ಶಿರಹಟ್ಟಿ: ಗುತ್ತಿಗೆದಾರನಿಂದ ಕಮಿಷನ್ ಹಣ (ಲಂಚ) ಸ್ವೀಕರಿಸುತ್ತಿದ್ದ ವೇಳೆ ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಶಿರಹಟ್ಟಿ ಮೀಸಲು ಮತಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ತಕ್ಷಣ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಆಗ್ರಹಿಸಿದರು.
ಡಾ. ಚಂದ್ರು ಲಮಾಣಿ ಶಿರಹಟ್ಟಿ ಮತಕ್ಷೇತ್ರದ ಶಾಸಕರಾದ ಮೇಲೆ ಜಾತಿ ನಿಂದನೆ, ದುಡ್ಡು ವಸೂಲಿ ಮಾಡುವುದು, ಎಲ್ಲೆಡೆ ಭ್ರಷ್ಟಾಚಾರ ಹೆಚ್ಚಾಗಿದೆ. ಗುತ್ತಿಗೆದಾರರಿಗೆ ನಿರಂತರ ಕಿರುಕುಳ ನೀಡುತ್ತಾ ಬಾಯಿಗೆ ಬಂದಂತೆ ಬೈಯುವುದು ಸರ್ವೆ ಸಾಮಾನ್ಯವಾಗಿತ್ತು. ಅವರು ತಕ್ಷಣ ರಾಜೀನಾಮೆ ನೀಡಬೇಕು. ಕಾಂಗ್ರೆಸ್ ನಾಯಕರ ಕೈವಾಡವಿದೆ ಎಂದು ಬೇರೊಬ್ಬರ ಮೇಲೆ ಗೂಬೆ ಕೂರಿಸುವ ಕೆಲಸ ಆಗಬಾರದು ಎಂದರು.
ಸಾರ್ವಜನಿಕ ಜೀವನದಲ್ಲಿ ಇರುವವರು ಹೇಗೆ ನಡೆದುಕೊಳ್ಳಬೇಕು ಎನ್ನುವ ಪರಿಜ್ಞಾನ ಇಲ್ಲದ ಅವರು, ಕಾಂಗ್ರೆಸ್ ಮೇಲೆ ಆರೋಪ ಹೊರಿಸುವುದು ಬಿಟ್ಟು, ಪಾರದರ್ಶಕ ತನಿಖೆಗೆ ಸಹಕರಿಸಬೇಕು. ನೈತಿಕ ಹೊಣೆಗಾರಿಕೆ ವಹಿಸಿ ಶಾಸಕ ಸ್ಥಾನಕ್ಕೆ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಮಾಜಿ ಶಾಸಕ ರಾಮಣ್ಣ ಲಮಾಣಿ ಮಾತನಾಡಿ, ಉತ್ತರ ಕರ್ನಾಟಕದ ಇತಿಹಾಸದಲ್ಲೇ ತಾಲೂಕಿನಲ್ಲಿ ಯಾವ ಶಾಸಕರೂ ಈ ತರಹದ ಭ್ರಷ್ಟಾಚಾರದಲ್ಲಿ ಸಿಲುಕಿರುವುದು ಕಂಡುಬಂದಿಲ್ಲ. ಆದರೆ ಹೆಚ್ಚು ಕಲಿತು ವೈದ್ಯ ಸೇವೆ ಮಾಡಿ ಬುದ್ಧಿವಂತರು ಎನಿಸಿಕೊಂಡಿರುವ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಭ್ರಷ್ಟಾಚಾರ ನಡೆಸಿ, ತಾಲೂಕಿನ ಮರ್ಯಾದೆ ಹರಾಜ ಹಾಕಿದ್ದಾರೆ. ಅವರು ಶಾಸಕ ಸ್ಥಾನದಲ್ಲಿ ಮುಂದುವರಿಯುವ ಯಾವ ನೈತಿಕತೆಯನ್ನೂ ಉಳಿಸಿಕೊಂಡಿಲ್ಲ. ಕೂಡಲೇ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಒತ್ತಾಯಿಸಿದರು.
ಶಿರಹಟ್ಟಿ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಹುಮಾಯೂನ್ ಮಾಗಡಿ, ಡಿ.ಕೆ. ಹೊನ್ನಪ್ಪನವರತ, ಚನ್ನಪ್ಪ ಜಗಲಿ, ವೀರೇಂದ್ರ ಪಾಟೀಲ, ಶಿವನಗೌಡ ಪಾಟೀಲ, ಮಂಜುನಾಥ ಘಂಟಿ ಮಾತನಾಡಿದರು.