ಕನ್ನಡಪ್ರಭ ವಾರ್ತೆ ಮಡಿಕೇರಿ ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಚುನಾವಣೆ ಸ್ಪರ್ಧೆಗೆ ಪ್ರಯತ್ನ ನಡೆಸುತ್ತೇನೆ. ನಾನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆ ಆಕಾಂಕ್ಷಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದ್ದಾರೆ.
ಆದರೆ ಹೈಕಮಾಂಡ್‌ನಲ್ಲಿ ಈಗ ಮಲ್ಲಿಕಾರ್ಜುನ ಖರ್ಗೆ ಅವರು ಇದ್ದಾರೆ. ನಮ್ಮನ್ನು ರಾಜಕೀಯವಾಗಿ ಎಲ್ಲಾ ಪ್ರೋತ್ಸಾಹ ಮಾಡಿದವರು ಅವರು. ಅವರೊಂದಿಗೆ ಕೆಲಸ ಮಾಡಿದ್ದೇನೆ. ನಮ್ಮ ಕೆಲಸದ ಬಗ್ಗೆ ಅವರಿಗೆ ಗೊತ್ತಿದೆ. ಮತ್ತು ಕಾಂಗ್ರೆಸ್‌ನ ಸಮಸ್ತ ನಾಯಕರು ತನಗೆ ಚಿರಪರಿಚಿತರು ಎಂದರು. ನಾನು ಮಂತ್ರಿಯಾಗಿ ಇರುವಾಗ ನನ್ನ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಳ ಹತ್ತಿರದಿಂದ ಸಾಕಷ್ಟು ಜನರು ನೋಡಿದವರು ಇದ್ದಾರೆ. ಹಾಗಾಗಿ ನನ್ನ ಅನುಭವದ ಆಧಾರದ ಮೇಲೆ ನನಗೂ ಒಂದು ಅವಕಾಶ ಮಾಡಿಕೊಡಿ. ನಾನು ಸಂಸದನಾಗಿ ಕೆಲಸ ಮಾಡಿದ್ದೇನೆ. ಅನುಭವದ ಆಧಾರದ ಮೇಲೆ ಕೊಡಿ ಎಂದು ಕೇಳುತ್ತೇನೆ ಎಂದು ಹೇಳಿದರು.
ಈ ಹಿಂದೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರವನ್ನು ಬೀಳಿಸುವುದರಲ್ಲಿ ನಮ್ಮ ಪಾತ್ರ ಹೆಚ್ಚು ಇದೆ. ಕಾಂಗ್ರೆಸ್‌ನವರು ಮತ್ತೆ ನಿಮ್ಮನ್ನು ಒಪ್ಪುತ್ತಾರ ಎಂಬ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್, ಮೂರು ಪಾರ್ಟಿಯಲ್ಲಿ ಇರುವವರು ಶುದ್ಧವಂತರೇ ಎಂದು ಮರು ಪ್ರಶ್ನೆ ಮಾಡಿದರು.ಸಿದ್ದರಾಮಯ್ಯ ಅವರು ಪರಿಶುದ್ಧ ಕಾಂಗ್ರೆಸ್ ನಾಯಕರೇ? ಯಡಿಯೂರಪ್ಪ ಅವರು ಶುದ್ಧ ಬಿಜೆಪಿನಾ? ಎಲ್ಲರೂ ಪಕ್ಷಾಂತರಿಗಳೇ. ನಾವು ಅಂದು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರಿಗೆ ಅಧಿಕಾರ ಕೊಡಲು ನಾವು ಬಿಜೆಪಿಗೆ ಹೋದವರು. ಅದರಲ್ಲೂ ಅಧಿಕಾರಕ್ಕಾಗಿ ಬಿಜೆಪಿ ಜೆಡಿಎಸ್‌ಗೆ ಅಧಿಕಾರಕ್ಕಾಗಿ ಹೋಗಿಲ್ಲ. ನಾನು ಅಧಿಕಾರ ಕೊಡಲು ಹೋದವನು ಎಂದರು.