ಶಿವಾನಂದ ಗೊಂಬಿ
ಹುಬ್ಬಳ್ಳಿ:ಪಶ್ಚಿಮ ಪದವೀಧರ ಕ್ಷೇತ್ರದಿಂದ ಪರಿಷತ್‌ಗೆ 2026ರಲ್ಲಿ ನಡೆಯಲಿರುವ ಚುನಾವಣೆಗೆ ಸಿದ್ಧತೆಗಳು ಭರದಿಂದ ನಡೆದಿವೆ. 2008ರಿಂದ ಕೈತಪ್ಪಿರುವ ಕ್ಷೇತ್ರವನ್ನು ಮರಳಿ ಪಡೆಯಬೇಕು ಎಂಬ ಹುಮ್ಮಸ್ಸಿನಿಂದ ಸೂಕ್ತ ಅಭ್ಯರ್ಥಿಗೆ ಕಾಂಗ್ರೆಸ್ ಹುಡುಕಾಟ ನಡೆಸಿದೆ.
ಧಾರವಾಡ, ಉತ್ತರ ಕನ್ನಡ, ಹಾವೇರಿ, ಗದಗ ಹೀಗೆ ನಾಲ್ಕು ಜಿಲ್ಲೆಗಳನ್ನೊಳಗೊಂಡ ಕ್ಷೇತ್ರವಿದು. ಸದ್ಯ ಸಚಿವರಾಗಿರುವ ಎಚ್.ಕೆ. ಪಾಟೀಲ ಅವರ ಮೂಲ ಕ್ಷೇತ್ರವಿದು. ಎಚ್.ಕೆ. ಪಾಟೀಲರು ಈ ಕ್ಷೇತ್ರದಿಂದ ರಾಜಕೀಯ ಜೀವನ ಪ್ರಾರಂಭಿಸಿದ್ದು. ಬರೋಬ್ಬರಿ 4 ಸಲ ಗೆದ್ದು ಬೀಗಿದ್ದಾರೆ. 2008ರಲ್ಲಿ ಇವರ ವಿರುದ್ಧ ಬಿಜೆಪಿಯಿಂದ ಮೋಹನ ಲಿಂಬಿಕಾಯಿ ನಿಂತು ಸೋಲಿನ ರುಚಿ ತೋರಿಸಿದ್ದರು.ಆದರೆ, ಮುಂದೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಲಿಂಬಿಕಾಯಿ ತಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸದೇ ಇನ್ನು 1 ವರ್ಷ 9 ತಿಂಗಳು ಬಾಕಿ ಇರುವಾಗಲೇ ರಾಜೀನಾಮೆ ನೀಡಿದ್ದರು. ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಎಸ್.ವಿ. ಸಂಕನೂರ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಸದ್ಯ ಕೂಡ ಸಂಕನೂರ ಅವರೇ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಹೀಗಾಗಿ ಕಳೆದ ಮೂರು ಅವಧಿಯಿಂದ ಬಿಜೆಪಿ ಕ್ಷೇತ್ರವಾದಂತಾಗಿದೆ. ಈ ಸಲ ಸರ್ಕಾರವೂ ತಮ್ಮದೇ ಇದೆ. ಹೇಗಾದರೂ ಮಾಡಿ ಈ ಸಲ ಮತ್ತೆ ಕ್ಷೇತ್ರವನ್ನು ವಶಕ್ಕೆ ಪಡೆದುಕೊಳ್ಳಬೇಕು ಎಂಬ ಇರಾದೆ ಕಾಂಗ್ರೆಸ್‌ನದ್ದು. ಅದಕ್ಕಾಗಿ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿ ಕಾಂಗ್ರೆಸ್ ತೊಡಗಿದೆ.ರೇಸ್‌ನಲ್ಲಿ ಯಾರು?:
ಈ ಕ್ಷೇತ್ರದಿಂದ ಗೆದ್ದಿದ್ದ ಮೋಹನ ಲಿಂಬಿಕಾಯಿ ಇದೀಗ ಕಾಂಗ್ರೆಸ್ಸಿನಲ್ಲಿದ್ದಾರೆ. ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ಸಿನಲ್ಲಿ ಗುರುತಿಸಿಕೊಂಡಿರುವ ಲಿಂಬಿಕಾಯಿ ತಮಗೆ ಈ ಸಲ ಅವಕಾಶ ಮಾಡಿಕೊಡಿ ಎಂಬ ಬೇಡಿಕೆ ಇಟ್ಟಿದ್ದಾರೆ.ಕಳೆದ ಬಾರಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಸೋತಿರುವ ರಾಣಿಬೆನ್ನೂರಿನ ಆರ್.ಎಂ. ಕುಬೇರಪ್ಪ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕುಬೇರಪ್ಪ ಅವರು ಶಿಕ್ಷಕರ ಕ್ಷೇತ್ರ, ಪಶ್ಚಿಮ ಪದವೀಧರ ಕ್ಷೇತ್ರದಿಂದಲೂ ಸ್ಪರ್ಧಿಸಿರುವುದುಂಟು. ಈ ಎರಡು ಕ್ಷೇತ್ರದಿಂದ ಒಟ್ಟು 5 ಸಲ ಸ್ಪರ್ಧಿಸಿದ್ದಾರೆ. ಆದರೆ, ಗೆಲ್ಲಲು ಮಾತ್ರ ಸಾಧ್ಯವಾಗಿಲ್ಲ. ಹೀಗಾಗಿ ತಮ್ಮ ಬಗ್ಗೆ ಅನುಕಂಪದ ಅಲೆಯಿದೆ. ಈ ಸಲ ತಮ್ಮ ಗೆಲವು ಖಚಿತ. ಟಿಕೆಟ್ ಕೊಡಿ ಎಂದು ಕೇಳುತ್ತಿದ್ದಾರೆ ಎಂದು ಮೂಲಗಳು ತಿಳಿಸುತ್ತವೆ.
ಯಂಗ್ ಲೀಡರ್:ಇನ್ನು ಹೊಸದಾಗಿ ಕೇಳಿ ಬರುತ್ತಿರುವ ಹೆಸರೆಂದರೆ ನಾಗರಾಜ ಕೊಟಗಿ. ಕಾಂಗ್ರೆಸ್ಸಿನ ಹಿರಿಯ ಮುಖಂಡ ಶರಣಪ್ಪ ಕೊಟಗಿ ಅವರ ಪುತ್ರ ನಾಗರಾಜ, ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಈ ಕ್ಷೇತ್ರವಷ್ಟೇ ಅಲ್ಲ. ಪ್ರತಿ ಚುನಾವಣೆಯಲ್ಲೂ ಟಿಕೆಟ್ ವಿಷಯದಲ್ಲಿ ತಮಗೆ ಅನ್ಯಾಯವಾಗಿದೆ. ಇದೀಗ ತಮಗೆ ಬೇಡ. ತಮ್ಮ ಪುತ್ರನಿಗೆ ಟಿಕೆಟ್ ಕೊಡಿ ಎಂದು ಶರಣಪ್ಪ ಕೊಟಗಿ ಕೇಳುತ್ತಿದ್ದಾರೆ. ಹೀಗಾಗಿ ನಾಗರಾಜ ಕೂಡ ರೇಸ್‌ನಲ್ಲಿ ಬಂದಂತಾಗಿದೆ. ಇನ್ನು ಹಲವರು ಆಕಾಂಕ್ಷಿಗಳಾಗುವ ಹುಮ್ಮಸ್ಸಿನಲ್ಲಿದ್ದಾರೆ.
ಒಟ್ಟಿನಲ್ಲಿ ಹೇಗಾದರೂ ಮಾಡಿ 3 ಬಾರಿ ಕ್ಷೇತ್ರ ಕೈ ತಪ್ಪಿದೆ. ಈ ಸಲ ಹೇಗಾದರೂ ಮಾಡಿ ವಶಕ್ಕೆ ಪಡೆದುಕೊಳ್ಳಬೇಕು. ಹೀಗಾಗಿ ಗೆಲ್ಲುವ ಕುದುರೆ ಯಾರು ಎಂಬ ಚಿಂತನೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ತೊಡಗಿದೆ. ಜತೆಗೆ ಯಾರು ಹೆಚ್ಚಿಗೆ ಮತದಾರರ ನೋಂದಣಿ ಮಾಡಿಸುತ್ತಾರೋ ಅವರಿಗೆ ಟಿಕೆಟ್ ಕೊಡುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡುವಂತೆ ಹೈಕಮಾಂಡ್ ಹೇಳಿ ಕಳುಹಿಸುತ್ತಿದೆ. ಹಾಗಾಗಿ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಇದೀಗ ಚುನಾವಣೆ ರಂಗು ನಿಧಾನವಾಗಿ ಏರುತ್ತಿದೆ.