ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಅಸಂವಿಧಾನಿಕ ಪದಗಳಲ್ಲಿ ನಿಂದಿಸಿ, ಅಗೌರವ ತೋರಿದ ಸಂಸದ ಅನಂತಕುಮಾರ್ ಹೆಗಡೆ ಹೇಳಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಅಣಕು ಶವಯಾತ್ರೆ ನಡೆಸಿ ಸಂಸದರ ಸ್ಥಾನದಿಂದ ವಜಾ ಮಾಡಿ ರಾಜ್ಯದಿಂದ ಗಡಿಪಾರು ಮಾಡಲು ಒತ್ತಾಯಿಸಿದರು.
ಇಲ್ಲಿನ ವಡಕರಾಯ ದೇವಸ್ಥಾನದಿಂದ ಆರಂಭವಾದ ಯಾತ್ರೆ ನಗರದ ವಿವಿಧ ವೃತ್ತಗಳಲ್ಲಿ ಸಂಚರಿಸಿ, ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಪುನೀತ್ ರಾಜ್‌ಕುಮಾರ ವೃತ್ತದಲ್ಲಿ ಸಂಸದರ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ಬಳಿಕ ತಹಸೀಲ್ದಾರ್ ಕಚೇರಿ ಎದುರು ಸಂಸದರ ಪ್ರತಿಕೃತಿಗೆ ಕಾರ್ಯಕರ್ತೆಯರು ಪೊರಕೆ ಸೇವೆ ನಡೆಸಿ, ಮೊಟ್ಟೆ ಒಡೆದರು.ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸಿರಾಜ್ ಶೇಖ್ ಅವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ರಾಜ್ಯದ ಮುಖ್ಯಮಂತ್ರಿಯವರು ಜನಪ್ರಿಯತೆ, ಜನಪರ ಕಾರ್ಯಕ್ರಮಗಳನ್ನು ನೀಡಿ ಜನರಿಗೆ ಹಲವಾರು ಯೋಜನೆಗಳನ್ನು ನೀಡಿ ಎಲ್ಲ ವರ್ಗದ ಜನರ ಸಲುವಾಗಿ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆವಹೇಳನ ಮಾಡಿ ರಾಜ್ಯದಲ್ಲಿ ಜಾತಿ, ಜಾತಿಗಳ ಮಧ್ಯೆ ವಿಷಬೀಜ ಬಿತ್ತುವ ಮೂಲಕ ಕೋಮುಗಲಭೆ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಹಿಂದೆ ಸಂವಿಧಾನ ವಿರೋಧಿ ಕೃತ್ಯ ಮಾಡಿ ಸಂವಿಧಾನ ಬದಲಾವಣೆಗೆ ನಾವು ಅಧಿಕಾರಕ್ಕೆ ಬಂದಿರುವುದು ಎಂದು ಹೇಳಿಕೆ ನೀಡಿದ್ದ ಈಗ ಮತ್ತೆ ಶಾಂತಿ, ನೆಮ್ಮದಿಗೆ ಧಕ್ಕೆ ತರುವ ಕೆಲಸ ಮಾಡುವ ಅನಂತಕುಮಾರ್ ಹೆಗಡೆ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ತಹಸೀಲ್ದಾರ್ ವಿಶ್ವಜಿತ್ ಮೆಹತಾರ ಮೂಲಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್‌ಗೆ ಮನವಿಪತ್ರ ರವಾನಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಕೆ.ಎಂ. ಹಾಲಪ್ಪ, ಪ್ರಧಾನ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಡಿ. ವೆಂಕಟರಮಣ, ಕಮಲಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಖಾಜಾ ಹುಸೇನ್, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಸೋಮಶೇಖರ್ ಬಣ್ಣದಮನೆ, ವಿಜಯನಗರ ಜಿಲ್ಲಾ ಹಾಲುಮತ ಒಕ್ಕೂಟದ ಅಧ್ಯಕ್ಷ ಕೆ. ರವಿಕುಮಾರ್, ನಗರಸಭೆ ಸದಸ್ಯರಾದ ಮಹಮ್ಮದ್ ಗೌಸ್, ಜಿ. ರಾಘವೇಂದ್ರ, ಮಂಜುನಾಥ, ಮುಖಂಡರಾದ ಎಚ್.ಜಿ. ವಿರೂಪಾಕ್ಷಿ, ಎಲ್. ಸಿದ್ದನಗೌಡ, ಸಂಗಪ್ಪ, ಎಚ್. ಮಹೇಶ್, ರಾಮಚಂದ್ರ ಗೌಡ, ಪ್ರದೀಪ್ ನಾಯಕ, ಮಂಜುನಾಥ ಯಾದವ್, ಪಿ. ವೀರಾಜನೇಯ, ಬಿ. ಮಾರೆಣ್ಣ, ಜಿ. ತಮ್ಮನ್ನೆಳ್ಳಪ್ಪ ಸಣ್ಣಮಾರೆಪ್ಪ, ಗೋಪಾಲ ಕೃಷ್ಣ, ಭರತ್ ಕುಮಾರ್, ಅಶೋಕ್, ಲಿಂಗಣ್ಣ ನಾಯಕ, ಎಲ್. ಸಂತೋಷ್, ಡಿ. ಶಿಲ್ಪಾ, ಯೋಗ ಲಕ್ಷ್ಮಿ, ಮಂಜುಳಾ, ಕವಿತಾ ನಾಯಕ, ಅಮೀನಮ್ಮ, ರಷೀದಾ ಮತ್ತಿತರರಿದ್ದರು.