ಕಾಂಗ್ರೆಸ್‌ ಪಕ್ಷವೇ ಕೋಮುವಾದಿ ಪಕ್ಷ

ಅಯೋಧ್ಯೆಯಲ್ಲಿ ‌ರಾಮಮಂದಿರ‌ ಉದ್ಘಾಟನಾ ಸಂದರ್ಭದಲ್ಲಿಯೇ ಕಾಂಗ್ರೆಸ್ ತನ್ನ ನಿಲುವು ಪ್ರದರ್ಶಿಸುವ ಮೂಲಕ‌ ಕೋಮುವಾದಕ್ಕೆ ಈಡಾಗಿದೆ.

KannadaprabhaNewsNetwork | Published : Apr 27, 2024 7:51 PM IST

ಧಾರವಾಡ

ಬಿಜೆಪಿ ಕೋಮುವಾದಿ ಪಕ್ಷ ಎಂದು ಕಾಂಗ್ರೆಸ್‌ ಆರೋಪ ಮಾಡುತ್ತಿದ್ದು ಅದು ಸುಳ್ಳು. ದೇಶದಲ್ಲಿ ಕಾಂಗ್ರೆಸ್ ಪಕ್ಷವೇ ಕೋಮುವಾದಿ ಪಕ್ಷದ ರೀತಿಯಲ್ಲಿ ಆಡುತ್ತಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಜ್ಯೋತಿಪ್ರಕಾಶ ಮಿರ್ಜಿ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ‌ರಾಮಮಂದಿರ‌ ಉದ್ಘಾಟನಾ ಸಂದರ್ಭದಲ್ಲಿಯೇ ಕಾಂಗ್ರೆಸ್ ತನ್ನ ನಿಲುವು ಪ್ರದರ್ಶಿಸುವ ಮೂಲಕ‌ ಕೋಮುವಾದಕ್ಕೆ ಈಡಾಗಿದೆ. ರಾಷ್ಟ್ರ‌ಮಟ್ಟದಲ್ಲಿ‌ ಎನ್‌ಡಿಎಗೆ‌ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಆಗಿದ್ದಾರೆ. ಆದರೆ, ಕಾಂಗ್ರೆಸ್ ‌ನೇತೃತ್ವದ‌ ಐಎನ್‌ಡಿಐಎ ಒಕ್ಕೂಟದಲ್ಲಿ ಯಾವುದೇ ಒಗ್ಗಟ್ಟು ಕಾಣಿಸುತ್ತಿಲ್ಲ. ಅಲ್ಲದೆ ‌ಪ್ರಧಾನಿ ಅಭ್ಯರ್ಥಿ ಯಾರು ಎಂದು ಘೋಷಿಸಲು‌ ಸಾಧ್ಯವಾಗಿಲ್ಲ. ಪ್ರತ್ಯೇಕವಾಗಿ ‌ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುವ ಮುಖಾಂತರ ಭಿನ್ನ ಮಾರ್ಗದಲ್ಲಿ‌ ಸಾಗುತ್ತಿವೆ. ಇತ್ತ‌ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದೆ‌ ಎಂದರು.

ದೇಶದ ಸುರಕ್ಷತೆಯ ಸಾಧನೆ, ಜಾಗತಿಕ ಮಟ್ಟದಲ್ಲಿ ಮುಂದಾಳತ್ವ ವಹಿಸುತ್ತಿದೆ ಬಿಜೆಪಿ. ಲೋಕಸಭಾ ಚುನಾವಣೆಯಲ್ಲಿ ಯೋಗ್ಯ ಅಭ್ಯರ್ಥಿಯನ್ನು ಮತ್ತು ಪಕ್ಷವನ್ನು ಬೆಂಬಲಿಸಬೇಕು. ಕ್ಷೇತ್ರದಲ್ಲಿ ಅಭಿವೃದ್ಧಿ ಕೈಕೊಂಡಿರುವ ಪ್ರಹ್ಲಾದ ಜೋಶಿ‌ ಅವರು ಸಮರ್ಥ ಸಂಸದರಾಗಲಿದ್ದಾರೆ. ಅನುಭವಿ ಮತ್ತು ಶುದ್ಧ ಚಾರಿತ್ರ್ಯ‌ ಹೊಂದಿರುವ ಪ್ರತಿನಿಧಿ ಆಗಲಿದ್ದಾರೆ. ಅನನುಭವಿ ಅಭ್ಯರ್ಥಿಗಳನ್ನು ಆಯ್ಕೆ ಮಾಡದೇ ಬಿಜೆಪಿಯ‌ ಅಭ್ಯರ್ಥಿ, ಹಾಲಿ ಕೇಂದ್ರ ಸಚಿವ ಪ್ರಹ್ಲಾದ ‌ಜೋಶಿ ಆವರನ್ನು ಹೆಚ್ಚು‌ ಮತಗಳ ಅಂತರದಿಂದ ಗೆಲ್ಲಿಸಬೇಕು ಮನವಿ ಮಾಡಿದರು.

ಜೆಡಿಎಸ್ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಶಿಮರದ, ಬಿ.ಬಿ. ಗಂಗಾಧರಮಠ, ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮುಖಂಡರಾದ ಚಿದಂಬರ ನಾಡಗೌಡರ, ಮಂಜುನಾಥ ಹಗೇದಾರ ಇದ್ದರು. ಸಿಎಂ-ಗೃಹ ಸಚಿವರ ಹೇಳಿಕೆ ಸರಿಯಲ್ಲ

ನೇಹಾ ಹಿರೇಮಠ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಮತ್ತು‌ ಗೃಹ‌ ಸಚಿವರು ನೀಡಿದ‌ ಹೇಳಿಕೆಗಳು ಸರಿಯಲ್ಲ. ಇಲ್ಲಿಯ ಪೊಲೀಸರು ಸಮರ್ಥರಿದ್ದಾರೆ. ರಾಜಕೀಯ‌ ಹೇಳಿಕೆ ನೀಡುವ ಮೂಲಕ‌ ತಪ್ಪು ಮಾಡಬಾರದು. ಪ್ರಕರಣದ ತನಿಖಾ‌ ಹಂತದಲ್ಲಿ ಇರುವಾಗ, ಅಧಿಕಾರಿಗಳು ತನಿಖೆಯಲ್ಲಿ ತೊಡಗಿರುವಾಗ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಅಂತಹ ಹೇಳಿಕೆ ನೀಡಬಾರದು‌ ಎಂದು‌ ಮಾಜಿ ಪೊಲೀಸ್ ಅಧಿಕಾರಿಯೂ ಆದ ಮಿರ್ಜಿ ಹೇಳಿದರು.

Share this article