ಶಿಕ್ಷಕರ ಕ್ಷೇತ್ರದ ಸಮಸ್ಯೆಗೆ ಕಾಂಗ್ರೆಸ್‌ ಪರಿಹಾರ: ಶಾಸಕ ರಘುಮೂರ್ತಿ

KannadaprabhaNewsNetwork | Published : May 19, 2024 1:46 AM

ಸಾರಾಂಶ

ಚಳ್ಳಕೆರೆ ನಗರದ ನಗರದ ಯಾದವರ ವಿದ್ಯಾರ್ಥಿ ನಿಲಯದಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯನ್ನು ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಲವಾರು ಜನಪರ ಯೋಜನೆಗಳ ಮೂಲಕ ಜನರ ವಿಶ್ವಾಸ ಗೆದ್ದಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಅವರು, ಶನಿವಾರ ನಗರದ ಯಾದವರ ವಿದ್ಯಾರ್ಥಿನಿಲಯದಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲೂ ಪಕ್ಷ ಹೆಚ್ಚು ಸ್ಥಾನಗಳಿಸಲಿದೆ. ಜೂನ್ ೩ರಂದು ನಡೆಯುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್‌ಮೂರ್ತಿಯವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರು, ಮುಖಂಡರು ಕಾರ್ಯನಿರ್ವಹಿಸಿ ಎಂದು ಕರೆನೀಡಿದರು. ರಾಜ್ಯದಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಪಕ್ಷ ರೂಪಿಸಿದೆ. ಪ್ರಸ್ತುತ ಈಗಾಗಲೇ ವಿಧಾನ ಸಭೆಯಲ್ಲಿ ೧೩೬ ಸ್ಥಾನ ಪಡೆಯುವ ಮೂಲಕ ಪಕ್ಷ ಗಟ್ಟಿಯಾಗಿ ನೆಲೆಯೂರಿದೆ. ಅದೇ ರೀತಿ ವಿಧಾನ ಪರಿಷತ್‌ನಲ್ಲೂ ಕಾಂಗ್ರೆಸ್ ಪಕ್ಷದ ಶಕ್ತಿ ಹೆಚ್ಚಿಸಬೇಕಿದೆ. ಈ ಬಾರಿ ಪದವೀಧರ ಸಮಸ್ಯೆಗಳ ಬಗ್ಗೆ ಅಪಾರ ವಾದ ಅನುಭವ ಹೊಂದಿರುವ ಡಿ.ಟಿ.ಶ್ರೀನಿವಾಸ್‌ಮೂರ್ತಿ ಅಭ್ಯರ್ಥಿಯಾಗಿದ್ದು, ಅವರ ಗೆಲುವಿಗೆ ಎಲ್ಲರೂ ಸಹಕರಿಸಬೇಕು ಎಂದರು.

ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಪ್ರಸ್ತುತ ಈ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಿ.ಟಿ.ಶ್ರೀನಿವಾಸ್ ಕಳೆದ ಹಲವಾರು ವರ್ಷಗಳಿಂದ ಶಿಕ್ಷಕರ ಸಮಸ್ಯೆಗಳ ಬಗ್ಗೆ ಸರ್ಕಾರ ಮಟ್ಟದಲ್ಲಿ ಹೋರಾಟ ನಡೆಸಿ ಗುರುತಿಸಿಕೊಂಡಿದ್ದಾರೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧಿಸಿ ಅಲ್ಪಮತಗಳಿಂದ ಸೋಲು ಅನುಭವಿಸಿದ್ದರು. ಆದರೆ, ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವುದರಿಂದ ಎಲ್ಲೆಡೆ ಉತ್ತಮ ವಾತಾವರಣವಿದೆ. ಚಳ್ಳಕೆರೆ ತಾಲ್ಲೂಕಿನ ಶಿಕ್ಷಕ ಬಂಧುಗಳು ಡಿ.ಟಿ.ಶ್ರೀನಿವಾಸ್‌ರವರಿಗೆ ಮತ ನೀಡಬೇಕು. ಎನ್‌ಪಿಎಸ್ ರದ್ದು ಮಾಡುವಂತೆ ಈಗಾಗಲೇ ಸರ್ಕಾರ ಮಟ್ಟದಲ್ಲಿ ಹೋರಾಟ ನಡೆಸಲಾಗುತ್ತಿದ್ದು, ಒಪಿಎಸ್ ಜಾರಿಗೆ ನಮ್ಮ ಮೊದಲ ಆದ್ಯತೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನೇರಲಗುಂಟೆ ರಾಮಪ್ಪ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ನಿವೃತ್ತ ಪ್ರಾಂಶುಪಾಲ ಬಿ.ವಿ.ಸಿರಿಯಣ್ಣ, ಬಾಲರಾಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಟಿ.ರವಿಕುಮಾರ್, ಜಿ.ಟಿ.ಬಾಬುರೆಡ್ಡಿ, ಶಶಿಕಲಾ ಸುರೇಶ್‌ಬಾಬು ಮಾತನಾಡಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ, ಜಿ.ಟಿ.ಶಶಿಧರ, ಜಿ.ಟಿ.ವೀರಭದ್ರಸ್ವಾಮಿ, ಎಲ್.ರುದ್ರಮುನಿ, ಸಿ.ಟಿ.ವೀರೇಶ್, ಗುರುಲಿಂಗಪ್ಪ, ಡಿ.ಟಿ. ಶ್ರೀನಿವಾಸ್, ಕೆ.ಸೂರನಾಯಕ, ಅನ್ವರ್‌ ಮಾಸ್ಟರ್, ದೊಡ್ಡಯ್ಯ, ಚಿಕ್ಕಣ್ಣ, ವೀರಣ್ಣ, ನೇರಲಗುಂಟೆಸೂರ ನಾಯಕ, ಮೂಡಲಗಿರಿಯಪ್ಪ ಮುಂತಾದವರು ಉಪಸ್ಥಿತರಿದ್ದರು.

Share this article