ಜಮಖಂಡಿ : ಶಿಗ್ಗಾಂವಿ-ಸವಣೂರು, ಚನ್ನಪಟ್ಟಣ ಹಾಗೂ ಸಂಡೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಉದ್ಯಮಿ ತೌಫಿಕ್ ಪಾರ್ಥನಳ್ಳಿ ನಿವಾಸಕ್ಕೆ ಗುರುವಾರ ಭೇಟಿ ನೀಡಿದ ಸಚಿವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿದೆ. ಐದು ಜನಪರ ಯೋಜನೆ ಜಾರಿಗೆ ತಂದು ಜನರ ವಿಶ್ವಾಸಕ್ಕೆ ಪಾತ್ರವಾಗಿದೆ. ಸಿಎಂ ಸಿದ್ದರಾಮಯ್ಯ ನುಡಿದಂತೆ ನಡೆಯುತ್ತಿದ್ದು ಎಲ್ಲ ಜಾತಿ, ಜನಾಂಗದವರನ್ನು ಹೊಂದಾಣಿಕೆ ಮಾಡಿಕೊಂಡು ಸರ್ಕಾರ ನಡೆಸುತ್ತಿದ್ದಾರೆ. ಆದ್ದರಿಂದ ಮೂರು ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲುವುದು ಶತಃಸಿದ್ಧ ಎಂದ ಅವರು, ಪಕ್ಷವನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ ಕೆಲಸ ಮಾಡುತ್ತಿದ್ದು, ಅವರ ಪ್ರಯತ್ನದ ಫಲವಾಗಿ ಗೆಲುವು ನಮ್ಮದೇ ಎಂದರು.
ಶಿಗ್ಗಾಂವ-ಸವಣೂರು, ಚನ್ನಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಪುತ್ರರು ಚುನಾವಣಾ ಕಣದಲ್ಲಿದ್ದಾರೆ. ಆದರೂ ರಾಜ್ಯ ಸರ್ಕಾರದ ಜನಪರ ನೀತಿಗಳು ಕಾಂಗ್ರೆಸ್ ಗೆಲುವಿಗೆ ಕಾರಣವಾಗಲಿವೆ. ಜನರು ಕಾಂಗ್ರೆಸ್ ಆಡಳಿತ ಮೆಚ್ಚಿಕೊಂಡಿದ್ದಾರೆ. ಹಿಂದುಳಿದ ಜನಾಂಗಗಳ ಏಳಿಗೆಗಾಗಿ ಸರ್ಕಾರ ಒಳ ಮೀಸಲಾತಿಯಂತಹ ಕಾನೂನು ಜಾರಿಗೆ ತರುತ್ತಿದೆ. ಸರ್ಕಾರ ಬಡವರ, ಹಿಂದುಳಿದವರ ಪರವಾಗಿ ಕೆಲಸಮಾಡುತ್ತಿದ್ದು ದಲಿತರು ಹಿಂದುಳಿದವರು ಶೋಷಿತರು ಸಶಕ್ತರಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ದಲಿತರ ಮೇಲಿನ ಹಲ್ಲೆ ಪ್ರಕರಣ ಹತ್ತಿಕ್ಕಲು ಕಠಿಣ ಕಾನೂನು ರೂಪಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಕೆಪಿಸಿಸಿ ರಾಜ್ಯ ಸಂಯೋಜಕ ಸದುಗೌಡ ಪಾಟೀಲ, ಲೋಕಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ಸಿದ್ಧು ಸೂರ್ಯವಂಶಿ, ಅಬುಬಕರ ಕುಡಚಿ, ಜಬ್ಬಾರ ಮುಂಡಗನೂರ, ಜಾಕೀರ ಹುಸೇನ್ ನದಾಫ, ಇಬ್ರಾಹಿಂ ಪಾರ್ಥನಳ್ಳಿ, ಸೂರಜ ಕೊಟರಾಣಿ, ದಾದಾಪೀರ ಮಂಗಳವಾಡೆ, ಮಹಮದ್ ಅಜಮಲ್ ಹಕ್ ಮುಂತಾದವರಿದ್ದರು.