ಕನ್ನಡಪ್ರಭ ವಾರ್ತೆ ದಾವಣಗೆರೆ
ಕಾಂಗ್ರೆಸ್ಸಿನ ಹಿರಿಯ ನಾಯಕ, ದಾವಣಗೆರೆ ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರ ಕಿರಿಯ ಸೊಸೆ ಹಾಗೂ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ್‌ರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ದುಗ್ಗಮ್ಮನ ಜಾತ್ರೆ ವೇಳೆಯೇ ಪಕ್ಷವು ಸಿಹಿ ಸುದ್ದಿ ಘೋಷಣೆ ಮಾಡಿದೆಯೆಂಬ ಸಂಭ್ರಮದಲ್ಲಿದ್ದಾರೆ. ತಾಲೂಕಿನ ಕಕ್ಕರಗೊಳ್ಳ ಗ್ರಾಮದ ಕೃಷಿ ಹಿನ್ನೆಲೆಯ ಗೌಡ್ರು ಕುಟುಂಬದಲ್ಲಿ ಗಿರಿಜಮ್ಮ, ಕೆ.ಜಿ.ಪರಮೇಶ್ವರಪ್ಪ ಗೌಡ್ರು ಪುತ್ರಿಯಾಗಿ 15.3.1976ರಲ್ಲಿ ಜನಿಸಿದ ಡಾ.ಪ್ರಭಾ ಮಲ್ಲಿಕಾರ್ಜುನ ಹರಿಹರ ಸಮೀಪದ ಕುಮಾರ ಪಟ್ಟಣಂನ ಫಾಲಿ ಫೈಬರ್ಸ್ ಸಿಬಿಎಸ್ಇ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಮುಗಿಸಿ, ನಂತರ ದಾವಣಗೆರೆ ಬಾಪೂಜಿ ದಂತ ವೈದ್ಯಕೀಯ ಕಾಲೇಜಿನಲ್ಲಿದಂತ ವಿಜ್ಞಾನದಲ್ಲಿ ಪದವಿ ಪಡೆದವರು. ಶಾಮನೂರು ಶಿವಶಂಕರಪ್ಪನವರ ಕಿರಿಯ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ್‌ರನ್ನು ವಿವಾಹವಾದ ಡಾ.ಪ್ರಭಾ ಮಲ್ಲಿಕಾರ್ಜುನ ದಂಪತಿಗೆ ಮೂವರು ಮಕ್ಕಳು, ಸಮರ್ಥ, ಶ್ರೇಷ್ಠ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ವ್ಯಾಪಾರ, ರಾಜಕೀಯ, ಧಾರ್ಮಿಕ, ಸಾಮಾಜಿಕ ಹೀಗೆ ಪತಿ ಮಲ್ಲಿಕಾರ್ಜುನ್‌ರಿಗೆ ಹೆಗಲಿಗೆ ಹೆಗಲು ಕೊಟ್ಟು ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ. ಬಾಪೂಜಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿ, ಎಸ್ಸೆಸ್ ಕೇರ್ ಟ್ರಸ್ಟ್‌ನ ಲೈಫ್ ಟ್ರಸ್ಟಿಯಾಗಿ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯ ಕೈಗೊಳ್ಳುತ್ತಾ ಬಂದಿದ್ದಾರೆ. ಮಕ್ಕಳಿಂದ ವಯೋವೃದ್ಧರವರೆಗೆ ಟ್ರಸ್ಟ್ ಮೂಲಕ ನೆರವಿನ ಹಸ್ತ ಚಾಚುತ್ತಿದ್ದಾರೆ.
ಅದೇ ಕಕ್ಕರಗೊಳ್ಳ ಗ್ರಾಮದ ಮೂಲದವರಾದ ಕುರುಬ ಸಮುದಾಯದವರಾದ ಬೆಂಗಳೂರಿನ ಇನ್ ಸೈಟ್ಸ್ ಐಎಎಸ್-ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಅಕಾಡೆಮಿ ಸಂಸ್ಥಾಪಕ ಜಿ.ಬಿ.ವಿನಯಕುಮಾರ ಸಹ ದಾವಣಗೆರೆ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಕಡೆಯ ಕ್ಷಣದವರೆಗೂ ಪ್ರಯತ್ನ ನಡೆಸಿದ್ದರು. ಕಾಂಗ್ರೆಸ್ ಪಕ್ಷವು ಸಹ ಕ್ಷೇತ್ರಕ್ಕೆ ಇಬ್ಬರ ಮಧ್ಯೆ ತೀವ್ರ ಪೈಪೋಟಿ, ಒತ್ತಡ ಸಹಜವಾಗಿಯೇ ಇದ್ದುದರಿಂದ ತಡವಾಗಿ ಟಿಕೆಟ್ ಘೋಷಣೆ ಮಾಡಿದೆ. ಕಡೆಗೂ ದಾವಣಗೆರೆ ಟಿಕೆಟ್ ಶಾಮನೂರು ಅವರ ಕಿರಿಯ ಸೊಸೆ ಡಾ.ಪ್ರಭಾ ಮಲ್ಲಿಕಾರ್ಜುನ್‌ರ ಪಾಲಾಗಿದೆ.