ಕನ್ನಡಪ್ರಭ ವಾರ್ತೆ ಮಳವಳ್ಳಿ
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ತುಂಬಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕರೆ ನೀಡಿದರು.ಪಟ್ಟಣದ ಸುಲ್ತಾನ್ ರಸ್ತೆ ಕಾಂಗ್ರೆಸ್ ಪಕ್ಷದ ನಿವೇಶನದಲ್ಲಿ ನಡೆದ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಹಾಗೂ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದರು.
ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸಿದರೆ ಸರ್ಕಾರದಿಂದ ಮತ್ತಷ್ಟು ಅನುದಾನ ತರಲು ಸಹಾಯವಾಗಲಿದೆ. ಈಗಿನಿಂದಲೇ ಪಕ್ಷ ಸಂಘಟನೆಗೆ ಮುಂದಾಗಿ ಮಳವಳ್ಳಿ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ ಎನ್ನುವುದನ್ನು ಸಾಬೀತು ಪಡಿಸಬೇಕೆಂದು ಮನವಿ ಮಾಡಿದರು.ತಾಲೂಕಿನಲ್ಲಿ ಪಿಎಲ್‌ಡಿ ಬ್ಯಾಂಕ್ ಚುನಾವಣೆ ಹೊರತುಪಡಿಸಿ ಸಹಕಾರಿ ಸಂಸ್ಥೆ ಹಾಗೂ ಹಾಲು ಒಕ್ಕೂಟದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಪಾರಮ್ಯ ಮೆರೆದಿದ್ದಾರೆ. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಕಾರ್ಯಕರ್ತರ ಚುನಾವಣೆಯಾಗಿರುವ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಆದ್ಯತೆ ನೀಡಲು ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಸೂಚಿಸಿದ ಹಿನ್ನೆಲೆಯಲ್ಲಿ ಎಲ್ಲಾ ತಾಲೂಕಿನಲ್ಲಿ ಸಭೆ ನಡೆಯುತ್ತಿದೆ ಎಂದರು.
ತಾಲೂಕಿನ ಏಳು ಜಿಪಂ ಕ್ಷೇತ್ರಗಳಲ್ಲಿ ಹಾಗೂ ಶೇ.80ರಷ್ಟು ತಾಪಂ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದರೇ ನನ್ನ ಸ್ವಂತ ಖರ್ಚಿನಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಿ ಕಾರ್ಯಕರ್ತರು ಹಾಗೂ ಮುಖಂಡರಿಗೆ ಊಟ ಹಾಕಿಸಿ ಕೃತಜ್ಞತೆ ಸಲ್ಲಿಸಲಾಗುವುದು ಎಂದರು.ಜಿಲ್ಲೆಯ ರೈತರ 21 ಸಾವಿರ ಕಂದಾಯ ಪ್ರಕರಣಗಳಲ್ಲಿ 20 ಸಾವಿರ ಪ್ರಕರಣಗಳನ್ನು ಮುಕ್ತಾಯಗೊಳಿಸಿ ರೈತರ ಅಲೆದಾಟ ತಪ್ಪಿಸಲಾಗಿದೆ. ಲೀಟರ್ ಹಾಲಿಗೆ ನಾಲ್ಕು ರು. ಹೆಚ್ಚಳ ಮಾಡಿ ರೈತರಿಗೆ ನೀಡಲಾಗಿದೆ. ಹಿಂದಿನ ಸರ್ಕಾರದ ಪ್ರೋತ್ಸಾಹ ಧನದ ಬಾಕಿ ತೀರಿಸಲಾಗಿದೆ. ವಿ.ಸಿ.ನಾಲೆ ಕಡೆ ಭಾಗಗಳಾದ ಮಳವಳ್ಳಿ ಹಾಗೂ ಮದ್ದೂರು ನಾಲಾ ಆಧುನೀಕರಣಕ್ಕೆ ಆಗತ್ಯ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ವಿವರಿಸಿದರು.
ರಾಜ್ಯ ಸಭಾ ಸದಸ್ಯ ಜಿ.ಸಿ ಚಂದ್ರಶೇಖರ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಕಾರ್ಯಕರ್ತರ ಮೂಲಕ ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಸರ್ಕಾರದ ನಡೆ ಕಾರ್ಯಕರ್ತರ ಕಡೆ ಎಂಬ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದರು.ಮಂಡ್ಯ ಅಭಿವೃದ್ಧಿಯತ್ತ ಸಾಗುತ್ತಿದೆ ಎನ್ನುವುದು ರಾಜ್ಯಕ್ಕೆ ತಿಳಿಯಬೇಕು. ಸರ್ಕಾರದಿಂದ ಜಿಲ್ಲೆಗೆ ಬಂದ ಅನುದಾನದಲ್ಲಿ ಎಷ್ಟು ಅಭಿವೃದ್ಧಿಯಾಗಿದೆ ಎನ್ನುವುದನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಬೇಕು. ಜತ್ಯಾತೀತ ಪಕ್ಷ ಎಂದುಕೊಂಡಿದ್ದ ಜೆಡಿಎಸ್ ಕೋಮುವಾದಿ ಪಕ್ಷಕ್ಕೆ ಸೇರ್ಪಡೆಯಾಗಿರುವುದರಿಂದ ಮೈತ್ರಿ ಪಕ್ಷವನ್ನು ಸೋಲಿಸಲು ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮುಂದಾಗಬೇಕು ಎಂದು ಕರೆ ನೀಡಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ ನರೇಂದ್ರಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿ.ಜಿ ಪುರ ಹೋಬಳಿ ಜನರಿಗೆ ನೆರೆವಾಗುವ ಸದ್ದುದ್ದೇಶದಿಂದ ಜಾರಿಗೊಳಿಸಿರುವ ಹನಿ ನೀರಾವರಿ ಯೋಜನೆಯಿಂದ ಈಗಾಗಲೆ ಆ ಭಾಗದ ಕೆರೆ ಕಟ್ಟೆಗಳು ಭರ್ತಿಯಾಗಿವೆ. ಕೆಲವೇ ದಿನಗಳಲ್ಲಿ ಪೂರಿಗಾಲಿ ಹನಿ ನೀರಾವರಿ ಚಾಲನೆ ಸಿಗಲಿದೆ ಎಂದರು.ತಾಲೂಕಿನಾಧ್ಯಂತ ಕುಡಿಯುವ ನೀರು ಪೂರೈಕೆ ಜೊತೆಗೆ ಏತ ನೀರಾವರಿ ಮೂಲಕ ಅಂತರ್ಜಲ ವೃದ್ದಿಸಲಾಗುತ್ತಿದೆ. ಸರ್ಕಾರಿ ಶಾಲೆಗಳಿ ಡಿಜಿಟಲ್ ಸ್ಪರ್ಶ ನೀಡಲಾಗಿದೆ. ಕಿರುಗಾವಲು ಬಹು ಹಳ್ಳಿಗಳ ಕುಡಿಯುವ ನೀರಿನ ಯೋಜನೆ ಸದ್ಯದಲ್ಲಿಯೇ ಚಾಲನೆ ಸಿಗಲಿದೆ ಎಂದರು.
ಹಿಂದಿನ ಅಧಿಕಾರದ ಅವಧಿಯಲ್ಲಿ ಒಂದು ಯೋಜನೆಯನ್ನು ತರದ ಮಾಜಿ ಶಾಸಕರು ಹನಿ ನೀರಾವರಿ ಬಗ್ಗೆ ಅಪ ಪ್ರಚಾರ ಮಾಡುತ್ತಾ ರೈತರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಈ ಅಭಿವೃದ್ದಿಗಳನ್ನು ಸಹಿಸಲಾಗದೇ ವ್ಯರ್ಥ ಆರೋಪ ಮಾಡುವವರಿಗೆ ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತಿರುಗೇಟು ನೀಡಬೇಕೆಂದು ಕರೆ ನೀಡಿದರು.ವೇದಿಕೆಯಲ್ಲಿ ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ದಿನೇಶ್ ಗೂಳೀಗೌಡ, ಮಾಜಿ ಶಾಸಕರಾದ ಮರಿತಿಬ್ಬೇಗೌಡ, ಎನ್ ಅಪ್ಪಾಜಿಗೌಡ, ಕೆ.ಬಿ.ಚಂದ್ರಶೇಖರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೊಡ್ಡಯ್ಯ, ಸಿ.ಪಿ.ರಾಜು, ಮನ್ಮುಲ್ ನಿರ್ದೇಶಕರಾದ ಕೃಷ್ಣೇಗೌಡ, ಆರ್.ಎನ್ ವಿಶ್ವಾಸ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಚಿಕ್ಕಲಿಂಗಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಸ್ ಶಿವಣ್ಣ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್, ಡಿಸಿಸಿ ಕಾರ್ಯಧ್ಯಕ್ಷ ಚಿದಂಬರ್ ಮುಖಂಡರಾದ ಬಾಲರಾಜು, ದೇವರಾಜು, ಸುಷ್ಮಾರಾಜು, ಸುಜಾತ ಕೆ.ಎಂ ಪುಟ್ಟು, ಕುಳ್ಳಚನ್ನಂಕಯ್ಯ ಸೇರಿದಂತೆ ಇತರರಿದ್ದರು.
ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬೆಂಬಲ ಸೂಚಿಸೋಣಪಾಕ್ ಪ್ರಚೋದಿತ ಉಗ್ರರು ಹಾಗೂ ಪಾಕ್ ಸೇನೆಯ ಉಪಟಳದಿಂದ ಮೃತರಾಗಿರುವ ಸೇನಾ ಯೋಧರು ಹಾಗೂ ನಾಗರೀಕರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.
ಇದೇ ವೇಳೆ ಮಾತನಾಡಿದ ಶಾಸಕ ಪಿ.ಎಂ ನರೇಂದ್ರಸ್ವಾಮಿ, ದೇಶದ ಏಕತೆ ಮತ್ತು ಸಮಗ್ರತೆಗೆ ದಕ್ಕೆ ಭಾರದಂತೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ನಾವೆಲ್ಲರೂ ಬೆಂಬಲಸೂಚಿಸೋಣ ಎಂದು ಕರೆ ನೀಡಿದರು.ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಮಾತನಾಡಿ, ಪಾಕ್ ಮತಾಂಧ ಶಕ್ತಿಗಳು ದೇಶದ ಮುಗ್ಧ ನಾಗರೀಕರ ಮೇಲೆ ನಡೆಸುತ್ತಿರುವ ದಾಳಿ ಹಿಮ್ಮೆಟ್ಟಿಸಲು ಕೇಂದ್ರ ಸರ್ಕಾರ ಕೈಗೊಳ್ಳುವ ನಿಧಾರಕ್ಕೆ ಎಐಸಿಸಿ ಮತ್ತು ಕೆಪಿಸಿಸಿ ಒಮ್ಮತದ ಬೆಂಬಲ ಸೂಚಿಸಿದೆ. ನಾವೆಲ್ಲರೂ ಪ್ರಧಾನಿ ಅವರ ನಿರ್ಧಾರಕ್ಕೆ ಬೆಂಬಲ ಸೂಚಿಸೋಣ ಎಂದು ಮನವಿ ಮಾಡಿದರು.