ಹೂವಿನಹಡಗಲಿ: ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾದ ಸಂದರ್ಭದಲ್ಲಿ ಪಕ್ಷದ ಸಂಪರ್ಕಕ್ಕೆ ಸಿಗದೇ ಪಕ್ಷಕ್ಕೆ ದ್ರೋಹ ಬಗೆದಿರುವವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಮಾಜಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಆರೋಪಿಸಿದರು.
ಇಲ್ಲಿನ ಲಾಲ್ ಬಹದ್ಧೂರ್ ಶಾಸ್ತ್ರಿ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.ಕಳೆದ 10 ವರ್ಷ ಹಡಗಲಿ ಪುರಸಭೆ ಕಾಂಗ್ರೆಸ್ ತೆಕ್ಕೆಯಲ್ಲಿತ್ತು. ಹಿಂದಿನಿಂದಲ್ಲೂ ಇವರಿಗೆ ಸಲುಗೆ, ಸವಲತ್ತು ನೀಡಿದ್ದರಿಂದ ತಿಂದು, ತೇಗಿ ಈಗ ಪಕ್ಷಕ್ಕೆ ದ್ರೋಹ ಬಗೆದು ಹೊರಗೆ ಹೋಗಿದ್ದಾರೆ. ನಮ್ಮ ಜೀವನ ಪೂರ್ತಿ ಇವರು ಯಾವ ಅಧಿಕಾರ ಮಾಡುತ್ತಾರೋ ನಾನು ನೋಡುತ್ತೇನೆ ಎಂದು ಬಹಿರಂಗ ಸವಾಲು ಹಾಕಿದರು.
ನನ್ನ ಅಧಿಕಾರದ ಅವಧಿಯಲ್ಲಿ ಪುರಸಭೆಯಲ್ಲಿ ಸದಸ್ಯರೇ ಕ್ರಿಯಾ ಯೋಜನೆ ತಯಾರಿಸಿ, ಕಾಮಗಾರಿ ಮಾಡಿ ಬೇಕಾದಷ್ಟು ಬಿಲ್ ಮಾಡಿಕೊಂಡಿದ್ದರು. ಆಗ ನಾನು ಅವರಿಂದ ಒಂದು ನಯಾ ಪೈಸ್ ಕಮೀಷನ್ ತಿಂದಿಲ್ಲ, ಹೊರಗೆ ಹೋಗಿರುವ ಸದಸ್ಯರಿಗೆ ತಾಕತ್ತು ಇದ್ದರೆ ರಾಜಿನಾಮೆ ನೀಡಿ ಚುನಾವಣೆ ಬನ್ನಿ. ಪಕ್ಷದ ವರ್ಚಸ್ಸು, ಕಾರ್ಯಕರ್ತರ ಬಲದೊಂದಿಗೆ ನಿಮ್ಮನ್ನ ಹೀನಾಯವಾಗಿ ಸೋಲಿಸುತ್ತೇವೆ. ನಿಮಗೆ ಸ್ವಾಭಿಮಾನ ಇದ್ದರೆ ಇಂದು ಪಕ್ಷದ ಸಂಪರ್ಕಕ್ಕೆ ಬನ್ನಿ. ಶಾಸ್ತ್ರಿ ವೃತ್ತದಲ್ಲಿ ಬಹಿರಂಗವಾಗಿ ಚರ್ಚಿಸಿ, ನೀವು ಹೇಳಿದವರನ್ನು ಅಧ್ಯಕ್ಷರನ್ನಾಗಿ ನೇಮಿಸುತ್ತೇವೆ ಎಂದರು.ಪಕ್ಷದಿಂದ ಎಲ್ಲ ಅಧಿಕಾರ ಅನುಭವಿಸಿ ಉಂಡ ಮನೆಗೆ ದ್ರೋಹ ಬಗೆದು, ಗರಿಗರಿ ನೋಟಿನ ಕಂತೆಗೆ ಆಸೆ ಪಟ್ಟು ಹೋಗಿದ್ದಾರೆ. ಕಾಂಗ್ರೆಸ್ ಇವರನ್ನು ಎಪಿಎಂಸಿ ಅಧ್ಯಕ್ಷರನ್ನಾಗಿ ಮಾಡಿದೆ, ಎಲ್ಲರಿಗೂ ಸಾಮಾಜಿಕ ನ್ಯಾಯ ನೀಡಿದ್ದೇವೆ. ಕೆಲವರ ಮೇಲೆ ಗಂಭೀರ ಪ್ರಕರಣಗಳಿದ್ದವು, ಊರು ಬಿಟ್ಟು ಓಡಿ ಹೋಗಿದ್ದರು. ನಂತರ ನನ್ನ ಬಳಿ ಬಂದು ಕೈ ಕಾಲು ಹಿಡಿದಿದ್ದರು. ಅವರನ್ನು ಪ್ರಕರಣಗಳಿಂದ ಮುಕ್ತ ಮಾಡಿ ಪುರಸಭೆಯಲ್ಲಿ ಸದಸ್ಯರನ್ನಾಗಿ ಮಾಡಿದ್ದೆನು. ಈಗ ಎಲ್ಲವೂ ಮರೆತು ಪಕ್ಷ ಬಿಟ್ಟು ಓಡಿ ಹೋಗಿದ್ದಾರೆ. ಇವರಿಗೆ ಮಾನ ಮರ್ಯಾದೆ ಇದೆಯಾ ಎಂದು ಪ್ರಶ್ನಿಸಿದರು.
ಮುಂದಿನ ದಿನಗಳಲ್ಲಿ ಪಕ್ಷ ಬಿಟ್ಟು ಹೋಗಿರುವ ಪ್ರತಿ ಸದಸ್ಯರ ಮನೆ ಮುಂದೆ, ವಾರಕ್ಕೊಮ್ಮೆ ಧರಣಿ ಸತ್ಯಾಗ್ರಹ ಮಾಡಿ ಜನರ ಮುಂದೆ ನಿಮ್ಮ ಬಣ್ಣ ಬಯಲು ಮಾಡುತ್ತೇನೆ, ಜ. 30ರಂದು 10 ಸಾವಿರ ಕಾಂಗ್ರೆಸ್ ಕಾರ್ಯಕರ್ತರ ಸಮ್ಮುಖದಲ್ಲಿ ಪುರಸಭೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.ಫೆ.10ಕ್ಕೆ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, 9 ಸದಸ್ಯರು ಕಾಂಗ್ರೆಸ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಆರ್‌ಎಸ್‌ಎಸ್‌ಎನ್ ಅಧ್ಯಕ್ಷ ಪಿ.ವಿಜಯಕುಮಾರ ಮಾತನಾಡಿ, ತಾಲೂಕಿನಲ್ಲಿ ಬಿಜೆಪಿ ದುರಾಡಳಿತ ಹೆಚ್ಚಾಗಿದೆ. ತಾಲೂಕು ಕ್ರೀಡಾಂಗಣ ಕಾಮಗಾರಿ ನಡೆಯುತ್ತಿದ್ದು, ಅದರ ಕಬ್ಬಿಣ, ತಗಡು ಎಲ್ಲವೂ ಮಾಯವಾಗಿವೆ, ಕೆಕೆಆರ್‌ಡಿಬಿಯಿಂದ ಮಂಜೂರಾದ ₹17 ಕೋಟಿಯಲ್ಲಿ ಟೌನ್ ಪ್ಲಾನಿಂಗ್ ಆಗಿರುವ ಜಾಗಗಳಲ್ಲಿ ಸಿಸಿ ರಸ್ತೆ ಮಾಡುತ್ತಿದ್ದಾರೆ. ಇದು ಕಾನೂನಿಗೆ ವಿರುದ್ಧವಾಗಿದೆ. ಈ ಕುರಿತು ಮುಂದಿನ ದಿನ ಪ್ರತಿಭಟನೆ ಮಾಡುತ್ತೇವೆ. ಪಕ್ಷ ಬಿಟ್ಟು ಹೋಗಿರುವ ಸದಸ್ಯರು ರಾಜಿನಾಮೆ ನೀಡಿ ಚುನಾವಣೆ ಎದುರಿಸಿ, ನಾವು ಮತ್ತೆ ಎಲ್ಲ ಸ್ಥಾನಗಳನ್ನು ಗೆದ್ದು ತೋರಿಸುತ್ತೇವೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಟವಾಳಗಿ ಕೊಟ್ರೇಶ, ಬಿ. ಹನುಮಂತಪ್ಪ, ಮುಖಂಡ ಕಾಗದ ಗೌಸ್ ಸಾಹೇಬ್ ಮಾತನಾಡಿದರು.ಮುಖಂಡರಾದ ಪಿ.ಟಿ. ಭರತ್, ಅರವಳ್ಳಿ ವೀರಣ್ಣ, ಎಸ್. ಸುಧಾಕರ, ಎಸ್. ಹಾಲೇಶ, ಬಸವನಗೌಡ ಪಾಟೀಲ್, ಜ್ಯೋತಿ ಮಲ್ಲಣ್ಣ ಸೇರಿದಂತೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.