ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ಮೇಲೆ ಪ್ರಭಾವ ಬೀರಿ ಪಕ್ಷದ ರಾಷ್ಟ್ರೀಯ ನಾಯಕರ ಮೇಲೆ ಅನಗತ್ಯ ಆರೋಪ ಸೃಷ್ಟಿಸಿರುವುದು ಹಾಗೂ ಮನ್ರೇಗಾ ಹೆಸರು ಬದಲಾವಣೆಯನ್ನು ಖಂಡಿಸಿ ಗುರುವಾರ ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.
ಶಿವಮೊಗ್ಗ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ಮೇಲೆ ಪ್ರಭಾವ ಬೀರಿ ಪಕ್ಷದ ರಾಷ್ಟ್ರೀಯ ನಾಯಕರ ಮೇಲೆ ಅನಗತ್ಯ ಆರೋಪ ಸೃಷ್ಟಿಸಿರುವುದು ಹಾಗೂ ಮನ್ರೇಗಾ ಹೆಸರು ಬದಲಾವಣೆಯನ್ನು ಖಂಡಿಸಿ ಗುರುವಾರ ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.
ಜೈಲ್ ಸರ್ಕಲ್ (ದೈವಜ್ಞ ಸರ್ಕಲ್)ನಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಬಳಿಕ ಬೃಹತ್ ಸಂಖ್ಯೆಯಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ತೆರಳಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ವಶಕ್ಕೆ ಪಡೆದರು.ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿ ವಿರುದ್ಧ ಇಡಿ ದಾಖಲಿಸಿದ್ದ ಅಕ್ರಮ ಹಣ ವರ್ಗಾವಣೆಯ ದೂರು ಸ್ವೀಕರಿಸಲು ದೆಹಲಿಯ ನ್ಯಾಯಾಲಯವೇ ನಿರಾಕರಿಸಿದೆ. ಇದನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜಕೀಯ ಕಾರಣಕ್ಕಾಗಿ ನಮ್ಮ ನಾಯಕರ ಮೇಲೆ ಪ್ರಕರಣ ದಾಖಲಿಸಿರುವುದು ಖಂಡನೀಯ. ಬಿಜೆಪಿ ಉದ್ದೇಶಪೂರ್ವಕವಾಗಿ ಗಾಂಧಿ ಕುಟುಂಬಕ್ಕೆ ಕಿರುಕುಳ ನೀಡುವುದು ಮತ್ತು ವಿಪಕ್ಷಗಳನ್ನು ಗುರಿಯಾಗಿಸುತ್ತಿದೆ. ಇದು ಸೇಡಿನ ಪ್ರಕರಣವಾಗಿದೆ ಎಂದು ಆರೋಪಿಸಿದರು.ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ವಿರೋಧ ಪಕ್ಷಗಳನ್ನು ನಿರಂತರವಾಗಿ ಗುರಿಯನ್ನಾಗಿಸಿಕೊಳ್ಳುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ನಮ್ಮ ಆಕ್ರೋಶವಿದ್ದು ಇದನ್ನು ನಾವು ಬಯಲು ಮಾಡುತ್ತೇವೆ ಎಂದು ತಿಳಿಸಿದರು.
ಅಲ್ಲದೆ ನರೇಗಾ ಯೋಜನೆಯ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಲು ಹೊರಟಿರುವುದು ಸರಿಯಲ್ಲ, ಇದು ಮಹಾತ್ಮ ಗಾಂಧೀಜಿಯವರ ಬಗೆಗಿನ ತಮ್ಮ ದ್ವೇಷವನ್ನು ತಾವೇ ಬಯಲು ಮಾಡಿಕೊಂಡಂತೆ ಆಗುತ್ತದೆ. ಯಾವುದೇ ಕಾರಣಕ್ಕೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯ ಹೆಸರನ್ನು ಮತ್ತು ಸ್ವರೂಪವನ್ನು ಬದಲಾಯಿಸಬಾರದು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ್‌ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಉಪಾಧ್ಯಕ್ಷ ಎಸ್.ಟಿ.ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲೀಂ ಪಾಷಾ, ಶಿವಕುಮಾರ್, ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ರಮೇಶ್ ಶಂಕರಘಟ್ಟ, ರಾಜ್ಯ ಸಂಚಾಲಕ ಜಿ.ಡಿ.ಮಂಜುನಾಥ್, ಜವಳಿ ನಿಗಮದ ಅಧ್ಯಕ್ಷ ಚೇತನ್, ಆಪ್‌ಕಾಪ್ಸ್ ಅಧ್ಯಕ್ಷ ವಿಜಯ ಕುಮಾರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ್, ಪ್ರಮುಖರಾದ ಆರ್.ರಾಜಶೇಖರ್, ದೇವೇಂದ್ರಪ್ಪ, ವಿಜಯಲಕ್ಷ್ಮೀ ಸಿ.ಪಾಟೀಲ್, ಇಸ್ಮಾಯಿಲ್ ಖಾನ್, ಎಸ್.ಪಿ.ಶೇಷಾದ್ರಿ, ಮಧುಸೂದನ್, ಕೆ.ರಂಗನಾಥ್, ಹರ್ಷಿತ್‌ಗೌಡ, ಎಚ್.ಪಿ.ಗಿರೀಶ್, ವಿಶ್ವನಾಥ್ ಕಾಶೀ, ನಾಗರಾಜ್ ಕಂಕಾರಿ, ಪಾಲಾಕ್ಷಿ ಇತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.