ಯಳಂದೂರಿನ ಗೌಡಹಳ್ಳಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತೆ ವಸಂತ ಚಿನ್ನಸ್ವಾಮಿ ಆಯ್ಕೆ

KannadaprabhaNewsNetwork |  
Published : Dec 05, 2024, 12:30 AM IST
4ಸಿಎಚ್‌ಎನ್‌54ಯಳಂದೂರು ತಾಲೂಕಿನ ಗೌಡಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬುಧವಾರ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ವಸಂತ ಚಿನ್ನಸ್ವಾಮಿರನ್ನು ಸಹ ಸದಸ್ಯರು ಹಾಗೂ ಗ್ರಾಮಸ್ಥರು ಅಭಿನಂದಿಸಿದರು. | Kannada Prabha

ಸಾರಾಂಶ

ಯಳಂದೂರು ತಾಲೂಕಿನ ದೊಡ್ಡ ಗ್ರಾಮ ಪಂಚಾಯಿತಿಯಾಗಿರುವ ಗೌಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ವಸಂತ ಚಿನ್ನಸ್ವಾಮಿ ಆಯ್ಕೆಯಾಗಿದ್ದಾರೆ.

19 ಸದಸ್ಯರ ಗೌಡಹಳ್ಳಿ ಗ್ರಾಪಂ ಚುನಾವಣೆಯಲ್ಲಿ 12 ಮತದಿಂದ ವಸಂತ ಜಯ

ಕನ್ನಡಪ್ರಭ ವಾರ್ತೆ ಯಳಂದೂರು

ತಾಲೂಕಿನ ದೊಡ್ಡ ಗ್ರಾಮ ಪಂಚಾಯಿತಿಯಾಗಿರುವ ಗೌಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ವಸಂತ ಚಿನ್ನಸ್ವಾಮಿ ಆಯ್ಕೆಯಾಗಿದ್ದಾರೆ.

9 ಗ್ರಾಮಗಳನ್ನೊಳಗೊಂಡ ಈ ಪಂಚಾಯಿತಿ ಸ್ಥಾನವು ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿತ್ತು. ಈ ಹಿಂದೆ ಅಧ್ಯಕ್ಷರಾಗಿದ್ದ ಎನ್.ಗಾಯಿತ್ರಿ ರಾಜೀನಾಮೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಈ ಪಂಚಾಯಿತಿಗೆ ಚುನಾವಣೆ ನಿಗದಿಯಾಗಿತ್ತು. ಇಲ್ಲಿನ ಕಚೇರಿಯಲ್ಲಿ 19 ಸದಸ್ಯರು ಇರುವ ಈ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ವಸಂತ ಚಿನ್ನಸ್ವಾಮಿಗೆ 12 ಮತಗಳು ಲಭಿಸಿದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಮಾರವರಿಗೆ 7 ಮತಗಳು ಬಂದವು. ಹೀಗಾಗಿ ಚುನಾವಣಾಧಿಕಾರಿಯಾಗಿದ್ದ ಸಿಡಿಪಿಒ ಸಕಲೇಶ್ವರ್ ವಸಂತ ಚಿನ್ನಸ್ವಾಮಿ ಜಯಗಳಿಸಿರುವುದಾಗಿ ಅಧಿಕೃತವಾಗಿ ಘೋಷಿಸಿದರು.

ಬೆಂಬಲಿಗರ ಹರ್ಷೋದ್ಘಾರ:

ಪ್ರತಿಷ್ಠಿತ ಕ್ಷೇತ್ರವಾಗಿರುವ ಗೌಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷಗಾದಿಯ ಮೇಲೆ ಕಣ್ಣಿಟ್ಟಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ವಸಂತ ಜಯಗಳಿಸಿದ ಹಿನ್ನೆಲೆಯಲ್ಲಿ ರಸ್ತೆಯಲ್ಲೇ ಪಟಾಕಿ ಸಿಡಿಸಿ, ಸಿಹಿ ಹಂಚಿ ಪಕ್ಷದ ಪರ ಘೋಷಣೆಗಳನ್ನು ಕೂಗುವ ಮೂಲಕ ಹರ್ಷೋದ್ಘಾರ ವ್ಯಕ್ತಪಡಿಸಿದರು.

ಮಾದರಿ ಪಂಚಾಯಿತಿ ಮಾಡಲು ಶ್ರಮ:

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ವಸಂತ ಚಿನ್ನಸ್ವಾಮಿ ಮಾತನಾಡಿ, ಗೌಡಹಳ್ಳಿ ಗ್ರಾಮ ಪಂಚಾಯಿತಿ ತಾಲೂಕಿನ ದೊಡ್ಡ ಪಂಚಾಯಿತಿಯಾಗಿದೆ. ಇಲ್ಲಿಗೆ 9 ಗ್ರಾಮಗಳ ಒಳಪಡುತ್ತದೆ. ಪ್ರತಿ ಗ್ರಾಮಗಳಲ್ಲೂ ರಸ್ತೆ, ಚರಂಡಿ, ಕುಡಿಯುವ ನೀರು ಸೇರಿದಂತೆ ಮೂಲ ಸಮಸ್ಯೆಗಳ ನಿವಾರಣೆಗೆ ನಾನು ಪ್ರಥಮ ಆದ್ಯತೆಯನ್ನು ನೀಡುತ್ತೇನೆ. ಇದರೊಂದಿಗೆ ಎಲ್ಲಾ ಸದಸ್ಯರ ವಿಶ್ವಾಸವನ್ನು ಪಡೆದುಕೊಂಡು ಈ ಪಂಚಾಯಿತಿಯನ್ನು ಮಾದರಿಯಾಗಿ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ನನ್ನ ಆಯ್ಕೆಗೆ ಕಾರಣರಾದ ಗ್ರಾಪಂ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ನನ್ನ ಬೆಂಬಲಿಗರಿಗೆ ನಾನು ಚಿರಋಣಿಯಾಗಿದ್ದು ಈ ಪಂಚಾಯಿತಿಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಶ್ರಮಿಸುತ್ತೇನೆ ಎಂದು ನುಡಿದರು.

ಗ್ರಾಪಂ ಉಪಾಧ್ಯಕ್ಷ ಆರ್.ರಘು, ಸದಸ್ಯರಾದ ವಿ.ಅಶ್ವಿನಿ, ಚಂದ್ರಶೇಖರ್, ಎಂ.ಚಿನ್ನಸ್ವಾಮಿ, ಎಂ.ಶಿವಮಲ್ಲು, ಉಮಾ, ಎಸ್.ಪುಷ್ಪ, ಬಿ.ನಂದಿನಿ, ನೀಲವೇಣಿ, ಶಿವಣ್ಣನಾಯಕ್, ಆರ್.ನಾಗರಾಜು, ಆರ್.ಪ್ರಭುಸ್ವಾಮಿ, ಎನ್.ಮಮತ, ಎನ್.ಗಾಯತ್ರಿ, ರಾಜೇಶ್ವರಿ, ಎನ್.ಉಮೇಶ್ ಜಿಪಂ ಮಾಜಿ ಸದಸ್ಯ ವಡಗೆರೆದಾಸ್, ಗ್ರಾಪಂ ಮಾಜಿ ಅಧ್ಯಕ್ಷ ರವಿ, ಕಾಂಗ್ರೆಸ್ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೇಂದ್ರ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಯರಿಯೂರು ಪ್ರಕಾಶ್, ಗೌಡಹಳ್ಳಿ ರಾಜೇಶ್, ಶಂಭುಲಿಂಗಪ್ಪ, ಸಿದ್ದಲಿಂಗೇಗೌಡ, ನಾಗೇಂದ್ರಪ್ಪ, ಪಂಜು, ಬಸವರಾಜು, ರಾಜೇಶ್ ಪಿಡಿಒ ಶಿವಕುಮಾರ್ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ