಗದಿ ಮಾಡಿ ರೈತರನ್ನು ಕಾರ್ಖಾನೆ ಸುಲಿಗೆ ಮಾಡುತ್ತಿದೆ ಎಂದು ಅವರು ಆರೋಪಿಸಿದರು.ಶ್ರೀರಾಮ ಸಕ್ಕರೆ ಕಾರ್ಖಾನೆ ತಕ್ಷಣ ಪ್ರಾರಂಭವಾಗಬೇಕು ಹಾಗೂ ಕಾರ್ಖಾನೆಯನ್ನು ನಡೆಸುವ ಕಂಪನಿಗೆ ನೋಂದಣಿ ಪ್ರಕ್ರಿಯೆ ತ್ವರಿತವಾಗಿ ಮುಗಿಸಬೇಕು. ಕಬ್ಬು ಅರೆಯಲು ಕಾರ್ಖಾನೆಯನ್ನು ಪ್ರಾರಂಭಿಸಬೇಕು ಎಂದು ಅವರು ಒತ್ತಾಯಿಸಿದರು.
ಸಭೆಯಲ್ಲಿ ರೈತ ಮುಖಂಡರಾದ ಕೆರೆಹುಂಡಿ ರಾಜಣ್ಣ, ಅಂಕನಹಳ್ಳಿ ತಿಮ್ಮಪ್ಪ, ದೇವೇಂದ್ರಕುಮಾರ್, ನಾಗರಾಜ್, ಹಾಡ್ಯ ರವಿ, ಶಿವರುದ್ರಪ್ಪ, ಅಂಬಳೆ ಮಹದೇವಸ್ವಾಮಿ, ಎಂ.ವಿ. ಕೃಷ್ಣಪ್ಪ, ಸೋಮಣ್ಣ, ಕೆರೆಹುಂಡಿ ಶಿವಣ್ಣ, ದೇವಿರಮ್ಮನಹಳ್ಳಿಹುಂಡಿ ಮಹೇಶ್, ಮಲಿಯೂರು ಮಹೇಂದ್ರ, ಪ್ರವೀಣ್, ಶ್ರೀಕಂಠ, ಹೊನ್ನಹಳ್ಳಿ ಬಸವಣ್ಣ, ಕಿರುಗುಂದ ಸ್ವಾಮಿ, ಮಹೇಶ್, ಲಕ್ಷ್ಮಣಸ್ವಾಮಿ, ಹಂಡಿವಿನಹಳ್ಳಿ ರವಿ, ಎಂ. ಸಿದ್ದರಾಜು, ಸೋಮೇಶ್, ಮೋಹನ್ ಚಂದ್ರ ಮೊದಲಾದವರು ಇದ್ದರು.-- ಪಂಪ್ ಸೆಟ್ ನಿಯಮ ಪುನರ್ ಪರಿಶೀಲಿಸಲು ಆಗ್ರಹ--
ಕಬಿನಿ ಮತ್ತು ಕಾವೇರಿ ಅಚ್ಚುಕಟ್ಟು ಪ್ರದೇಶ ನಾಲೆಗಳಿಗೆ ಹಾಗೂ ಕೆರೆ ಕಟ್ಟೆಗಳಿಗೆ ಪ್ರಸಕ್ತ ಸಾಲಿಗೆ ಯಾವುದೇ ಷರತ್ತು ಹಾಕದೆ ವ್ಯವಸಾಯಕ್ಕೆ ನೀರನ್ನು ಬಿಡಬೇಕು. ನಾಲೆಗಳಿಗೆ ಸುತ್ತಮುತ್ತ ಪಂಪ್ ಸೆಟ್ ಕೊರೆಯಬಾರದು ಮತ್ತು ನಾಲೆಯಿಂದ ಮೋಟಾರ್ ಗಳ ಮೂಲಕ ನೀರು ತೆಗೆದುಕೊಳ್ಳಬಾರದು ಎಂಬ ನಿಯಮ ಮಾಡಿರುವುದು ರೈತರಿಗೆ ಮಾರಕವಾಗಿದೆ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಖಂಡಿಸಿದರು.ರೈತರ ಜಮೀನನ್ನು ವಶಪಡಿಸಿಕೊಂಡು ನಾಲೆಗಳನ್ನು ನಿರ್ಮಾಣ ಮಾಡಿರುವುದು. ಅದರಿಂದ ಕೃಷಿ ಬಳಕೆಗಾಗಿ ಮಾತ್ರ ನಾಲೆಗಳಿಂದ ನೀರನ್ನು ತೆಗೆದುಕೊಳ್ಳುವ ರೈತರ ಮೇಲೆ ಕಾನೂನು ಕ್ರಮ ಎಂದರೆ ಇದರ ವಿರುದ್ಧ ಕಾನೂನು ಭಂಗ ಚಳವಳಿ ನಡೆಸಬೇಕಾಗುತ್ತದೆ. ಆದ್ದರಿಂದ ಈ ನಿಯಮವನ್ನು ನೀರಾವರಿ ಸಚಿವರು ಪುನರ್ ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದರು.
ಹೊಸ ಕೃಷಿ ಪಂಪ್ ಸೆಟ್ ಗಳಿಗೆ ಅಕ್ರಮ- ಸಕ್ರಮ ಯೋಜನೆಯನ್ನು ಮರು ಜಾರಿ ಮಾಡಬೇಕು. ರೈತರು ಹೊಸ ಕೃಷಿ ಪಂಪ್ ಸೆಟ್ ಗಳಿಗೆ ಸಂಪರ್ಕ ಪಡೆಯಬೇಕಾದರೆ 2- 3 ಲಕ್ಷ ರೂ. ಖರ್ಚಾಗುತ್ತದೆ. ತಕ್ಷಣ ಈ ನಿಯಮವನ್ನು ಕೈ ಬಿಟ್ಟು ರೈತರ ಕೃಷಿಗೆ ವಿದ್ಯುತ್ ನೀಡಬೇಕು ಎಂದು ಅವರು ಒತ್ತಾಯಿಸಿದರು.