ವಿದ್ಯಾರ್ಥಿಗಳು ಮಾನವೀಯ ಗುಣ ಅಳವಡಿಸಿಕೊಳ್ಳುವುದು ಅಗತ್ಯ

KannadaprabhaNewsNetwork | Published : May 11, 2025 1:19 AM
Follow Us

ಸಾರಾಂಶ

ಚಿತ್ರದುರ್ಗ: ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಜೀವನದಲ್ಲಿ ಮಾನವೀಯತೆ ಅಳವಡಿಸಿಕೊಳ್ಳಬೇಕು ಎಂದು ಉಪ ವಿಭಾಗಾಧಿಕಾರಿ ಮಹಬೂಬ್ ಜಿಲಾನಿ ಖುರೇಷಿ ಹೇಳಿದರು.

ಚಿತ್ರದುರ್ಗ: ಪ್ರತಿಯೊಬ್ಬ ವಿದ್ಯಾರ್ಥಿ ತಮ್ಮ ಜೀವನದಲ್ಲಿ ಮಾನವೀಯತೆ ಅಳವಡಿಸಿಕೊಳ್ಳಬೇಕು ಎಂದು ಉಪ ವಿಭಾಗಾಧಿಕಾರಿ ಮಹಬೂಬ್ ಜಿಲಾನಿ ಖುರೇಷಿ ಹೇಳಿದರು. ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ವಿಶ್ವ ರೆಡ್‍ಕ್ರಾಸ್ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಎರಡು ದಿನದ ಪ್ರಥಮ ಚಿಕಿತ್ಸೆ ಮತ್ತು ವಿಪತ್ತು ನಿರ್ವಹಣಾ ತರಬೇತಿ ಕಾರ್ಯಾಗಾರ ಹಾಗೂ ಉಚಿತ ಶ್ರವಣ ಸಾಧನ, ವೀಲ್‍ಚೇರ್ ಮತ್ತು ಪ್ರಥಮ ಚಿಕಿತ್ಸಾ ಕಿಟ್‍ಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ಬಾರಿಯ ರೆಡ್‍ಕ್ರಾಸ್‍ನ ಘೋಷವಾಕ್ಯ ನಮ್ಮ ನಡಿಗೆ ಮಾನವೀಯತೆ ಕಡೆಗೆ ಎಂಬುದಾಗಿದ್ದು, ಪರಸ್ಪರ ಒಬ್ಬರ ಮೇಲೆ ಒಬ್ಬರು ಕರುಣೆ ತೋರಬೇಕು. ಕಷ್ಟದಲ್ಲಿರುವವರೆಗೂ ಸೇವೆ ಸಲ್ಲಿಸುವುದೇ ಮಾನವೀಯತೆಯಾಗಿದೆ. ಯುವ ಜನತೆ ದೇಶದ ಕಣ್ಣುಗಳಾಗಿದ್ದು, ತಮ್ಮ ಗುರಿಗಳನ್ನು ತಾವೇ ಮುಟ್ಟುವ ದೂರದೃಷ್ಟಿ ಹೊಂದಿರಬೇಕು. ಭವಿಷ್ಯದ ಬಗ್ಗೆ ತಾವು ಕಟ್ಟಿಕೊಂಡ ಕನಸುಗಳ ನನಸಾಗಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳ ಮುಂದುವರಿಸಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ಅದನ್ನು ಸಮಾಜದ ಒಳತಿಗಾಗಿ ವಿನಿಯೋಗಿಸಬೇಕೆಂದು ಕಿವಿಮಾತು ಹೇಳಿದರು. ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ರಾಜ್ಯ ಶಾಖೆಯ ಸಭಾಪತಿ ಬಸ್ರೂರ್ ರಾಜೀವ್ ಶೆಟ್ಟಿ ಮಾತನಾಡಿ, ಯುವಕರು ಸಾಕಷ್ಟು ಜವಾಬ್ದಾರಿಗಳೊಂದಿಗೆ ಸಾಗಬೇಕು. ದೇಶದಲ್ಲಿ ಶೇ.60ರಷ್ಟು ಯುವ ಜನತೆ ಇದ್ದಾರೆ. ಯುವ ಜನರು ದೇಶದ, ನಾಡಿನ ಜನರನ್ನು ಹೆಚ್ಚಿನ ಅಭಿಯಾನದಿಂದ ಕಾಣಬೇಕು ಎಂದರು. ಇದೇ ವೇಳೆ ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯಿಂದ ಸಾಂಕೇತಿಕವಾಗಿ ಶ್ರವಣ ಸಾಧನ ಮತ್ತು ವೀಲ್‍ಚೇರ್ ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು.

ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಚಿತ್ರದುರ್ಗ ಜಿಲ್ಲಾ ಶಾಖೆಯ ಸಭಾಪತಿ ಗಾಯತ್ರಿ ಶಿವರಾಮ್, ಸರ್ಕಾರಿ ವಿಜ್ಞಾನ ಕಾಲೇಜು ಪ್ರಾಂಶುಪಾಲ ಪ್ರೊ.ಸಿದ್ದರಾಮ ಚೆನ್ನಗೊಂಡ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ, ಪ್ರಥಮ ಚಿಕಿತ್ಸೆ ಮತ್ತು ವಿಪತ್ತು ನಿರ್ವಹಣೆ ರಾಷ್ಟ್ರಮಟ್ಟದ ತರಬೇತುದಾರ ಡಾ.ಕುಮಾರ್ ವಿ.ಎಲ್.ಎಸ್, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಸಹಾಯಕ ಕಾರ್ಯದರ್ಶಿ ಉಮಾಕಾಂತ್, ರಾಜ್ಯ ಮಂಡಳಿ ಸದಸ್ಯ ಎಂ.ಕೆ.ಅನಂತರೆಡ್ಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ಬಿ.ಎ.ಲಿಂಗಾರೆಡ್ಡಿ, ಸರ್ಕಾರಿ ವಿಜ್ಞಾನ ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಆರ್.ನಾಗೇಂದ್ರ ಬಾಬು, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಉಪ ಸಭಾಪತಿ ಈ.ಅರುಣ್ ಕುಮಾರ್, ಕಾರ್ಯದರ್ಶಿ ಎನ್.ಮಜಹರ್ ಉಲ್ಲಾ, ಖಜಾಂಚಿ ಎಸ್.ವೀರೇಶ್ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಇದ್ದರು.