ಅಧಿಕ ರಸಗೊಬ್ಬರ ಬಳಕೆ ಮಾಡಬೇಡಿ: ನ್ಯಾ.ಕಾಂಬ್ಳೆ

ಸಿಂಧನೂರು ತಾಲೂಕಿನ ಗೊರೇಬಾಳ ಗ್ರಾಮದ ಚರ್ಚ್ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಪ್ರಧಾನ ಸಿವಿಲ್ ನ್ಯಾಯಾಧೀಶ ಕೋಟೆಪ್ಪ ಕಾಂಬ್ಳೆ ಮಾತನಾಡಿದರು.

KannadaprabhaNewsNetwork | Published : Apr 25, 2024 7:18 PM IST

ಕನ್ನಡಪ್ರಭ ವಾರ್ತೆ ಸಿಂಧನೂರು

ರೈತಾಪಿ ವರ್ಗವು ಭೂಮಿಯಲ್ಲಿ ಬೆಳೆದ ಬೆಳೆಗಳಿಗೆ ಕ್ರಿಮಿನಾಶಕ, ರಸಗೊಬ್ಬರ ಹೆಚ್ಚು ಬಳಸುತ್ತಿರುವುದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗಲು ಕಾರಣವಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಕೋಟೆಪ್ಪ ಕಾಂಬ್ಳೆ ಹೇಳಿದರು.

ತಾಲೂಕಿನ ಗೊರೇಬಾಳ ಗ್ರಾಮದ ಚರ್ಚ್ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಎಚ್.ಮರಿಯಪ್ಪ ಹೆಡಗಿಬಾಳ ಚಾರಿಟೇಬಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ಭೂ ಸಂರಕ್ಷಣಾ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿಂದಿನ ದಿನಮಾನದಲ್ಲಿ ತಿಪ್ಪೆಯ ಗೊಬ್ಬರ ಭೂಮಿಗೆ ಹಾಕುವ ಮೂಲಕ ಉತ್ತಮ ಇಳುವರಿ ಪಡೆಯುತ್ತಿದ್ದರು. ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯುತ್ತಿದ್ದರು. ಅದರಂತೆ ಸಾವಯವ ಕೃಷಿಗೆ ರೈತರು ಒತ್ತು ನೀಡಬೇಕು ಎಂದು ಹೇಳಿದರು.

ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಆನಂದಪ್ಪ ಎಂ ಮಾತನಾಡಿ, ಯಾವುದೇ ವ್ಯವಹಾರ ಮಾಡಿದರೂ ಅದು ಕಾನೂನು ಪ್ರಕಾರ ಇರಬೇಕು. ಆಗ ಮಾತ್ರ ನಿಮಗೆ ಒಳ್ಳೆಯದು ಆಗುತ್ತದೆ ಎಂದರು.

ವೆಂಕಟಗಿರಿ ಕ್ಯಾಂಪಿನ ಸಿದ್ದಾಶ್ರಮದ ಸಿದ್ದರಾಮ ಶರಣರು ಮಾತನಾಡಿ, ಆಹಾರದಲ್ಲಿ ಪೌಷ್ಠಿಕತೆ ಕೊರತೆಯಿಂದ ಮಕ್ಕಳಿಗೂ ಕೂಡ ಶುಗರ, ಬಿಪಿ ಕಾಯಿಲೆಗಳು ಬರುತ್ತಿವೆ. ಈ ಹಿಂದೆ ರಾಗಿ, ಮುದ್ದೆ, ರೊಟ್ಟಿ ಊಟ ಮಾಡಿದವರಿಗೆ ಯಾವುದೇ ರೋಗ ಇರಲಿಲ್ಲ ಎಂದು ಹೇಳಿದರು.

ಭೂ ಸಂರಕ್ಷಣಾ ಕುರಿತು ದಿನಾಚರಣೆ ಕುರಿತು ಜೆ.ರಾಯಪ್ಪ ವಕೀಲರು ಉಪನ್ಯಾಸ ನೀಡಿದರು. ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಆಚಪ್ಪ ದೊಡ್ಡಬಸವರಾಜ, ಕ್ರೈಸ್ತ ಧರ್ಮಗುರು ಫಾಸ್ಟರ್ ವಿಜಯಕುಮಾರ, ಎಎಸ್ಐ ದಾವಲಸಾಬ, ಗ್ರಾ.ಪಂ ಅಧ್ಯಕ್ಷೆ ಬಸಮ್ಮ, ವಕೀಲರ ಸಂಘ ಖಜಾಂಚಿ ಶರಣಬಸವ ಉಮಲೂಟಿ, ಎಂ.ಆನಂದಕುಮಾರ ವಕೀಲ, ಯೇಸುದಾಸಪ್ಪ ಇದ್ದರು. ಎಚ್.ಮರಿಯಪ್ಪ ವಕೀಲ ಪ್ರಾಸ್ತಾವಿಕ ಮಾತನಾಡಿದರು. ಶಿವಕುಮಾರ ವಕೀಲ ಪ್ರಾರ್ಥಿಸಿದರು. ವೀರಭದ್ರಗೌಡ ಸಾಲ್ಗುಂದ ವಕೀಲ ನಿರೂಪಿಸಿದರು.

Share this article