ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯ ಮಹಾಕೂಟದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಸ್ಲಿಂ ಲೀಗ್ ನ ಮುಖ್ಯಸ್ಥನಾಗಿದ್ದು, ಇವರು ಮಹಮ್ಮದ್ ಅಲಿ ಜಿನ್ನಾ ಇದ್ದಂತೆ ಎಂದು ವಾಗ್ದಾಳಿ ನಡೆಸಿದರು.
ಮುಸ್ಲಿಂ ಲೀಗ್ ನವರು ಪ್ರತ್ಯೇಕ ಬಜೆಟ್ ಕೇಳ್ತಿದ್ದಾರೆ. ಪ್ರತ್ಯೇಕ ಅಂದ್ರೆ ಇದ್ರ ಏನರ್ಥ? ಬಾಂಗ್ಲಾ ನುಸುಳುಕೋರರ ಬಗ್ಗೆ ಮಾತಾಡಲ್ಲ. ಡಿಕೆಶಿಯವರು ಅವರು ನಮ್ಮ ಬ್ರದರ್ಸ್ ಅಂತಾರೆ. ಅವರಿಗೆ ಇವರು ಹೇಗೆ ಬ್ರದರ್ಸ್ ಆಗ್ತಾರೆ ಗೊತ್ತಿಲ್ಲ. ರಾಹುಲ್ ಗಾಂಧಿ ಅಪ್ರಭುದ್ಧ ಪಾರ್ಟ್ ಟೈಂ ರಾಜಕಾರಿಣಿ. ಯಾವುದೇ ವಿಷಯದ ಬಗ್ಗೆ ಗಂಭೀರತೆ ಇಲ್ಲದ ನಾಯಕ. ಅವನ ಮಾತು ಕೇಳಿ ಸಿದ್ದರಾಮಯ್ಯ ನಡೆದರೆ ಹೇಗೆ? ದೇಶದಲ್ಲಿ ಕಾಂಗ್ರೆಸ್ ನಶಿಸಿ ಹೋಗ್ತಿದೆ, ಕರ್ನಾಟಕದಲ್ಲೂ ಸಹ ನೆಲಕಚ್ಚಲಿದೆ ಎಂದು ಪ್ರಹ್ಲಾದ ಜೋಷಿ ಭವಿಷ್ಯ ನುಡಿದರು.ಕಾಂಗ್ರೆಸ್ ನವರು ಶುದ್ಧ ಅಯೋಗ್ಯರು:ರಾಹುಲ್ ಗಾಂಧಿ ಅಂತವರ ಮಾತು ಕೇಳಿ ಇವರೆಲ್ಲ ಕುಣಿದಾಡ್ತಾರೆ. ರಾಹುಲ್ ಗಾಂಧಿಗೆ ಬುದ್ಧಿ ಇಲ್ಲ, ಬುದ್ಧಿ ಇಲ್ಲದವನ ಮಾತು ಕೇಳಿ ಕಾಂಗ್ರೆಸ್ ಪರಿಸ್ಥಿತಿ ಹೀಗಾಗಿದೆ. ಕೆಲವರು ವೈಯಕ್ತಿಕವಾಗಿ ಭೇಟಿಯಾದಾಗ ಪಕ್ಷಕ್ಕೆ ರಾಹುಲ್ ಗಾಂಧಿ ಅಂಥವರು ಲೀಡರ್ ಸಿಕ್ಕಿದ್ದು ನಮ್ಮ ದುರ್ದೈವ. ಇಂತವರನ್ನು ಇಟ್ಟುಕೊಂಡೇ ನಮ್ಮ ಪಕ್ಷದ ಹಣೆಬರಹ ಹೀಗಾಗಿದೆ ಎಂದು ಹೇಳಿಕೊಳ್ಳುತ್ತಾರೆ ಎಂದು ಲೇವಡಿ ಮಾಡಿದರು.
ರಾಜ್ಯದಲ್ಲಿ ಹಿಜಾಬ್ ಗೆ ಪರವಾನಗಿ ನೀಡಿರುವ ವಿಚಾರ ಪ್ರಸ್ತಾಪಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರು, ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಯಾವುದಾದ್ರೂ ಒಂದು ಹೊಸ ವಿಷಯ ಹುಡುಕುತ್ತಿರುತ್ತದೆ. ಈಗ ಹಿಜಾಬ್ ವಿಷಯ ಹುಡುಕಿದೆ. ಅಧಿಕಾರ ಹೋಗುತ್ತೆ ಎಂಬ ಭಯದಲ್ಲಿ ಮುಸ್ಲಿಮರಿಗೆ ಬೆದರಿಕೆ ತಂತ್ರ ಹೂಡಿ, ಬೇಡಿಕೆ ಪಟ್ಟಿ ಸಲ್ಲಿಸಿದ್ದಾರೆ. ಸಿದ್ದರಾಮಯ್ಯನವರೇ, ರಾಹುಲ್ ಗಾಂಧಿ ಮಾತು ಕೇಳಿ, ಈ ರೀತಿಯ ನಿರ್ಣಯ ತಗೆದುಕೊಂಡ್ರೆ ಕಾಂಗ್ರೆಸ್ ಪಕ್ಷವನ್ನ ಮುಸ್ಲಿಂ ಲೀಗ್ ಎನ್ನಬೇಕಾಗುತ್ತದೆ ಎಂದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರು, ಎರಡು ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಸಚಿವ ಧರ್ಮೇಂದ್ರ ಪ್ರಧಾನ್ ಅವರು ಈ ಬಗ್ಗೆ ಡೀಟೇಲ್ ಆಗಿ ಮಾತನಾಡಿದ್ದಾರೆ. ಜಗತ್ತಿನ ದೊಡ್ಡ ಪರೀಕ್ಷಾ ವ್ಯವಸ್ಥೆ ನೀಟ್. 23 ರಿಂದ 24 ಲಕ್ಷ ಜನ ಬರೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಆನ್ ಲೈನ್ ಮಾಡುತ್ತೇವೆ. ಆದಷ್ಟು ಬೇಗ ಮರುಪರೀಕ್ಷೆ ಮಾಡುತ್ತೇವೆ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನಾನು ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ. ಪರೀಕ್ಷೆ ಮುಂದೆ ಹಾಕಿದರೆ ಸೀಟ್ ಸಿಗೋದಿಲ್ಲವೆಂದು ತಿಳಿದುಕೊಳ್ಳಬಾರದು, ಮುಂದಿನ ವ್ಯವಸ್ಥೆಯಲ್ಲಿ ಪರೀಕ್ಷೆ ನಡೆಸಿ ಸೀಟ್ ಕೊಡ್ತೇವೆ. ಪ್ರತಿಭಾವಂತರಿಗೆ ಅನ್ಯಾಯವಾಗಬಾರದೆಂದು ಕ್ರಮ ಕೈಗೊಂಡಿದ್ದೇವೆ, ಇಲ್ಲವಾದರೆ ಇದು ಅಲ್ಲಿಯೇ ಮುಚ್ಚಿ ಹೋಗಬಹುದಿತ್ತು, ಆ ರೀತಿ ಮಾಡಿಲ್ಲ, ಮುಂದಿನ ಸಾರಿ ವ್ಯವಸ್ಥೆಯನ್ನು ಸಂಪೂರ್ಣ ಬದಲಿಸುತ್ತೇವೆ ಎಂದು ಮನವಿ ಮಾಡಿದರು.