ಕನ್ನಡಪ್ರಭ ವಾರ್ತೆ ಕಮಲಾಪುರ
ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಕೈಗೆ ಸಿಕ್ಕಿ ಈಗ ಅದು ಖರ್ಗೆ ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿ ಕಾರ್ಯಾಚರಿಸುತ್ತಿದೆ ಎಂದು ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ಆರೋಪಿಸಿದ್ದಾರೆ.ಕಮಲಾಪುರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ, ಇಡೀ ಕಾಂಗ್ರೆಸ್ ಪಕ್ಷವನ್ನು ತಮ್ಮ ಸ್ವಂತ ಕಂಪನಿಯಾಗಿ ಖರ್ಗೆ ಕುಟುಂಬ ಬಳಸಿಕೊಳ್ಳುತ್ತಿದೆ ಎಂದರು.
ಅಪ್ಪ ಎಐಸಿಸಿ ಅಧ್ಯಕ್ಷರು, ಮಗ ಮೊದಲ ಬಾರಿಗೆ ಗೆದ್ದು ಸಚಿವನಾಗಿದ್ದು ಎರಡನೇ ಬಾರಿಗೆ ಸಮಾಜ ಕಲ್ಯಾಣ ಸಚಿವರಾದರು. ಮೂರನೇ ಬಾರಿ ಪಂಚಾಯತ್ ರಾಜ್ ಖಾತೆಯ ಸಚಿವರಾಗಿ ಮೊದಲಿನ ಸಾಲಿನಲ್ಲಿ ನಿಂತು ಪ್ರಮಾಣ ವಚನ ಸ್ವೀಕರಿಸಿದರು. ಈಗ ಅಳಿಯನಿಗೆ ಟಿಕೆಟ್ ನೀಡಿ ಎಂಪಿ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್‌ನಲ್ಲಿ ಸ್ಪರ್ಧಿಸಲು ಇನ್ನು ಯಾವುದೇ ದಲಿತ ಅಥವಾ ಬಂಜಾರ ಸಮುದಾಯದವರು ಅಭ್ಯರ್ಥಿಯಾಗಿ ಇವರಿಗೆ ಸಿಗಲಿಲ್ಲವೇ? ಎಂದರು.ಎರಡನೇ ಹಂತದ ನಾಯಕರನ್ನು ಬೆಳೆಸುವ ಆಸಕ್ತಿ ಖರ್ಗೆ ಕುಟುಂಬಕ್ಕೆ ಇಲ್ಲವಾಗಿ ಹೋಗಿದೆ. ಕಾಂಗ್ರೆಸ್ ರಾಜಕೀಯ ಬಂಡವಾಳ ಹೂಡಿಕೆಯನ್ನು ಬೇರೆಯವರ ಬದಲಾಗಿ ತಮ್ಮ ಮಕ್ಕಳು, ಅಳಿಯಂದಿರ ಮೇಲೆ ಮಾಡುತ್ತಿದೆ ಎಂದರು.
ಕಲಬುರಗಿ ಮತಕ್ಷೇತ್ರದ ಬಗ್ಗೆ ಈಗಾಗಲೇ ಅನೇಕ ಚುನಾವಣಾ ಪೂರ್ವ ವರದಿಗಳಲ್ಲಿ ಬಿಜೆಪಿಯ ಗೆಲುವು ಶತಸಿದ್ಧ ಎಂದು ಹೇಳಲಾಗಿದೆ. ಕಾಂಗ್ರೆಸ್ಸಿನ ಗುಂಡಾಗಿರಿಯಿಂದ ಮತದಾರರನ್ನು ಭಯಭೀತರನ್ನಾಗಿಸಿ ಮತ ಚಲಾಯಿಸಿದಂತೆ ನೋಡಿಕೊಳ್ಳುವ ಪ್ರವೃತ್ತಿಯ ವಿರುದ್ಧ ಜನ ಎಚ್ಚೆತ್ತು ಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.ಖರ್ಗೆ ಲಿಮಿಟೆಡ್ ಕಂಪನಿ ಮತ್ತು ಕಾಂಗ್ರೆಸ್ ಈ ಚುನಾವಣೆಯ ನಂತರ ಮುಗ್ಗರಿಸುವುದು ಖಚಿತವಾಗಿದ್ದು ಮುಂದೆ ಕಾಂಗ್ರೆಸ್ ತಲೆ ಎತ್ತುವುದಿಲ್ಲ. ದಲಿತರ ಸಂರಕ್ಷಕರೆಂದು ಸುಳ್ಳು ಹೇಳುವ ಕಾಂಗ್ರೆಸ್ ಅಂಬೇಡ್ಕರ್‌ಗೆ ಹಲವು ಬಾರಿ ಅಪಮಾನ ಮಾಡಿದ ಪಕ್ಷವಾಗಿದೆ ಎಂದರು.
ಅಂಬೇಡ್ಕರ್‌ಗೆ ಸೇರಿದ ಪಂಚ ತೀರ್ಥಗಳೆಂದು ಕರೆಯಲ್ಪಡುವ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಿದ್ದು ನರೇಂದ್ರ ಮೋದಿ. ಇಂತಹ ಹೀನ ಮನಸ್ಸಿನ ಕಾಂಗ್ರೆಸ್‌ನ ಬಗ್ಗೆ ಅಂಬೇಡ್ಕರ್ ಅವರು ‘ಕಾಂಗ್ರೆಸ್ ಸುಡುವ ಮನೆ’ (ಕಾಂಗ್ರೆಸ್ ಈಸ್ ಬರ್ನಿಂಗ್ ಹೌಸ್) ಅದನ್ನು ಬಿಟ್ಟು ಹೊರಬನ್ನಿ ಎಂದು ಕರೆ ನೀಡಿದ್ದರು.ಜಾಧವ್‌ಗೆ ಓಟು ಮೋದಿಗೆ ಗೆಲುವು: ಮತ್ತಿಮುಡು
ಈ ಬಾರಿಯ ಚುನಾವಣೆಯಲ್ಲಿ ಕಲಬುರಗಿ ಮತಕ್ಷೇತ್ರದಲ್ಲಿ ಡಾಕ್ಟರ್ ಉಮೇಶ್ ಜಾದವ್ ಅವರಿಗೆ ಮತದಾರರು ಒಂದೊಂದು ವೋಟನ್ನು ಹಾಕುವುದರ ಮೂಲಕ ಮೋದಿಯವರ ಗೆಲುವಿಗೆ ಕಾರಣರ ಕರ್ತರಾಗಬೇಕು ಎಂದು ಶಾಸಕ ಬಸವರಾಜ್ ಮತ್ತಿಮಡು ಹೇಳಿದರು.ಕಾಂಗ್ರೆಸ್‌ನ ಸುಳ್ಳು ಗ್ಯಾರಂಟಿಗಳಿಂದ ಕಲಬುರಗಿ ಗ್ರಾಮೀಣ ಮತ ಕ್ಷೇತ್ರದ ಜನರು ಮರುಳಾಗದೆ ಸುಮಾರು 13 ಸಾವಿರ ಮತಗಳಿಂದ ಶಾಸಕನನ್ನಾಗಿ ಆಯ್ಕೆ ಮಾಡಿದ್ದು, ಈ ಬಾರಿ ಹೆಚ್ಚಿನ ಮುನ್ನಡೆಯೊಂದಿಗೆ ಬಿಜೆಪಿಯನ್ನು ಗೆಲ್ಲಿಸಿಕೊಡಲು ಕ್ಷೇತ್ರದ ಜನರು ಸಿದ್ಧರಾಗಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ 20,000 ಮತಗಳ ಮುನ್ನಡೆಯನ್ನು ನೀಡಿದ್ದ ಮತದಾರರು ಮೂರನೇ ಬಾರಿಗೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಜಾಧವರನ್ನ ಗೆಲ್ಲಿಸೋಣವೆಂದರು.
ಹನುಮಂತ ರಾವ್ ಮಾಲಾಜಿ, ಸಂಗಮೇಶ್ ವಾಲಿ ಮಲ್ಲಿನಾಥ ಪಾಟೀಲ್ ರೇವಣಪ್ಪ ಸಾಹುಕಾರ್, ಸಿದ್ದಣ್ಣಗೌಡ, ಶಶಿಕಲಾ ಟೆಂಗಳಿ, ರಾಜಕುಮಾರ್ ಪಾಕಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಣ್ಣಾ ರಾವ್ ಮತ್ತು ಹಣಮಂತ ಬಿರಾದರ್ ಮತ್ತಿತರರು ಇದ್ದರು.