ಬೆಳ್ತಂಗಡಿ: ಗ್ರಾಮವಿಕಾಸ ಗ್ರಾಮೀಣ ಶಾಲೆಗಳ ಅಭಿವೃದ್ಧಿ ಮೇಲೆ ಕೇಂದ್ರೀಕೃತವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆತಲ್ಲಿ ಗ್ರಾಮಾಭಿವೃದ್ಧಿ ಸಾಧ್ಯ ಎಂದು ಧರ್ಮಸ್ಥಳದ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ಅವರು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಕಚೇರಿಯಲ್ಲಿ ಸ್ಮಾರ್ಟ್‌ ಟಿವಿ ಹಸ್ತಾಂತರ ಹಾಗೂ ತಾಂತ್ರಿಕ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಸ್ಮಾರ್ಟ್‌ ಕ್ಲಾಸ್‌ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಮಕ್ಕಳಿಗೆ ಸಮರ್ಪಕ ತರಬೇತಿ ಮೂಲಕ ಆಧುನಿಕ ಶಿಕ್ಷಣಕ್ಕೆ ಪೂರಕವಾಗುವಂತೆ ಈ ಹೊಸ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಶುಭ ಹಾರೈಸಿದರು.

ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಕಾರ್ಯನಿವಾಹಕ ನಿರ್ದೇಶಕ ಅನಿಲ್ ಕುಮಾರ್ ಎಸ್ ಎಸ್ ಮಾತನಾಡಿ ಶ್ರೀಕ್ಷೇತ್ರದ ಮೂಲಕ ಡಾ. ಹೆಗ್ಗಡೆ ಅವರು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ನೀಡುತ್ತಿರುವ ಕೊಡುಗೆ ಅಪೂರ್ವವಾದದ್ದು, ಡಾ.ಹೆಗ್ಗಡೆ ಗ್ರಾಮೀಣ ವಿದ್ಯಾರ್ಥಿಗಳ ಅಭಿವೃದ್ಧಿ, ಶಾಲಾ ಕೊಠಡಿ, ಆಟದ ಮೈದಾನ, ಕುಡಿಯುವ ನೀರು, ಶಾಲಾ ಕಟ್ಟಡಗಳ ದುರಸ್ತಿ, ಶೌಚಾಲಯ,ಶಾಲಾ ಆವರಣ, ರಂಗಮಂದಿರ, ಭೋದನಾ ಸಾಮಗ್ರಿ ಒದಗಿಸುವುದು ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಪರಿಚಯಿಸಿದ್ದು ಇದಕ್ಕಾಗಿ ಇದುವರೆಗೆ ಒಟ್ಟು ೪೭.೬೯ ಕೋಟಿ ರು. ಪೂರಕ ಅನುದಾನವನ್ನು ನೀಡಿದ್ದಾರೆ ಎಂದರು.

ಪ್ರಸ್ತುತ ವರ್ಷದಲ್ಲಿ ೧೦೭೪ ಶಾಲೆಗಳಿಗೆ ಜ್ಞಾನದೀಪ ಗೌರವ ಶಿಕ್ಷಕ/ಶಿಕ್ಷಕಿಯರನ್ನು ನಿಯೋಜಿಸಿದ್ದು, ಇದುವರೆಗೆ ಒಟ್ಟು ೧೦,೩೫೧ ಜ್ಞಾನದೀಪ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಶಿಕ್ಷಣಕ್ಕೆ ಪೂರಕವಾಗಿ ಸುಜ್ಞಾನನಿಧಿ ಶಿಷ್ಯವೇತನ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಈ ಕಾರ್ಯಕ್ರಮದಲ್ಲಿ ಇದುವರೆಗೆ ರಾಜ್ಯದ ೧,೨೭,೫೯೩ ವಿದ್ಯಾರ್ಥಿಗಳಿಗಾಗಿ ೧೫೭.೩೯ ಕೋಟಿ ರು. ಮೊತ್ತದ ವಿದ್ಯಾರ್ಥಿವೇತನ ನೀಡಲಾಗಿದೆ ಎಂದು ವಿವರಿಸಿದರು.ಸರ್ಕಾರಿ ಶಾಲೆಗಳಿಗೆ ಡೆಸ್ಕ್ ಬೆಂಚ್‌ಗಳ ಕೊರತೆಯನ್ನು ನಿಗಿಸುವ ಸಲುವಾಗಿ ಒಟ್ಟು ರಾಜ್ಯದ ೧೧,೬೨೧ ಶಾಲೆಗಳಿಗೆ ೭೫,೫೧೮ ಜೊತೆ ಡೆಸ್ಕ್-ಬೆಂಚ್‌ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳು ಯಾವ ಕಾರಣಕ್ಕೂ ಮುಚ್ಚಬಾರದು ಎಂಬುದು ಡಾ.ಹೆಗ್ಗಡೆ ಆಶಯ. ಬಡವಿದ್ಯಾರ್ಥಿಗಳ ಕನಸನ್ನು ಸಾಕಾರಗೊಳಿಸುವಲ್ಲಿ ಡಾ.ಹೆಗ್ಗಡೆ ಅವರು ವಿದ್ಯಾರ್ಥಿಗಳ ಬೆನ್ನಿಗೆ ನಿಂತಿದ್ದು ಹಲವು ಮಕ್ಕಳ ಕನಸು ಇಂದು ನನಸಾಗಿದೆ. ಸರ್ಕಾರಿ ಶಾಲೆಗಳಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣ ಬೋಧಿಸಲು ಸ್ಮಾರ್ಟ್‌ ಕ್ಲಾಸ್‌ ಸಹಕಾರಿಯಾಗಿದ್ದು, ಡಾ. ಹೆಗ್ಗಡೆ ಅವರ ಅಭಿವೃದ್ಧಿ ಕಾಯಕಲ್ಪ ಸಮಾಜಕ್ಕೆ ಮಾದರಿ ಎಂದು ಹೇಳಿದರು.


ದ.ಕ. ಜಿಲ್ಲೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ವೇಣುಗೋಪಾಲ್. ಆರ್, ಬೆಳ್ತಂಗಡಿ ತಾಲೂಕು ಪಂಚಾಯತ್ ರಾಜ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೆ. ಬಿ ಜನಾರ್ದನ್, ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿಗಳು ಇದ್ದರು.

ಕೆರೆ ಹಗೂ ಶುದ್ಧಗಂಗಾ ವಿಭಾಗದ ನಿರ್ದೇಶಕ ಸಂತೋಷ್ ಸ್ವಾಗತಿಸಿದರು. ಸಮುದಾಯಭಿವೃದ್ದಿ ವಿಭಾಗದ ನಿರ್ದೇಶಕ ಮಹಾಬಲ ಕುಲಾಲ್ ವಂದಿಸಿದರು. ಪೂಜಾ ಪ್ರಶಾಂತ್ ಶೆಟ್ಟಿ ನಿರೂಪಿಸಿದರು.ಏನಿದು ಸ್ಮಾರ್ಟ್‌ ಕ್ಲಾಸ್‌: ಗ್ರಾಮೀಣ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ. ಅದರಂತೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಬಳಕೆಯ ಮಾಹಿತಿ ತೀರಾ ಕಡಿಮೆ ಇದೆ. ಈ ಸಮಸ್ಯೆಯನ್ನು ಅರಿತು ಡಾ. ಡಿ.ವೀರೇಂದ್ರ ಹೆಗ್ಗಡೆಯವರು ರಾಜ್ಯ ಸಭಾ ಸದಸ್ಯರ ನಿಧಿಯಿಂದ ಬೆಳ್ತಂಗಡಿ ತಾಲೂಕಿನ ೧೨೧ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ರು. ೧.೫೦ ಕೋಟಿ ಅನುದಾನದಲ್ಲಿ ಸ್ಮಾರ್ಟ್ ಕ್ಲಾಸ್ ಮಂಜೂರು ಮಾಡಿರುತ್ತಾರೆ. ಇದರಿಂದಾಗಿ ಸುಮಾರು ೧೨,೫೦೦ ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿದಂತಾಗಿದೆ.