ಜಿಲ್ಲಾ ಕಾಂಗ್ರೆಸ್ ಕಛೇರಿ ಮುಂದೆ ಸೇರಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅಡುಗೆ ಅನಿಲದ ಸಿಲಿಂಡರ್ ಸಮೇತ ಮೋದಿ ವಿರೋಧಿ ಫಲಕಗಳನ್ನು ಹಿಡಿದು ಪ್ರತಿಭಟಿಸಿದರು.
ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಆಕ್ರೋಶ । ಕೇಂದ್ರ ಸರ್ಕಾರದ ವಿರುದ್ಧ ಧರಣಿ
ಕನ್ನಡಪ್ರಭ ವಾರ್ತೆ ಕೋಲಾರಕೇಂದ್ರದಲ್ಲಿನ ನರೇಂದ್ರ ಮೋದಿ ಸರ್ಕಾರವು ನಿರಂತರವಾಗಿ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಎಂಎಲ್ಸಿ ಎಂ.ಎಲ್. ಅನಿಲ್ ಕುಮಾರ್ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದಿಂದ ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿ ಮುಂದೆ ಸೇರಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅಡುಗೆ ಅನಿಲದ ಸಿಲಿಂಡರ್ ಸಮೇತ ಮೋದಿ ವಿರೋಧಿ ಫಲಕಗಳನ್ನು ಹಿಡಿದು ಎತ್ತಿನ ಗಾಡಿಯ ಮೂಲಕ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮೆಕ್ಕೆ ವೃತ್ತದವರಗೂ ಕಾಲ್ನಡಿಗೆ ಜಾಥಾ ಮೂಲಕ ಆಗಮಿಸಿ ಮಾನವ ಸರಪಳಿ ರಚಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಒಳ್ಳೆಯ ದಿನಗಳು ಬರಲಿವೆ ಎಂದು ದೇಶದ ಜನರಿಗೆ ಭರವಸೆ ನೀಡಿದ್ದ ಪ್ರಧಾನಿ ಮೋದಿ ಅದರಂತೆ ನಡೆದುಕೊಂಡಿಲ್ಲ. ನಿರಂತರವಾಗಿ ಅಡುಗೆ ಅನಿಲ, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಮಾಡುವ ಮೂಲಕ ಅಗತ್ಯ ದಿನಬಳಕೆಯ ವಸ್ತುಗಳ ಬೆಲೆಗಳನ್ನು ಏರಿಕೆಗೆ ಕಾರಣವಾಗಿದ್ದಾರೆ. ಅಡುಗೆ ಅನಿಲಕ್ಕೆ ಪ್ರಾರಂಭದಲ್ಲಿ ಸಬ್ಸಿಡಿ ಕೊಡುತ್ತೇವೆ ಎಂದು ಹೇಳಿ ಇವತ್ತು ಸಬ್ಸಿಡಿ ಸಹ ತೆಗೆದಿದ್ದಾರೆ. ಜನರಿಗೆ ಇದರಿಂದ ಹೊರೆಯಾಗಿದೆ. ಇದು ಸಾಂಕೇತಿಕವಾದ ಹೋರಾಟ ಇಂಧನಗಳ ಬೆಲೆ ಇಳಿಸದಿದ್ದರೆ ಜಿಲ್ಲಾ ಕೇಂದ್ರದಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರ ನೇತೃತ್ವದಲ್ಲಿ ಉಗ್ರವಾದ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ದೇಶದಲ್ಲಿ ಯುಪಿಎ ನೇತೃತ್ವದ ಸರ್ಕಾರವಿದ್ದ ಸಂದರ್ಭದಲ್ಲಿ ಅಡುಗೆ ಅನಿಲವು ಕೇವಲ ೪೦೦ ರಿಂದ ೪೫೦ ರು. ಮಾತ್ರ ಇತ್ತು ಅದೇ ಮೋದಿ ಸರ್ಕಾರವು ಬಂದ ನಂತರ ಅದನ್ನು ೧೦೦೦ ರು.ಗೆ ತಂದು ನಿಲ್ಲಿಸಿದ್ದಾರೆ. ಡಿಸೇಲ್ ೬೦ ರು. ಇತ್ತು. ಇವತ್ತು ೧೦೦ ರು.ಗೆ ಹೋಗಿದೆ. ಪೆಟ್ರೊಲ್ ೭೫ ರಿಂದ ೧೧೦ ಮಾಡಿದ್ದೇ ಮೋದಿ ಸರ್ಕಾರದ ಸಾಧನೆಯಾಗಿದೆ. ಅಷ್ಟೇ ಅಲ್ಲದೇ ನೋಟು ಅಮಾನ್ಯೀಕರಣ, ನರೇಗಾದ ಮೂಲ ಉದ್ದೇಶ ರದ್ದು, ಮಹಿಳಾ ಮೀಸಲಾತಿಗೆ ಯುಪಿಎ ಸರ್ಕಾರದಲ್ಲಿ ಜಾರಿ ಮಾಡಿದ್ದನ್ನು ಮೋದಿ ಸರ್ಕಾರವು ಅನುಷ್ಠಾನಕ್ಕೆ ತಂದಿಲ್ಲ. ದೇಶದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗೆ ಇಳಿಸುವ ತನಕ ಕಾಂಗ್ರೆಸ್ ಪಕ್ಷವು ನಿರಂತರವಾಗಿ ಹೋರಾಟ ಮುಂದುವರೆಯಲಿದೆ ಎಂದರು.ರೈತರಿಗೆ ರಸಗೊಬ್ಬರ ಸಿಗುತ್ತಿಲ್ಲ. ಬೆಲೆ ಏರಿಕೆ ನಿಯಂತ್ರಣ ಮಾಡಲು ಅಸಮರ್ಥರಾಗಿರುವ ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಪರೀಕ್ಷೆ ರದ್ದಾಗಿರುವುದು ಕೇಂದ್ರ ಸರ್ಕಾರದ ಅಸಮರ್ಥತೆಗೆ ಸಾಕ್ಷಿ. ಸರ್ಕಾರದ ನಿರ್ಧಾರದಿಂದಾಗಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀಟ್ ಅಕ್ರಮ ತಡೆಗಟ್ಟಲು ಸಾಧ್ಯವಾಗಿಲ್ಲ, ವಿದ್ಯಾರ್ಥಿಗಳ ಬದುಕಿನ ಜೊತೆ ಚೆಲ್ಲಾಟವಾಡುವುದನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷ ಅಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯಾಧ್ಯಕ್ಷರಾದ ಊರುಬಾಗಲು ಶ್ರೀನಿವಾಸ್, ಮ್ಯಾಕಲ ನಾರಾಯಣಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಖಾಜಿಕಲ್ಲಹಳ್ಳಿ ಮುನಿರಾಜು, ಕೋಮುಲ್ ನಿರ್ದೇಶಕರಾದ ಚಂಜಿಮಲೆ ರಮೇಶ್, ಕೆ.ಕೆ.ಮಂಜುನಾಥ್, ಷಂಷೀರ್ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ತಾಲ್ಲೂಕು ಅಧ್ಯಕ್ಷ ವೇಮಗಲ್ ಮುನಿಯಪ್ಪ, ವೇಮಗಲ್ ನರಸಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಉರಟ ಆಗ್ರಹಾರ ಚೌಡರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರಳಿ, ಸೀಸಂದ್ರ ಗೋಪಾಲಗೌಡ, ಸೈಯದ್ ಆಫ್ಸರ್, ಲಿಂಗಾಪುರ ಕಿಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಆಫ್ರೀದ್, ಮಹಿಳಾ ಘಟಕದ ಅಧ್ಯಕ್ಷೆ ಹೇಮಾಮಾಲಿನಿ, ಮುಖಂಡರಾದ ಖಯ್ಯಾಮ್, ಹನೀಫ್, ಒಬಿಸಿ ಮಂಜುನಾಥ್, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಗಂಗಣ್ಣ, ಫೈರೋಜ್ ಖಾನ್, ಲಕ್ಷ್ಮೀಸಾಗರ ಸುನಿಲ್ ಕುಮಾರ್, ಕುರಿಗಳ ರಮೇಶ್, ಮುದವತ್ತಿ ಕೃಷ್ಣಪ್ಪ, ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.