ವಿಬಿ ಜೀ ರಾಮ್ ಜೀ ಯೋಜನೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ಕನ್ನಡಪ್ರಭ ವಾರ್ತೆ, ಹಾವೇರಿಮನರೇಗಾ ಯೋಜನೆ ವಿರೋಧ ಮಾಡುವುದು ಕಾಂಗ್ರೆಸ್ ಪಕ್ಷದ ನಿಲುವಲ್ಲ. ಕೇಂದ್ರ ಸರ್ಕಾರ ಬದಲಾವಣೆ ಮಾಡಿರುವ ವಿಬಿ ಜೀರಾಮ್ ಜೀ ಯೋಜನೆಯು ದೇಶದ 14 ಕೋಟಿ ಬಡ ಕುಟುಂಬಗಳ ಹೊಟ್ಟೆ ಮೇಲೆ ಕಲ್ಲು ಹೊಡೆಯುವ ಕೆಲಸ ಮಾಡುತ್ತದೆ. ಗ್ರಾಪಂಗಳ ಅಧಿಕಾರವನ್ನು ಮೊಟಕುಗೊಳಿಸುವ ಹಾಗೂ ರಾಜ್ಯದ ಘನತೆಗೆ ಧಕ್ಕೆ ತರುವ ಕಾನೂನನ್ನು ಕಾಂಗ್ರೆಸ್ ಸಹಿಸುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಮನರೇಗಾ ಬಚಾವೋ ಆಂದೋಲನದ ಪ್ರಯುಕ್ತ ಸಾಂಕೇತಿಕ ಮುಷ್ಕರ ಹಾಗೂ ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಭಾರತ ದೇಶ ಇಂದು ಶೋಚನೀಯ ಸ್ಥಿತಿಯಲ್ಲಿ ಸಾಗುತ್ತಿದೆ. ಮೋದಿಯವರ ಕಾನೂನು ಯಾವಾಗ, ಹೇಗೆ ಬದಲಾವಣೆ ಆಗುತ್ತದೋ ಗೊತ್ತಾಗಲ್ಲ. ಸ್ವತಃ ಬಿಜೆಪಿ ಕಟ್ಟಿದ ಅಡ್ವಾಣಿ, ಮುರುಳಿ ಮನೋಹರ ಜೋಶಿ ಅವರಿಗೆ ಮೋದಿ ಅನ್ಯಾಯ ಮಾಡಿದ್ದಾರೆ. 75 ವರ್ಷ ಆದ ಮೇಲೆ ಪ್ರಧಾನಿ ಆಗಬಾರದೆಂದು ಬಿಜೆಪಿ ಅಜೆಂಡಾದಲ್ಲಿದೆ, ಆದರೆ ಮೋದಿಗೆ ಅನ್ವಯವಾಗುವುದಿಲ್ಲ. ಮೋದಿ ಎಲ್ಲದರಲ್ಲೂ ವ್ಯಾಪಾರ ಮಾಡುತ್ತಿದ್ದಾರೆ. ಕಳೆದ 12 ವರ್ಷದಲ್ಲಿ ಲೆಕ್ಕವಿರದಷ್ಟು ಸುಳ್ಳು ಹೇಳುತ್ತಲೆ ಅಧಿಕಾರ ನಡೆಸಿದ್ದಾರೆ ಎಂದರು.ನಾವು ರಾಷ್ಟ್ರಪಿತ ಎಂದು ಯಾರನ್ನು ಕರೆಯುತ್ತಿದ್ದೇವೋ ಅವರನ್ನು ಸುಮ್ಮನೇ ಬಿಡುತ್ತಿಲ್ಲ. ಗಾಂಧೀಜಿ ಅವರನ್ನು ನಿಂದನೆ ಮಾಡುತ್ತಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಿಯಾದಾಗ ಮನರೇಗಾ ಯೋಜನೆ ಜಾರಿಗೆ ತಂದರು. ದೇಶದ 800 ಜಿಲ್ಲೆಗಳ ಪೈಕಿ, ಆರಂಭದಲ್ಲಿ ಬರಗಾಲ ಇರುವ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ತಂದರು. ಬಳಿಕ ಹಂತ ಹಂತವಾಗಿ ಎಲ್ಲ ಜಿಲ್ಲೆಗೆ ವಿಸ್ತರಿಸಿದರು. ಆದರೆ ಬಿಜೆಪಿಯವರು ಯೋಜನೆ ಬದಲಾಯಿಸುವ ಮೂಲಕ ಅಮಾನವೀಯ ಕೆಲಸ ಮಾಡುತ್ತಿದ್ದಾರೆ. ದೇಶದ ರೈತರು, ಕೂಲಿ ಕಾರ್ಮಿಕರ ಹಿತ ಕಾಪಾಡಲಿಕ್ಕೆ ಆಗುತ್ತಿಲ್ಲ. ಹಿಂದೂ ಮುಸ್ಲಿಂ ಎನ್ನುತ್ತಲೇ 11 ವರ್ಷ ಆಡಳಿತ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.ದೇಶದ ರಾಜಕಾರಣದಲ್ಲಿ ಕರ್ನಾಟಕ ಸರ್ಕಾರ ಪ್ರಬುದ್ಧ ರಾಜಕಾರಣ ಮಾಡಿದೆ. ಕೇಂದ್ರದ ಆಡಳಿತ ನೀತಿ ವಿರೋಧಿಸುವ ನಿರ್ವಹಣೆ ನಾವು ಮಾಡಬೇಕಿದೆ. ನರೇಗಾ ಇದ್ದಾಗ ರಾಜ್ಯಕ್ಕೆ 4500 ಕೋಟಿ ರು. ಅನುದಾನ ಬರುತ್ತಿತ್ತು, ಆದರೀಗ 2500 ಕೋಟಿ ರು. ಕೂಡ ಬರಲ್ಲ. ಬಡವರನ್ನು ಸಲುಹಲು ಆಗುತ್ತಿಲ್ಲ. ಈ ಯೋಜನೆ ಗ್ರಾಪಂಗಳಿಗೆ ಇರುವ ಅಧಿಕಾರ ಬಲಿ ಕೊಡುತ್ತದೆ ಎಂದರು. ಈ ವೇಳೆ ಶಾಸಕರಾದ ಯು.ಬಿ ಬಣಕಾರ, ಪ್ರಕಾಶ ಕೋಳಿವಾಡ, ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ, ಎಸ್.ಆರ್.ಪಾಟೀಲ, ಮೋಹನ ಲಿಂಬಿಕಾಯಿ ಮಾತನಾಡಿದರು. ಶಾಸಕ ರುದ್ರಪ್ಪ ಲಮಾಣಿ, ಆನಂದಸ್ವಾಮಿ ಗಡ್ಡದೇವರಮಠ, ಎಂ.ಎಂ. ಹಿರೇಮಠ, ಎಸ್.ಎಫ್.ಎನ್ ಗಾಜಿಗೌಡ್ರ, ಎಂ.ಎಂ.ಮೈದೂರ, ಕೊಟ್ರೇಶಪ್ಪ ಬಸೇಗಣ್ಣಿ, ಆರ್. ಶಂಕರ, ನೆಹರು ಓಲೇಕಾರ, ಪ್ರೇಮಾ ಪಾಟೀಲ, ದರ್ಶನ ಲಮಾಣಿ, ರಾಜು ಕುನ್ನೂರ, ಪ್ರಸನ್ನ ಹಿರೇಮಠ, ಎಂ.ಎಫ್.ಮಣಕಟ್ಟಿ, ಮಂಜನಗೌಡ ಪಾಟೀಲ, ರಮೇಶ ಮಡಿವಾಳರ, ದಾನಪ್ಪ ಚೂರಿ, ಪ್ರಭುಗೌಡ ಬಿಷ್ಟನಗೌಡ್ರ, ಶಾಂತಕ್ಕ ಶಿರೂರ, ಶಿವಕುಮಾರ ತಾವರಗಿ, ಬಸವರಾಜ ಹೆಡಿಗ್ಗೊಂಡ ಸೇರಿದಂತೆ ಇತರರು ಇದ್ದರು. ಮನರೇಗಾ ಯೋಜನೆಯನ್ನು ಬದಲಾವಣೆ ಮಾಡಲು ದೊಡ್ಡ ಷಡ್ಯಂತ್ರ ಮಾಡಿದ್ದಾರೆ. ಬಿಜೆಪಿಗರು ಮಹಾತ್ಮ ಗಾಂಧಿ ವಿರೋಧಿಗಳು. ರೈತ ವಿರೋಧಿ ಕಾಯಿದೆಗಳನ್ನು ಹಿಂತೆಗೆದುಕೊಂಡಂತೆ ಈ ಯೋಜನೆಯನ್ನು ಹಿಂಪಡೆಯಬೇಕು ಎಂಬುದು ಎಐಸಿಸಿ ಉದ್ದೇಶವಾಗಿದೆ. ದೇಶದ ಜನ ಬಿಜೆಪಿಯಿಂದ ಭ್ರಮನಿರಸನ ಆಗಿದ್ದಾರೆ. ಬರುವ ದಿನಗಳಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದು ವಿಪ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.ಮನರೇಗಾ ಯೋಜನೆ ಹೆಸರನ್ನು ಬದಲಾಯಿಸುವ ಮೂಲಕ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಎರಡನೇ ಬಾರಿ ಕೊಲೆ ಮಾಡಿದ್ದಾರೆ. ಬಡವರ ಕೈ ತುತ್ತು ಕಿತ್ತುಕೊಳ್ಳಲು ಹುನ್ನಾರ ನಡೆಸಿದ್ದಾರೆ. ಬಡವರು ಕಾಂಗ್ರೆಸ್ ಪರ ಇರೋದು ಮೋದಿಗೆ ಗೊತ್ತಿದೆ. ಅದಕ್ಕೋಸ್ಕರವೇ ಯೋಜನೆ ಹೆಸರು ಬದಲಾಯಿಸಿದ್ದಾರೆ. ದೇಶ ಹೊಡೆಯುವ, ಕೂಲಿ ಕಾರ್ಮಿಕರ, ಬಡವರ ವಿರೋಧಿ ಪಕ್ಷಕ್ಕೆ ತಕ್ಕಶಾಸ್ತಿ ಮಾಡಬೇಕಿದೆ ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ ಹೇಳಿದರು.ವಿಬಿ ಜೀ ರಾಮ್ ಜೀ ಯೋಜನೆ ಜನಸಾಮಾನ್ಯರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಗ್ರಾಪಂ ಆಡಳಿತ ಮೋಟಕುಗೊಳಿಸಿದ್ದಾರೆ. ಕೇಂದ್ರ ಸರ್ಕಾರ ಅಧಿಸೂಚಿಸುವ ಕಾಮಗಾರಿ ಮಾತ್ರ ಕೈಗೊಳ್ಳಬಹುದಾಗಿದೆ. ಸಂಪೂರ್ಣ ಅವೈಜ್ಞಾನಿಕವಾಗಿದೆ. ಕೇಂದ್ರ ಸರ್ಕಾರ ಯೋಜನೆ ವಾಪಸ್ ಪಡೆದು, ಯಥಾಸ್ಥಿತಿ ಮನರೇಗಾ ಯೋಜನೆ ಮುಂದುವರೆಸಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ನರೇಗಾ ಯೋಜನೆ ಪ್ರಯೋಜನ ಪಡೆದು ಕೋಟ್ಯಂತರ ಜನ ತಮ್ಮ ಜೀವನ ನಡೆಸುತ್ತಿದ್ದರು. ಯೋಜನೆ ರದ್ದಾಗಿರುವುದರಿಂದ ರೈತ ಕುಲಕ್ಕೆ ದೊಡ್ಡ ಪೆಟ್ಟು ಬೀಳಲಿದೆ. ನರೇಗಾವನ್ನು ಬಿಜೆಪಿ ವ್ಯವಸ್ಥಿತವಾಗಿ ಮುಗಿಸಲಿಕ್ಕೆ ಹೊರಟಿದೆ ಶಾಸಕ ಯಾಸೀರ್‌ಖಾನ್ ಪಠಾಣ್ ಹೇಳಿದರು.