ರಾಮನಗರ: ರಾಜ್ಯಪಾಲರು ತಮ್ಮ ಸ್ಥಾನದ ಘನತೆಯನ್ನು ನಾಡಿನ ಜನರೆದುರು ಕಾಪಾಡಿಕೊಳ್ಳಬೇಕಿದೆ. ಆದರೆ, ಕಾಂಗ್ರೆಸ್ ರಾಜ್ಯಪಾಲರ ಗೌರವ ಹಾಳು ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮನರೇಗಾ ಹೆಸರು ಬದಲಾವಣೆಯಾದರೂ ಕೂಲಿ ಕಾರ್ಮಿಕರಿಗೆ ಸಿಗಬೇಕಾದ ಸವಲತ್ತು ಸಿಗಲಿವೆ. ಈ ಹಿಂದೆ ಮನರೇಗಾ ಯೋಜನೆಯಲ್ಲಿ ನಡೆಯುತ್ತಿದ್ದ ಅಕ್ರಮಗಳಿಗೆ ಕಡಿವಾಣ ಬೀಳಲಿದೆ. ರಾಜ್ಯ ಸರ್ಕಾರ ಹೆಸರು ಬದಲಾವಣೆ ಬಗ್ಗೆ ಅನಾವಶ್ಯಕವಾಗಿ ಚರ್ಚೆ ಮಾಡುತ್ತಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದರು.
ಮುಂದಿನ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಸ್ವಾಭಾವಿಕವಾಗಿ ಜನ ಪ್ರೀತಿಯಿಂದ ಹೇಳುತ್ತಾರೆ. ಕಳೆದ ಚುನಾವಣೆಯಲ್ಲಿ ನಮ್ಮ ಮುಖಂಡರಲ್ಲೇ ಹೆಚ್ಚಿನ ಆತ್ಮವಿಶ್ವಾಸ ಇತ್ತು. ಸ್ವಲ್ಪ ಎಡವಿದರು. ಎಲ್ಲವನ್ನೂ ಸರಿಪಡಿಸಿ ಮೊದಲು ಪಕ್ಷ ಅಧಿಕಾರಕ್ಕೆ ತರುತ್ತೇವೆ ಎಂದು ನಿಖಿಲ್ ಹೇಳಿದರು.ರಾಜ್ಯ ರಾಜಕಾರಣಕ್ಕೆ ಕುಮಾರಸ್ವಾಮಿ ಆಗಮಿಸುತ್ತಾರೆಯೇ ಎಂಬ ಪ್ರಶ್ನೆಗೆ, ಈ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಮೊದಲು ರಾಜ್ಯಕ್ಕೆ ಬರುತ್ತಾರಾ ಎನ್ನುವ ವಿಚಾರಕ್ಕೆ ಉತ್ತರ ಕಂಡುಕೊಳ್ಳೋಣ. ಬಳಿಕ ಯಾವ ಕ್ಷೇತ್ರಕ್ಕೆ ಬರುತ್ತಾರೆ ಅನ್ನೋದು ತೀರ್ಮಾನ ಆಗುತ್ತದೆ ಎಂದರು.
ರಾಜ್ಯ ಸರ್ಕಾರ ಹಾಸನದಲ್ಲಿ ನಮ್ಮ ವಿರುದ್ಧ ಎರಡು ಸಮಾವೇಶಗಳನ್ನು ಮಾಡಿದೆ. ಅವರ ಪ್ರಶ್ನೆಗಳಿಗೆ ಉತ್ತರ ಕೊಡುವ ಸಲುವಾಗಿ ಹಾಗೂ ರಾಜ್ಯ ಸರ್ಕಾರ ಕಳೆದ ಎರಡುವರೆ ವರ್ಷಗಳಲ್ಲಿ ಏನು ಕಡಿದು ಕಟ್ಟೆ ಹಾಕಿದೆ ಎಂಬುದನ್ನು ಹೇಳಲು ಜ.24ರಂದು ಸಮಾವೇಶ ಮಾಡಿ ವೇದಿಕೆಯಲ್ಲಿ ಚರ್ಚಿಸುತ್ತೇವೆ. ಸಮಯ ಬಂದಾಗ ರಾಮನಗರದಲ್ಲೂ ಸಮಾವೇಶ ಮಾಡುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.ಜೆಡಿಎಸ್ ಪಕ್ಷ ಗಟ್ಟಿಯಾಗಿದೆ. ಇನ್ನೂ ಸಂಘಟನೆ ಮಾಡಿ ಗಟ್ಟಿ ಮಾಡುತ್ತೇವೆ. ನಾನು ಒಂದು ಕ್ಷೇತ್ರಕ್ಕೆ ಸೀಮಿತನಾದವನಲ್ಲ, ರಾಜ್ಯದಲ್ಲಿ ಸಂಘಟನೆ ಮಾಡಬೇಕಿದ್ದು, ನನ್ನ ಮೇಲೆ ಜವಾಬ್ದಾರಿ ಇದೆ. ರಾಜಕಾರಣ ನಿಂತ ನೀರಲ್ಲ, ಹರಿಯುವ ನೀರಿದ್ದಂತೆ. ಮುಂದಿನ ದಿನಗಳಲ್ಲಿ ಅವಕಾಶ ಸಿಗಲಿವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮುಂದಿನ ದಿನಗಳಲ್ಲಿ ಜಿಲ್ಲಾ, ತಾಲೂಕು ಹಾಗೂ ಗ್ರಾಪಂ ಚುನಾವಣೆ ಬರಲಿದೆ. ನಮ್ಮ ಕಾರ್ಯಕರ್ತರಿಗೆ ಅಧಿಕಾರ ಕೊಡಿಸಬೇಕು. ಕುಮಾರಸ್ವಾಮಿ ಅವರು ನಾಲ್ಕು ಬಾರಿ ಶಾಸಕರಾಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಿರುವುದು ಜಿಲ್ಲೆ ಮತ್ತು ಕ್ಷೇತ್ರದ ಜನರಿಗೆ ಗೊತ್ತಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.ಶಾಸಕ ಹರೀಶ್ ಗೌಡ, ಮಾಜಿ ಶಾಸಕ ಎ. ಮಂಜುನಾಥ್, ಜೆಡಿಎಸ್ ಮುಖಂಡರಾದ ಸಬ್ಬಕೆರೆ ಶಿವಲಿಂಗಪ್ಪ, ಹೋಟೆಲ್ ಉಮೇಶ್, ರಾಮಕೃಷ್ಣಯ್ಯ, ಜನತಾ ನಾಗೇಶ್, ಜಿ.ಟಿ.ಕೃಷ್ಣ, ಗೂಳಿಗೌಡ, ಅಂಜನಾಪುರ ವಾಸು, ಕೊತ್ತೀಪುರ ಗೋವಿಂದರಾಜು, ಕುಂಬಾಪುರ ವೆಂಕಟೇಶ್, ಕೈಲಾಂಚ ಲೋಕೇಶ್ ಮತ್ತಿತರರು ಹಾಜರಿದ್ದರು.
ಬಾಕ್ಸ್..............ರಾಮನಗರದಲ್ಲಿ ನಿಖಿಲ್ ಗೆ ಅದ್ಧೂರಿ ಸ್ವಾಗತ
ರಾಮನಗರ: ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಅದ್ಧೂರಿಯಾಗಿ ಬರ ಮಾಡಿಕೊಂಡರು.ನಗರದ ಹೊರ ವಲಯದ ಸಂಗಬಸವನದೊಡ್ಡಿ ಬಳಿಯಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಬೈಕ್ ಮೆರವಣಿಗೆ ಮೂಲಕ ನಗರಕ್ಕೆ ಕರೆತಂದರು. ಪೊಲೀಸ್ ಭವನ ಬಳಿಯ ವೃತ್ತದಲ್ಲಿ ಕ್ರೇನ್ ನಿಂದ ಬೃಹತ್ ಹಾರ ಹಾಕಿ ಸ್ವಾಗತಿಸಿದರು. ಅಲ್ಲಿಂದ ವಾಟರ್ ಟ್ಯಾಂಕ್ ವೃತ್ತಕ್ಕೆ ಆಗಮಿಸಿದ ನಿಖಿಲ್ ಕುಮಾರಸ್ವಾಮಿ ಅವರನ್ನು ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹಳ್ಳಿಮರದ ಬಳಿ ಕಾರ್ಯಕರ್ತರು ತಂದಿದ್ದ ಕೇಕ್ ಅನ್ನು ನಿಖಿಲ್ ಕತ್ತರಿಸಿದರು. ಬಳಿಕ ಚಾಮುಂಡೇಶ್ವರಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಕೋಟ್ .................ಸದನದಲ್ಲಿ ಅಭಿವೃದ್ಧಿ ವಿಷಯವಾಗಿ ಚರ್ಚೆ ನಡೆಯುತ್ತಿದ್ದಾಗ, ಪೀಠದ ಮುಂದೆ ನಿಂತರು ಎಂಬ ಕಾರಣ ಮುಂದಿಟ್ಟುಕೊಂಡು 16 ಜನ ಶಾಸಕರನ್ನು ಸ್ಪೀಕರ್ ಅಮಾನತ್ತು ಮಾಡಿದ್ದರು. ಗುರುವಾರದ ಜಂಟಿ ಅಧಿವೇಶನ ಭಾಷಣ ಸಂಬಂಧ ರಾಜ್ಯಪಾಲರೊಂದಿಗೆ ಕಾಂಗ್ರೆಸ್ ಶಾಸಕರು ನಡೆದುಕೊಂಡ ವರ್ತನೆಯನ್ನು ರಾಜ್ಯದ ಜನರು ಗಮನಿಸಿದ್ದಾರೆ. ಈ ಬಗ್ಗೆ ಸ್ಪೀಕರ್ ಕೂಡಲೇ ಉತ್ತರ ಕೊಡಬೇಕು, ಜೊತೆಗೆ ಕಾಂಗ್ರೆಸ್ ಶಾಸಕರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.
- ಜಿ.ಡಿ.ಹರೀಶ್‌ಗೌಡ, ಜೆಡಿಎಸ್ ಶಾಸಕ22ಕೆಆರ್ ಎಂಎನ್ 5.ಜೆಪಿಜಿ
ರಾಮನಗರದಲ್ಲಿ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಮುಖಂಡರು ಸ್ವಾಗತಿಸಿದರು.