ತೈಲ, ಅನಿಲ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

KannadaprabhaNewsNetwork |  
Published : Jun 09, 2026, 01:30 AM IST
8ಕೆಡಿವಿಜಿ1, 2-ಕೇಂದ್ರ ಸರ್ಕಾರದ ವಿರುದ್ಧ ದಾವಣಗೆರೆಯಲ್ಲಿ ಸೋಮವಾರ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದಿಂದ ಪ್ರತಿಭಟಿಸಲಾಯಿತು. | Kannada Prabha

ಸಾರಾಂಶ

ಅನಿಲ, ತೈಲ ಬೆಲೆಗಳನ್ನು ಪದೇಪದೇ ಹೆಚ್ಚಿಸುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟಿಸಲಾಯಿತು.

- ಕೇಂದ್ರದ ಬೆಲೆ ಏರಿಕೆ, ಜನ ವಿರೋಧಿ ನೀತಿ ವಿರುದ್ಧ ಎಚ್.ಬಿ.ಮಂಜಪ್ಪ, ದಿನೇಶ ಶೆಟ್ಟಿ, ಡಿ.ಬಸವರಾಜ ಆಕ್ರೋಶ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಅನಿಲ, ತೈಲ ಬೆಲೆಗಳನ್ನು ಪದೇಪದೇ ಹೆಚ್ಚಿಸುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟಿಸಲಾಯಿತು.

ನಗರದ ಶ್ರೀ ಜಯದೇವ ವೃತ್ತದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ, ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಮುದೇಗೌಡ್ರ ಗಿರೀಶ ಇತರರ ನೇತೃತ್ವದಲ್ಲಿ ಪ್ರತಿಭಟಿಸಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಕೇಂದ್ರದ ವಿರುದ್ಧ ಘೋಷಣೆ ಕೂಗುತ್ತಾ, ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಎಸಿ ಕಚೇರಿ ತಲುಪಿ, ಉಪವಿಭಾಗಾಧಿಕಾರಿ ಸಂತೋಷಕುಮಾರ ಮುಖಾಂತರ ರಾಷ್ಟ್ರಪತಿಗೆ ಮನವಿ ಅರ್ಪಿಸಿದರು.

ಇದೇ ವೇಳೆ ಮಾತನಾಡಿದ ಎಚ್.ಬಿ.ಮಂಜಪ್ಪ, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್‌ ಬೆಲೆ ಏರಿಸುತ್ತಿರುವ ಕೇಂದ್ರ ಸರ್ಕಾರ ಜನರ ಬದುಕಿನ ಮೇಲೆ ಬೆಲೆ ಏರಿಕೆ ಬರೆ ಹಾಕುತ್ತಲೇ ಇದೆ. ಕಾಂಗ್ರೆಸ್ ಸರ್ಕಾರದಲ್ಲಿ ₹60-₹70 ದರಕ್ಕೆ ಸಿಗುತ್ತಿದ್ದ ಖಾದ್ಯ ತೈಲದ ಬೆಲೆ ಈಗ ₹200 ತಲುಪಿದೆ. ಡಾ.ಮನಮೋಹನ ಸಿಂಗ್ ಕಾಲದಲ್ಲಿ ₹55-₹65ಗೆ ಸಿಗುತ್ತಿದ್ದ ಪೆಟ್ರೋಲ್‌, ಡೀಸೆಲ್‌ ಬೆಲೆ ಈಗ ₹100-₹110ಕ್ಕೆ ತಲುಪಿದೆ. ಅನಿಲದ ಬೆಲೆಯನ್ನು ಒಂದೇ ತಿಂಗಳಲ್ಲಿ 4 ಸಲ ಹೆಚ್ಚಿಸಿ, ಜನ ಸಾಮಾನ್ಯರ ಬದುಕನ್ನೇ ಕದಡುವ ಕೆಲಸವನ್ನು ಕೇಂದ್ರ ಮಾಡಿದೆ ಎಂದರು.

ದೇಶದ ಬೆನ್ನೆಲುಬಾದ ರೈತರು ಬಳಸುವ ಗೊಬ್ಬರ ಬೆಲೆಯನ್ನು ಹೆಚ್ಚಿಸಿ, ಗೊಬ್ಬರ ಸಬ್ಸಿಡಿಯನ್ನೂ ಕಡಿತ ಮಾಡಲಾಗಿದೆ. ದೇಶಾದ್ಯಂತ ರೈತರು ಕೇಂದ್ರದ ವಿರುದ್ಧ ಹೋರಾಟ ನಡೆಸಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದು, ಸ್ವಿಸ್ ಬ್ಯಾಂಕ್‌ನಿಂದ ಕಪ್ಪು ಹಣ ತಂದು, ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಾಕಿಸುವುದಾಗಿ ಸುಳ್ಳು ಭರವಸೆ ನೀಡಿ, ಜನರನ್ನು ಮರಳು ಮಾಡಿದ್ದ ಮೋದಿ ಈಗ ಬೆಲೆ ಏರಿಕೆ ಮೂಲಕ ಜನರ ಬದುಕನ್ನೇ ಸರ್ವನಾಶ ಮಾಡುತ್ತಿದ್ದಾರೆ. ಒಳ್ಳೆಯ ದಿನಗಳನ್ನು ತರುವುದಾಗಿ ದುರ್ದಿನಕ್ಕೆ ಕೇಂದ್ರ ಕಾರಣವಾಗಿದೆ ಎಂದು ಆರೋಪಿಸಿದರು.

ದೂಡಾ ಅಧ್ಯಕ್ಷ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ. ಶೆಟ್ಟಿ ಮಾತನಾಡಿ, ಕೇಂದ್ರ ಸರ್ಕಾರ ಜನಸಾಮಾನ್ಯರ ಸಮಸ್ಯೆಗಳತ್ತ ಗಮನಹರಿಸಿ, ಪೆಟ್ರೋಲ್‌, ಡೀಸೆಲ್, ಅಡುಗೆ ಅನಿಲದ ಬೆಲೆಗಳನ್ನು ತಕ್ಷಣ ಇಳಿಸಬೇಕು. ಇಲ್ಲವಾದರೆ ದೇಶವ್ಯಾಪಿ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ ಮಾತನಾಡಿ, ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗಿವೆ. ನಿರಂತರ ಅನಿಲ ಬೆಲೆ ಏರಿಸುತ್ತಿರುವುದು ಬಡವರ ಬದುಕಿನ ಮೇಲೆ ಕೊಡಲಿ ಪೆಟ್ಟು ಕೊಟ್ಟಂತಾಗಿದೆ. ತೈಲ, ಅನಿಲ ಬೆಲೆ ಏರಿಕೆ ಪರಿಣಾಮ ಹೋಟೆಲ್‌ಗಳಲ್ಲಿ ದರ ಹೆಚ್ಚಳವಾಗಿದೆ. ಸಾಮಾನ್ಯರು, ಬಡವರ ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಮೇರಿಕಾಗೆ ಹೋಲಿಸಿ, ಇಲ್ಲಿ ಸಿಲಿಂಡರ್ ದರ ಕಡಿಮೆ ಎಂಬ ಹೋಲಿಕೆ ಮಾಡುತ್ತಿರುವುದು ನಾಚಿಕೆಗೇಡು ಎಂದು ಟೀಕಿಸಿದರು.

ಪಕ್ಷದ ಮುಖಂಡರಾದ ಮುದೇಗೌಡ್ರ ಗಿರೀಶ, ಸೈಯದ್ ಖಾಲಿದ್ ಅಹಮ್ಮದ್‌, ಕೆ.ಜಿ.ಶಿವಕುಮಾರ, ಅಯೂಬ್ ಪೈಲ್ವಾನ್, ಎಸ್.ಮಲ್ಲಿಕಾರ್ಜುನ, ಎ.ನಾಗರಾಜ, ಎಲ್.ಎಂ.ಎಚ್. ಸಾಗರ್, ಕಬಡ್ಡಿ ಮಲ್ಲು, ಆನಂದ ಇಟ್ಟಿಗುಡಿ, ಎಚ್.ಜೆ.ಮೈನುದ್ದೀನ್, ಬಿ.ಎಚ್. ಚೈತನ್ಯಕುಮಾರ ಮೇಸ್ತ್ರಿ, ಜಯಣ್ಣ, ಗಾಂಧಿ ನಗರ ರಮೇಶ, ಹರೀಶ ಕೆಂಗಲಹಳ್ಳಿ, ಶ್ರೀಕಾಂತ ಬಗರೆ, ಅನಿತಾಬಾಯಿ ಮಾಲತೇಶ, ಕೆ.ಪಿ.ರಾಜೇಶ್ವರಿ, ಮಂಗಳಮ್ಮ, ಮಹದೇವಮ್ಮ, ಮುಜಾಹಿದ್‌ ಪಾಶ, ಎಸ್.ಎಸ್‌.ಗಿರೀಶ ಇತರರು ಇದ್ದರು.

- - -

(ಲೀಡ್‌)

* ಮೋದಿ ಹೆಸರು ಹೇಳಿಕೊಂಡು ಬಿಜೆಪಿ ಸಂಸದರಿಂದ ಕಾಲಹರಣ

ದೇಶದಲ್ಲಿ, ರಾಜ್ಯದಲ್ಲಾದ ಅಣೆಕಟ್ಟೆಗಳು, ರಾಷ್ಟ್ರೀಯ ಹೆದ್ದಾರಿಗಳು, ಗ್ರಾಮೀಣ ರಸ್ತೆಗಳೆಲ್ಲವೂ ಕಾಂಗ್ರೆಸ್ ಸರ್ಕಾರಗಳ ಬಳುವಳಿಗಳು. ಬಿಜೆಪಿ ಯಾವುದೇ ಜನಪರ ಕೆಲಸ ಮಾಡುತ್ತಿಲ್ಲ. ದಾವಣಗೆರೆ ಸಂಸದರು ಲೋಕಸಭೆಯಲ್ಲಿ ಜಿಲ್ಲೆ, ರಾಜ್ಯದ ಸಮಸ್ಯೆ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಬಿಜೆಪಿಯ ಯಾವೊಬ್ಬ ಸಂಸದರೂ ಸಂಸತ್ತಿನಲ್ಲಿ ರಾಜ್ಯದ ಸಮಸ್ಯೆ ಬಗ್ಗೆ ಮಾತನಾಡುತಿಲ್ಲ ಏಕೆ? ಕೇವಲ ನರೇಂದ್ರ ಮೋದಿ ಹೆಸರು ಹೇಳಿಕೊಂಡು, ಕಾಲಹರಣ ಮಾಡುವ ಕೆಲಸವನ್ನು ರಾಜ್ಯದ ಬಿಜೆಪಿ ಸಂಸದರು ಮಾಡುತ್ತಿದ್ದಾರೆ. ಇಂತಹವರಿಂದ ರಾಜ್ಯಕ್ಕಾಗಲೀ, ಜನರಿಗೆ ಆಗಲಿ ಯಾವುದೇ ಅನುಕೂಲ ಆಗುವುದಿಲ್ಲ ಎಂದು ಎಚ್.ಬಿ.ಮಂಜಪ್ಪ ಟೀಕಿಸಿದರು.

- - -

-8ಕೆಡಿವಿಜಿ1, 2: ಕೇಂದ್ರ ಸರ್ಕಾರದ ವಿರುದ್ಧ ದಾವಣಗೆರೆಯಲ್ಲಿ ಸೋಮವಾರ ಕಾಂಗ್ರೆಸ್ ಜಿಲ್ಲಾ ಘಟಕದಿಂದ ಪ್ರತಿಭಟಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಂಭೀರ ಕಾಲಘಟ್ಟದಲ್ಲಿ ಇಂದು ಬ್ರಾಹ್ಮಣ ಸಮಾಜ: ನಟರಾಜ ಭಾಗವತ್
‘ಕಾಯಕ ಸೇತು’ ಉದ್ಯೋಗ ಸಂದರ್ಶನಕ್ಕೆ ಡಾ.ಧನಂಜಯ ಸರ್ಜಿ ಚಾಲನೆ