ಕನ್ನಡಪ್ರಭ ವಾರ್ತೆ ಆನವಟ್ಟಿ
ಶುಕ್ರವಾರ ಸಚಿವರ ಕಚೇರಿಯಲ್ಲಿ ಮಹಾತ್ಮ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿ ಹುತಾತ್ಮ ದಿನದ ಶೋಕಾಚಾರಣೆ ಆಚರಿಸಿ, ನಂತರ ಕೇಂದ್ರ ಸರ್ಕಾರದ ನಡೆ ವಿರುದ್ಧ ಪ್ರತಿಭಟನೆ ಕೈಗೊಂಡರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಆನವಟ್ಟಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸದಾನಂದ ಗೌಡ ಬಿಳಗಲಿ ಮಾತನಾಡಿ, ಹಳ್ಳಿಗಳ ಉದ್ದಾರ, ಮಹಿಳೆಯರ ಸಬಲೀಕರಣ, ಸ್ಥಳೀಯ ಸಂಸ್ಥೆಯ ಬಲವರ್ಧನೆ, ಸಮಾನ ವೇತನ ಹೀಗೆ ಹತ್ತು ಹಲವು ಉದ್ದೇಶಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಪಕ್ಷದ ಅಡಳಿತಾವಧಿಯಲ್ಲಿ ಜಾರಿಗೆ ತಂದ ಮಹಾತ್ಮ ಗಾಂಧಿ ಹೆಸರಿನ ಮನರೇಗಾ ಯೋಜನೆಯ ಹೆಸರನ್ನು ಕೇಂದ್ರ ಸರ್ಕಾರ ಬದಲಾವಣೆ ಮಾಡಿ, ಹಳ್ಳಿಗಳ ಅಭಿವೃದ್ಧಿಗೆ ಮಾರಕವಾದ ಯೋಜನೆ ಸೃಷ್ಟಿಸಿ, ದ್ವೇಷ ಭಾವನೆ ಬೆಳಸುವ ಸಂಚು ಮಾಡಿರುವುದನ್ನು ನಾವು ಒಪ್ಪುವುದಿಲ್ಲ. ಕೂಡಲೇ ಮರುನಾಮಕರಣ ಉದ್ದೇಶವನ್ನು ಕೈಬಿಟ್ಟು ಮನರೇಗಾ ಯೋಜನೆಯನ್ನೇ ಮುಂದುವರೆಸಬೇಕು ಎಂದು ಅಗ್ರಹಿಸಿದರು.ಮನರೇಗಾ ಹೆಸರು ಬದಲಾಯಿಸದಂತೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿ, ನಂತರ ನಾಡ ಕಚೇರಿಯ ಉಪ ತಹಸೀಲ್ದಾರ್ ಶಿವ ಪ್ರಸಾದ್ ಅವರ ಮೂಲಕ, ಕೇಂದ್ರ ಸರ್ಕಾರಕ್ಕೆ ರವಾನಿಸುವಂತೆ ಕಾಂಗ್ರೆಸ್ ಮುಖಂಡರು ಮನವಿ ಸಲ್ಲಿಸಿದರು.
ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ ರುದ್ರಗೌಡ ಗಿಣಿವಾಲ, ವೀರೇಶ್ ಕೊಟಗಿ, ಮಧುಕೇಶ್ವರ ಪಾಟೀಲ್, ಶಿವಲಿಂಗೇಗೌಡ, ಸುರೇಶ್ ಹಾವಣ್ಣನವರ್, ಧರ್ಮನಾಯ್ಕ, ಬಸವಂತಪ್ಪ, ಪ್ರವೀಣ್ ಹಿರೇ ಇಡಗೋಡು ಅವರು ಕೇಂದ್ರ ಸರ್ಕಾರದ ನಡೆ ವಿರೋಧಿಸಿ ಮಾತನಾಡಿದರು.ಪ್ರತಿಭಟನೆಯಲ್ಲಿ ಮುಖಂಡರಾದ ಜರ್ಮಲೆ ಚಂದ್ರಶೇಖರ್, ಅನೀಶ್ ಪಾಟೀಲ್, ಸಂಜೀವ ತರಕಾರಿ, ಚಾಂದ್ ಸಾಬ್, ಅಜೀಂಸಾಬ್, ಓಂಕಾರಿ ನಾಯ್ಕ, ಶಿವಕುಮಾರ್ ತತ್ತೂರು, ಹರೀಶ್ ದಚ್ಚು, ಚಂದ್ರಪ್ಪ ವೃತ್ತಿಕೊಪ್ಪ, ವಿಜೇಂದ್ರ ಸ್ವಾಮಿ ಇದ್ದರು.