ಹಾವೇರಿ: ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ ಹಾಗೂ ಜನ ವಿರೋಧಿ ನೀತಿಗಳನ್ನು ಖಂಡಿಸಿ ಕಾಂಗ್ರೆಸ್‌ನಿಂದ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಪಾದಯಾತ್ರೆ ಉದ್ದಕ್ಕೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್, ಅಗತ್ಯ ವಸ್ತುಗಳ ಬೆಲೆ ಏರಿಕೆ, ಜಿಎಸ್‌ಟಿ ತಾರತಮ್ಯ ಹೀಗೆ ಹಲವು ಬಗೆಯ ಪ್ಲೇ ಕಾರ್ಡ್‌ಗಳನ್ನು ಪ್ರದರ್ಶನ ಮಾಡಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ್ ಖಾದ್ರಿ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ದೇಶದ ಬಡ ಜನರು, ರೈತರು, ಎಲ್ಲ ವರ್ಗ ಜನಾಂಗದ ವಿರೋಧಿ ಸರ್ಕಾರವಾಗಿದೆ. ಬಡವರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಪಕ್ಷವಾಗಿದೆ. ಕೇಂದ್ರ ಸರ್ಕಾರ ಇಡಿ, ಸಿಬಿಐ, ಐಟಿಯಂತಹ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಭಯಪಡಿಸುವ ಕೆಲಸ ಮಾಡುತ್ತಿದೆ. ದೇಶದ ಜನ ಬದಲಾವಣೆ ಬಯಸುತ್ತಿದ್ದು, ಜನವಿರೋಧಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಹಾತೊರೆಯುತ್ತಿದ್ದಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳಿ ಅಧಿಕಾರಕ್ಕೆ ಬಂದು ಎಲ್ಲ ವಸ್ತುಗಳ ಬೆಲೆ ಏರಿಸಿ ಜನರಿಗೆ ಆರ್ಥಿಕ ಹೊರೆ ಹಾಕಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಮಾತನಾಡಿ, ಕಳೆದ ಹನ್ನೊಂದು ವರ್ಷಗಳಿಂದ ಕೇಂದ್ರ ಬಿಜೆಪಿ ಸರ್ಕಾರ ದ್ವಿಮುಖ ನೀತಿ ಅನುಸರಿಸುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ರಸಗೊಬ್ಬರ ಬೆಲೆ ಹೆಚ್ಚಳ ಮಾಡಿ ರೈತರ ಹೊಟ್ಟೆ ಮೇಲೆ ಬರೆ ಎಳೆಯುತ್ತಿದೆ. ಭದ್ರಾ ನಾಲೆಗೆ ಅನುದಾನ ನೀಡದೇ ಕೇಂದ್ರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳನ್ನು ಸಹಿಸಲಾಗದೇ ಎಷ್ಟೇ ಅಪಪ್ರಚಾರ ಮಾಡಿ ಜನರ ದಾರಿ ತಪ್ಪಿಸಿದರೂ ಮುಂಬರುವ ಜಿಪಂ, ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪದವೀಧರ ಘಟಕದ ಅಧ್ಯಕ್ಷ ಆರ್.ಎಂ. ಕುಬೇರಪ್ಪ ಮಾತನಾಡಿ, ರಾಜ್ಯ ಸರ್ಕಾರದ ಸಾಧನೆಗಳು ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸಿ, ಜಾಗೃತಿ ಮೂಡಿಸಬೇಕಿದೆ ಎಂದರು.ಜಿಲ್ಲಾ ವಕ್ತಾರ ಡಾ. ಸಂಜಯ ಡಾಂಗೆ ಮಾತನಾಡಿ, ಬಿಜೆಪಿಗರಿಗೆ ಜನಾಕ್ರೋಶ ಯಾತ್ರೆಯೇ ತಿರುಗುಬಾಣ ಆಗಲಿದೆ. ರೈತರು, ಜನಸಾಮಾನ್ಯರು, ಮಹಿಳೆಯರಿಗೆ ಪಂಚ ಗ್ಯಾರಂಟಿಯಿಂದ ಅನುಕೂಲವಾಗಿದೆ ಎಂದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಂ. ಹಿರೇಮಠ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜಿಗೌಡ್ರ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಯುವ ಕಾಂಗ್ರೆಸ್ ಅಧ್ಯಕ್ಷ ದರ್ಶನಕುಮಾರ ಲಮಾಣಿ, ಪ್ರಭು ಬಿಷ್ಟನಗೌಡ್ರ, ಶ್ರೀಧರ ದೊಡ್ಡಮನಿ, ಶಂಕರ ಮೆಹರವಾಡೆ, ಪ್ರಸನ್ನ ಹಿರೇಮಠ, ನಾಸೀರಖಾನ್ ಪಠಾಣ್, ಬಾಬುಸಾಬ ಮೋಮಿನಗಾರ, ರಾಘವೇಂದ್ರ ಬಾಸೂರ, ಜಮೀರ್ ಜಿಗರಿ, ನವೀದ್ ವರದಿ, ಮುತ್ತಣ್ಣ ಕೊರವರ, ರಾಜು ಪುರದ, ಸಂತೋಷ ಲಮಾಣಿ, ಶಕೀಲ್ ನದಾಫ, ನೂರಅಹ್ಮದ್ ಕರ್ಜಗಿ, ಶಾಂತಕ್ಕ ಶಿರೂರು, ಗೀತಾ ಪ್ರಕಾಶ, ಐಸ್ಪಕ್ ಅಹ್ಮದ್, ರಾಜು ದೊಡ್ಡಮನಿ ಇತರರು ಇದ್ದರು. ಪ್ರತಿಭಟನೆಗೆ ಬಾರದ ಶಾಸಕರು: ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ನಡೆಸಿದ ಪ್ರತಿಭಟನೆಗೆ ಜಿಲ್ಲೆಯ ಯಾವ ಶಾಸಕರೂ ಪಾಲ್ಗೊಳ್ಳದಿರುವುದಕ್ಕೆ ಅವರದೇ ಪಕ್ಷದ ಕಾರ್ಯಕರ್ತರ ಬೇಸರ ಹೊರಹಾಕಿದರು. ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕೈ ಶಾಸಕರೇ ಇದ್ದರೂ ಒಬ್ಬರೂ ಬಾರದಿರುವುದಕ್ಕೆ ಕೈ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.