ಕನ್ನಡಪ್ರಭ ವಾರ್ತೆ ಬೆಳಗಾವಿ
ಸುವರ್ಣ ವಿಧಾನಸೌಧ ಕಾನ್ಫ್‌ರೆನ್ಸ್ ಸಭಾಂಗಣದಲ್ಲಿ ಸೋಮವಾರ ಜರುಗಿದ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಮಾಧ್ಯಮ ಪ್ರತಿನಿಧಿಗಳೊಂದಿಗಿನ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಶೀಲನೆ ಪ್ರಕ್ರಿಯೆಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. 2002ರಲ್ಲಿ ಜರುಗಿದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಶೀಲನೆಯ ಮತದಾರರ ಪಟ್ಟಿಯನ್ನು ಮೂಲವಾಗಿಟ್ಟುಕೊಂಡು ಅದರಲ್ಲಿನ ಬದಲಾವಣೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ ಎಂದರು.ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಮ್ಯಾಪಿಂಗ್ ಮಾಡಲಾಗಿದ್ದು, 41,22,869 ಮತದಾರರ ಪೈಕಿ 38,22,990 ಮತದಾರರ ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದ್ದು ಮ್ಯಾಪಿಂಗ್ ಕಾರ್ಯದಲ್ಲಿ ಜಿಲ್ಲೆಯಲ್ಲಿ ಶೇ.93ರಷ್ಟು ಪ್ರಗತಿ ಸಾಧಿಸಲಾಗಿದೆ. ಚುನಾವಣೆಗಳಿಗೆ ಮತದಾರರ ಪಟ್ಟಿಯ ಸಮಗ್ರತೆಯನ್ನು ಕಾಪಾಡುವುದು ಮೂಲಭೂತ ಅವಶ್ಯಕತೆಯಾಗಿದೆ. ವೇಗದ ನಗರೀಕರಣ, ಶಿಕ್ಷಣ ಮತ್ತು ಜೇವನೋಪಾಯಕ್ಕಾಗಿ ವಲಸೆ ಹೋಗುವುದು, ರಾಜಕೀಯ ಪಕ್ಷಗಳು ಮತದಾರರ ಪಟ್ಟಿಯ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವುದು ಹಾಗೂ ಮೃತಪಟ್ಟವರು, ಸ್ಥಳಾಂತರಗೊಂಡ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವುದು ಮತದಾರರ ಪಟ್ಟಿ ವೀಶೇಷ ಸಮಗ್ರ ಪರಿಶೀಲನೆ ಉದ್ದೇಶವಾಗಿದೆ ಎಂದು ತಿಳಿಸಿದರು.ಭೂತ್‌ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಎನ್ಯೂಮರೇಶನ್ ಅರ್ಜಿಗಳನ್ನು ನೀಡಿ ಅವುಗಳನ್ನು ಸಂಗ್ರಹಿಸಲು ಕನಿಷ್ಠ ಮೂರು ಭಾರಿ ಭೇಟಿ ನೀಡುವರು. ಮತದಾರರು ತಮ್ಮ ವಿವರಗಳನ್ನು ಹಿಂದಿನ ಎಸ್‌ಐಆರ್ ಮತದಾರರ ಪಟ್ಟಿಯ ಆಧಾರದ ಮೇಲೆ ಭರ್ತಿ ಮಾಡಿ ಅರ್ಜಿ ಜೊತೆಗೆ ಕೇಳಲಾದಂತಹ ಯಾವುದಾದರೊಂದು ದಾಖಲೆಗಳನ್ನು ಲಗತ್ತಿಸಿ ಬಿಎಲ್‌ಒಗಳಿಗೆ ನೀಡಬೇಕು. ತದನಂತರ ಬಿಎಲ್‌ಒಗಳು ಅವುಗಳನ್ನು ಪರಿಶೀಲಿಸಿ ತಂತ್ರಾಂಶದಲ್ಲಿ ದಾಖಲಿಸಿರುತ್ತಾರೆ. ಅಗತ್ಯ ದಾಖಲೆಗಳಿಲ್ಲದೆ ಮತದಾರರ ಪಟ್ಟಿಯಲ್ಲಿನ ಹೆಸರನ್ನು ತೆಗೆದು ಹಾಕಲು ಅವಕಾಶ ಇರುವುದಿಲ್ಲ. ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆ ಹೊಂದಲು ನಮೂನೆ 6 ಅನ್ನು ಸಲ್ಲಿಸಬೇಕು ಎಂದು ವಿವರಿಸಿದರು.ದೇಶದ ಮೂಲ ನಿವಾಸಿಗಳು ಮತದಾನದಿಂದ ವಂಚಿತರಾಗಬಾರದು ಎನ್ನುವ ಉದ್ದೇಶದೊಂದಿಗೆ ಭಾರತ ಚುನಾವಣಾ ಆಯೋಗವು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಮತದಾರರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ ಯಶಸ್ಸಿಗಾಗಿ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರ ಸಹಕಾರ ಅತಗತ್ಯವಾಗಿದೆ ಎಂದರು.ಸಂಪನ್ಮೂಲ ವ್ಯಕ್ತಿಗಳಾದ ಮಹಾನಗರ ಪಾಲಿಕೆ ಉಪಆಯುಕ್ತ ಸಿದ್ದು ಹುಲ್ಲೋಳಿ ಮಾತನಾಡಿ, ಜೂ.20 ರಿಂದ ಜೂ.29 ರವರೆಗೆ ಮತದಾರರ ಪಟ್ಟಿ ತಯಾರಿ, ತರಬೇತಿ ಮತ್ತು ಮುದ್ರಣ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಬಿಎಲ್‍ಒಗಳು ಜೂ.30 ರಿಂದ ಜು.29 ರವರೆಗೆ ಮನೆ ಮನೆಗೆ ಭೇಟಿ ನೀಡುವರು. ಕರಡು ಮತದಾರರ ಪಟ್ಟಿಯನ್ನು ಆ.5 ರಂದು ಪ್ರಕಟಿಸಲಾಗುವುದು. ಆಕ್ಷೇಪಣೆಗಳನ್ನು ಸಲ್ಲಿಸಲು ಆ.5 ರಿಂದ ಸೆಪ್ಟೆಂಬರ್ 4 ರವರೆಗೆ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆಗಳ ವಿಲೇವಾರಿಯನ್ನು ಆ.5 ರಿಂದ ಅಕ್ಟೋಬರ್ 3ರವರೆಗೆ ಕೈಗೊಳ್ಳಲಾಗುತ್ತದೆ. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 7 ರಂದು ಪ್ರಕಟಣೆ ಮಾಡಲಾಗುವುದು ಎಂದು ತಿಳಿಸುವುದರ ಮೂಲಕ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಶೀಲನೆಯ ವಿವಿಧ ಹಂತಗಳನ್ನು ಪ್ರಾತ್ಯಕ್ಷಿಕೆ ಮೂಲಕ ಸವಿವರವಾಗಿ ವಿವರಿಸಿದರು.ತದನಂತರ ವಿವಿಧ ರಾಜಕೀಯ ಮುಖಂಡರು ಹಾಗೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಜರುಗಿದ ಸಂವಾದದಲ್ಲಿ ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್ ಅವರು ಸವಿವರವಾದ ಮಾಹಿತಿಯನ್ನು ನೀಡಿದರು. ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಪ್ರಶಿಕ್ಷಣಾರ್ಥಿ ಐಎಎಸ್ ಅಧಿಕಾರಿ ರೋಹಿತ ಸಿಂಗ್ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಜರಿದ್ದರು.