ರಾಮನಗರ: 2028ರ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭಯ ಕಾಂಗ್ರೆಸ್‌ಗೆ ಶುರುವಾಗಿದೆ. ಹೀಗಾಗಿಯೇ ಚುನಾವಣಾ ಆಯೋಗದ ವಿರುದ್ಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಧರಣಿ ಸೋಲಿನ ಭಯದಿಂದ ಮಾಡುತ್ತಿರುವ ಹತಾಶೆಯ ನಾಟಕ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು.
ಚೆನ್ನಮ್ಮ ಹೆಸರಿನಲ್ಲಿ ರಾಜಕೀಯ ಬೇಡ:
ಚೆನ್ನಮ್ಮ ಅವರಿಗೆ ಆದಾಯ ತೆರಿಗೆ (ಐಟಿ) ನೋಟಿಸ್ ನೀಡಲಾಗಿತ್ತು ಎಂಬ ಸಚಿವ ಬಾಲಕೃಷ್ಣ ಆರೋಪಕ್ಕೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಚೆನ್ನಮ್ಮ ಅವರ ವಿಚಾರದಲ್ಲಿ ಸಚಿವ ಬಾಲಕೃಷ್ಣ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈ ಕುರಿತು ನಮ್ಮ ಪಕ್ಷದ ಮಾಜಿ ಶಾಸಕರಾದ ಎ. ಮಂಜುನಾಥ್ ಈಗಾಗಲೇ ದಾಖಲೆ ಸಮೇತ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ್ದಾರೆಂದರು.ಆದಾಯ ತೆರಿಗೆ ಕಟ್ಟುವುದು ಒಂದು ದಿನ ತಡವಾದರೂ ಐಟಿ ಅಧಿಕಾರಿಗಳು ನೋಟಿಸ್ ನೀಡುವುದು ಸಾಮಾನ್ಯ ಪ್ರಕ್ರಿಯೆ. ನೋಟಿಸ್ ಎಂದರೆ ತೆರಿಗೆ ಬಾಕಿ ಇದೆ ಎಂದು ಗಮನಕ್ಕೆ ತರುವುದು ಅಷ್ಟೇ. ಇದನ್ನೇ ದೊಡ್ಡ ಅಪರಾಧದಂತೆ ಬಿಂಬಿಸುತ್ತಿರುವುದು ಸರಿಯಲ್ಲ. ರಾಜಕೀಯ ಲಾಭಕ್ಕಾಗಿ, ರಾಜಕೀಯ ದ್ವೇಷಕ್ಕಾಗಿ ಚೆನ್ನಮ್ಮನವರಂತಹ ಹಿರಿಯರ ಹೆಸರನ್ನು ಎಳೆದು ತರುವುದು ಸರಿಯಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.
ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದರು.