ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆಗೆ ದೇಶಕ್ಕೆ ದೇಶವೇ ಕಾದು ಕುಳಿತಿರುವಾಗ ಆಹ್ವಾನ ಕೊಟ್ಟರೂ ಪಾಲ್ಗೊಳ್ಳದಿರಲು ನಿರಾಕರಿಸಿದ ಕಾಂಗ್ರೆಸ್ ನಾಯಕರ ಹಿಡನ್ ಅಜೆಂಡಾ ಏನು. ರಾಮಮಂದಿರ ಉದ್ಘಾಟನೆ ಕೋಟ್ಯಂತರ ಭಾರತೀಯರ ಕನಸಾಗಿದೆ.
ಕಾರವಾರ:
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆಗೆ ದೇಶಕ್ಕೆ ದೇಶವೇ ಕಾದು ಕುಳಿತಿರುವಾಗ ಆಹ್ವಾನ ಕೊಟ್ಟರೂ ಪಾಲ್ಗೊಳ್ಳದಿರಲು ನಿರಾಕರಿಸಿದ ಕಾಂಗ್ರೆಸ್ ನಾಯಕರ ಹಿಡನ್ ಅಜೆಂಡಾ ಏನು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ ಪ್ರಶ್ನಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಮಮಂದಿರ ಉದ್ಘಾಟನೆ ಕೋಟ್ಯಂತರ ಭಾರತೀಯರ ಕನಸಾಗಿದೆ. ಹೊರ ದೇಶಗಳಲ್ಲಿರುವ ಭಾರತೀಯರೂ ಸಂಭ್ರಮದಲ್ಲಿದ್ದಾರೆ. ಈ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನವನ್ನು ಕಾಂಗ್ರೆಸ್ ನಾಯಕರಿಗೆ ಗೌರವಯುತವಾಗಿಯೇ ನೀಡಲಾಗಿದೆ. ಹಾಗಿದ್ದರೂ ಕೋಟಿ ಕೋಟಿ ದೇಶವಾಸಿಗಳ ಆರಾಧ್ಯ ದೈವ ಶ್ರೀರಾಮ ಮಂದಿರದ ಲೋಕಾರ್ಪಣೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿರುವುದು ದುರ್ದೈವದ ಸಂಗತಿ ಹಾಗೂ ಆ ಪಕ್ಷ ಹಿಂದೂ ಸಂಪ್ರದಾಯ, ನಂಬಿಕೆ, ಆಚರಣೆ, ಧಾರ್ಮಿಕತೆ ಮೇಲೆ ಕೊಡಲಿ ಏಟು ನೀಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಭು ಶ್ರೀರಾಮಚಂದ್ರ ಸಮಸ್ತ ಭಾರತೀಯರನ್ನು ಒಂದುಗೂಡಿಸುವ ದೇವರು. ದೇಶಕ್ಕೆ ದೇಶವೇ ಸಂಭ್ರಮದಲ್ಲಿ ಇರುವ ವೇಳೆ ಕಾಂಗ್ರೆಸ್ ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳದೆ ಕ್ಷುಲ್ಲಕ ರಾಜಕಾರಣ ಮಾಡುತ್ತಿರುವುದು ಖಂಡನೀಯವಾಗಿದೆ ಎಂದಿದ್ದಾರೆ.ದೇವರ ವಿಷಯದಲ್ಲೂ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಅಸಂಖ್ಯಾತ ಭಾರತೀಯರ ನಂಬಿಕೆ, ಸಂಪ್ರದಾಯ, ಆಚರಣೆಗಳಿಗೆ ಪದೇ ಪದೇ ಅಡ್ಡಿಪಡಿಸುತ್ತ ವಿಕೃತಿ ಮೆರೆಯುತ್ತಿರುವ ಕಾಂಗ್ರೆಸ್‌ಗೆ ಜನತೆಯೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದ್ದಾರೆ.ವಿಧಾನಸಭೆ ಚುನಾವಣೆ ವೇಳೆಗೆ ಕೆಲ ಕಾಂಗ್ರೆಸ್ ಮುಖಂಡರು ಕೇಸರಿ ಪೇಟ, ಶಾಲು ಧರಿಸಿ ಮಿಂಚಿದ್ದರು. ಅವರ ಢೋಂಗಿತನವೆಲ್ಲ ಈಗ ಬಯಲಾಗಿದೆ. ಇವರಿಗೆ ಹಿಂದೂ ಧರ್ಮ, ದೇವರುಗಳ ಬಗ್ಗೆ ಗೌರವವೂ ಇಲ್ಲ. ನಂಬಿಕೆಯೂ ಇಲ್ಲ. ಕೇವಲ ಮತಗಳಿಕೆಗಾಗಿ ನಡೆಸಿದ ನಾಟಕ ಎನ್ನುವುದು ಪಕ್ಕಾ ಆಗಿದೆ ಎಂದು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.