ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಸಿಎಂ ಸಿದ್ದರಾಮಯ್ಯ ಅವರಿಗೆ ಆಡಳಿತದ ಮೇಲೆ ಹಿಡಿತ ತಪ್ಪಿದೆ. ಪಕ್ಷದ ಹೈಕಮಾಂಡಿಗೂ ತಮ್ಮದೇ ಶಾಸಕರು, ಮುಖಂಡರನ್ನು ನಿಯಂತ್ರಣದಲ್ಲಿ ಇಡಲಾಗುತ್ತಿಲ್ಲ. ಕಾಂಗ್ರೆಸ್ ಹೈಕಮಾಂಡ್ ವೀಕ್ ಆಗಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ, ಸರ್ಕಾರವಾಗಿ ಉಳಿದಿಲ್ಲ. ಸಿಎಂ ಸಿದ್ದರಾಮಯ್ಯ ಗುಂಪು, ಡಿಸಿಎಂ ಡಿ.ಕೆ.ಶಿವಕುಮಾರ ಗುಂಪು ಹಾಗೂ ದಲಿತರ ಗುಂಪುಗಳಾಗಿ ಹೋಗಿದೆ ಎಂದು ದೂರಿದರು. ಕಾಂಗ್ರೆಸ್ ಸರ್ಕಾರದಲ್ಲಿ ಮೂರು ಗುಂಪುಗಳಾಗಿ ಒಡೆದು ಹೋಗಿರುವುದರಿಂದ ರಾಜ್ಯದ ಅಭಿವೃದ್ಧಿ ಕುಂಠಿತ ಆಗುತ್ತಿದೆ. ಬರೀ ಜಾತಿ, ಜಾತಿ ಗುಂಪುಗಳಾಗಿವೆ. ಇದು ಆಡಳಿತಕ್ಕೆ ಒಳ್ಳೆಯ ಲಕ್ಷಣವಲ್ಲ. ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ಸಭೆ ಕರೆದು ಯಾರಿಗೆ ಬಹುಮತ ಬರುತ್ತದೋ ಅವರಿಗೆ ಸಿಎಂ ಬಿಟ್ಟು ಕೊಡಬೇಕು. ಇಲ್ಲವೇ ಎಲ್ಲರನ್ನೂ ಹದ್ದುಬಸ್ತಿನಲ್ಲಿಟ್ಟುಕೊಂಡು ಸರ್ಕಾರ ನಡೆಸಬೇಕು. ಕಲ್ಯಾಣ ಕಾರ್ಯಕ್ರಮಗಳನ್ನು ಮುಂದುವರೆಸಿ, ಇಲ್ಲದಿದ್ದರೆ ಇದೊಂದು ಆಯತಪ್ಪಿದ ಸರ್ಕಾರ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆರ್ಥಿಕ ಪರಿಸ್ಥಿತಿ ಅಧೋಗತಿಗೆ:ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದೆ. ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ. ಹಗಲು ದರೋಡೆ ಕೊಲೆ-ಸುಲಿಗೆಗಳು ಸಾಮಾನ್ಯವಾಗಿವೆ. ಸರ್ಕಾರದ ಆಡಳಿತ ನಿಯಂತ್ರಣ ತಪ್ಪಿದೆ. ರಾಜ್ಯ ಸರ್ಕಾರದಿಂದ ಜನರ ರಕ್ಷಣೆ ಮಾಡಲು ಆಗುತ್ತಿಲ್ಲ. ಜತೆಗೆ ಸರ್ಕಾರದ ಖಜಾನೆ ಲೂಟಿ ತಪ್ಪಿಸಲು ಆಗದಿದ್ದರೆ ಕೂಡಲೇ ರಾಜೀನಾಮೆ ನೀಡಿ ಗೌರವದಿಂದ ಹೊರಗೆ ಬನ್ನಿ ಎಂದರು.
ಸಿಎಂ ಸಿದ್ದರಾಮಯ್ಯ ಮೌಲ್ಯಾಧಾರಿತ ರಾಜಕಾರಣಿ. ರಾಮಕೃಷ್ಣ ಹೆಗಡೆ ಜತೆಗೆ ಬೆಳೆದವರು. ರಾಮಕೃಷ್ಣ ಹೆಗಡೆ ಸಣ್ಣ ಆರೋಪ ಬಂದಾಗ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ಸಿದ್ದರಾಮಯ್ಯ ಅವರಿಗೆ ನಾನು ನೆನಪಿಸಿ ಕೊಡುತ್ತೇನೆ. ವಾಲ್ಮೀಕಿ ನಿಗಮದ ₹187 ಕೋಟಿ ಹಣ ಹಗಲು ದರೋಡೆ ಆಗಿದೆ. ಇದೆಲ್ಲ ಗೊತ್ತಿಲ್ಲದಂತೆ ಕಿವುಡು ಹಾಗೂ ಮೂಕರ ರೀತಿ ಸಿಎಂ ಓಡಾಡಬಾರದು. ಈ ಪ್ರಕರಣದ ಬಗ್ಗೆ ಸರ್ಕಾರ ನಿಷ್ಪಕ್ಷಪಾತ ತನಿಖೆಗೆ ಅವಕಾಶ ನೀಡಿ, ಸಿಎಂ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದರು.ಹಗರಣಗಳ ಸರ್ಕಾರ:
ಸಿಎಂ ಸಿದ್ದರಾಮಯ್ಯ ಅವರದು ಹಗರಣಗಳ ಸರ್ಕಾರ. ಮುಡಾ ಹಗರಣ, ಅರ್ಕಾವತಿ ಬಡಾವಣೆ ಹಗರಣ ಸದ್ದು ಮಾಡುತ್ತಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ಹಗರಣಗಳೇ ಜಾಸ್ತಿ. ನಗರಾಭಿವೃದ್ಧಿಗೆ ಸಂಬಂಧಿಸಿದ ಹಗರಣಗಳೇ ಹೆಚ್ಚಾಗುತ್ತವೆ. ಸರ್ಕಾರಿ ಭೂಮಿ ಕಬಳಿಕೆ ಮಾಡುವುದು, ಜಮೀನುಗಳ ಡಿನೋಟಿಫಿಕೇಶನ್ ಮಾಡುವುದು ಅರ್ಕಾವತಿ ಹಗರಣದಲ್ಲಿ ₹20 ಸಾವಿರ ಕೋಟಿ ನಷ್ಟ ಮಾಡಿ, ಅನೇಕ ಜನರಿಗೆ ಮಂಜೂರಾತಿ ಕೊಟ್ಟು ಸೈಟ್ ಕೊಡಲಿಲ್ಲ. ಸಾಲ ಮಾಡಿ ಅನೇಕರು ಆತ್ಮಹತ್ಯೆ ಕೂಡ ಮಾಡಿಕೊಂಡರು. ಅರ್ಕಾವತಿ ಬಡಾವಣೆ ಸಾಲದ ಸುಳಿಗೆ ಸಿಲುಕಿ ನರಳಿ, ನರಳಿ ಜನ ಸತ್ತರು, ಕೆಲವು ನಿವೃತ್ತಿ ನೌಕರರು ನೊಂದು ಪ್ರಾಣಬಿಟ್ಟರು ಎಂದು ಬೇಸರ ವ್ಯಕ್ತ ಪಡಿಸಿದರು.----
ಬಾಕ್ಸ್ಪ್ರಾಮಾಣಿಕರಾಗಿದ್ದರೇ ಸಿಎಂ ರಾಜೀನಾಮೆ ನೀಡಲಿ
ಇಂತಹ ಕೆಟ್ಟ ಸರ್ಕಾರ ನಾನು ನೋಡಿರಲಿಲ್ಲ. ಇಂದು ಮುಡಾ ಹಗರಣವನ್ನು ಕಾಂಗ್ರೆಸ್ ಮಂತ್ರಿಗಳು, ಶಾಸಕರು ಮಾನ ಮರ್ಯಾದೆ ಇಲ್ಲದೇನೆ ಡಿಫೆಂಡ್ ಮಾಡಿಕೊಳ್ಳುತ್ತಿದ್ದಾರೆ. ಅಹಿಂದ ನಾಯಕ, ಬಡವರು, ದೀನ ದಲಿತರ ಬಗ್ಗೆ ಕಳಕಳಿ ಇರುವವ ಅಂತಾ ಹೇಳಿಕೊಳ್ಳುವ ಸಿದ್ದರಾಮಯ್ಯ ಪ್ರಾಮಾಣಿಕರಾಗಿದ್ದರೆ ಹಾಗೂ ಸಾಮಾಜಿಕ ಕಳಕಳಿ ಉಳ್ಳವರಾಗಿದ್ದರೆ ಕೂಡಲೇ ರಾಜೀನಾಮೆ ಕೊಡಬೇಕಿತ್ತು. ಆದರೆ, ಕೊಟ್ಟಿಲ್ಲ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.