ಕುಷ್ಟಗಿ: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಮತದಾರರು ಹೊರಗುಳಿಯದಂತೆ ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಏಜೆಂಟರು,ಪಕ್ಷದ ಮುಖಂಡರು ಎಚ್ಚರಿಕೆ ವಹಿಸಿ ಜಾಗೃತಿಯಿಂದ ಕೆಲಸ ಮಾಡಬೇಕು ಎಂದು ತುಂಗಭದ್ರಾ ಕಾಡಾ ನಿಗಮ ಅಧ್ಯಕ್ಷ ಮಾಜಿ ಶಾಸಕ ಹಸನಸಾಬ ದೋಟಿಹಾಳ ಹೇಳಿದರು.
ಎಸ್ಐಆರ್ ನಲ್ಲಿ ಮತದಾರರು ಪಟ್ಟಿಯಿಂದ ಹೊರಗೆ ಹೋದರೆ ಮುಂದೆ ಸರ್ಕಾರಿ ಸೌಲಭ್ಯ ಸಿಗುವುದಿಲ್ಲ. ಗ್ಯಾರಂಟಿ ಸೌಲಭ್ಯ ಸಹ ಸಿಗುವುದಿಲ್ಲ ಪ್ರತಿಯೊಬ್ಬ ನಾಗರಿಕರು ಎಸ್‌ಐಆರ್ ಬಗ್ಗೆ ತಿಳಿದು ಮತದಾರರ ಪಟ್ಟಿಯಿಂದ ಹೊರಗಡೆ ಹೋಗದಂತೆ ಜಾಗ್ರತೆ ವಹಿಸಬೇಕು ಎಂದರು.
ಪಕ್ಷದ ಬೂತ್ ಮಟ್ಟದ ಏಜೆಂಟರು ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಹೊಂದುವ ಮೂಲಕ ಮತದಾರರ ಬಗ್ಗೆ ಮಾಹಿತಿ ಪಡೆದುಕೊಂಡು ವಲಸೆ ಹೋಗಿರುವ ಮತದಾರರಿಗೆ ಪೋನ್ ಮೂಲಕ ಸಂಪರ್ಕ ಮಾಡಿ ಅವರನ್ನು ಕರೆಯಿಸಿ ಫಾರಂ ಭರ್ತಿ ಮಾಡುವ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರುಳಿಯುವಂತೆ ಮಾಡಬೇಕು ಎಂದರು.ಈವರೆಗೆ ದೇಶದ 13 ರಾಜ್ಯಗಳಲ್ಲಿ ಎಸ್ಐಆರ್ ನಡೆದಿದ್ದು, 6.5 ಕೋಟಿ ಮತದಾರರನ್ನು ಪಟ್ಟಿಯಿಂದ ಹೊರ ಹಾಕಲಾಗಿದೆ. ಇದರಲ್ಲಿ ಶೇ.1 ರಷ್ಟು ಮೃತಪಟ್ಟವರಿದ್ದರೂ 5 ಕೋಟಿ ಜನರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ. ಬಿಹಾರದಲ್ಲಿ 62 ಲಕ್ಷ, ಪಶ್ಛಿಮ ಬಂಗಾಳದಲ್ಲಿ 91 ಲಕ್ಷ, ಉತ್ತರ ಪ್ರದೇಶದಲ್ಲಿ 2.3 ಕೋಟಿ ಜನ ತಮ್ಮ ಮತ ನೀಡುವ ಹಕ್ಕನ್ನು ಕಳೆದುಕೊಂಡಿದ್ದಾರೆ ಆದ್ದರಿಂದ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.
ಕಾಂಗ್ರೆಸ್ ಯುವ ಮುಖಂಡ ದೊಡ್ಡಬಸವನಗೌಡ ಪಾಟೀಲ ಬಯ್ಯಾಪೂರ ಮಾತನಾಡಿ, ನಮ್ಮ ಮತವು ಮೂಲಭೂತ ಹಕ್ಕಾಗಿದ್ದು, ಅದನ್ನು ರಕ್ಷಿಸಿಕೊಳ್ಳುವ ಹೊಣೆ ನಮ್ಮದಾಗಿದೆ. ಬೂತ್ ಮಟ್ಟದ ಏಜೆಂಟರಿಗೆ ತಾಲೂಕು ಮತ್ತು ಹೋಬಳಿಯಲ್ಲಿ ತರಬೇತಿ ನೀಡಲಾಗುವದು ಮತದಾರರ ಪಟ್ಟಿ ಪರಿಷ್ಕರಣೆ ಸಮಯದಲ್ಲಿ ಹೊಸ ಮತದಾರರನ್ನು ಸೇರಿಸುವ ಅವಕಾಶವಿದೆ ಕಾರ್ಯಕರ್ತರು ಹಾಗೂ ಬೂತ್ ಮಟ್ಟದ ಏಜೆಂಟರು ಉತ್ತಮ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕಲ್ಲಪ್ಪ ತಳವಾರ, ಯಲ್ಲಪ್ಪ ಬಾಗಲಿ, ಆಯಿಶಾಖಾನ್, ಶಾರದಾ ಕಟ್ಟಿಮನಿ, ದೊಡ್ಡಯ್ಯ ಗದ್ದಡಕಿ, ಕೇದಾರನಾಥ ತುರಕಾಣಿ, ಇಮಾಮಸಾಬ ಗರಡಿಮನಿ ಸೇರಿದಂತೆ ಅನೇಕರು ಇದ್ದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖಂಡರು, ಬೂತ್ ಮಟ್ಟದ ಏಜೆಂಟರು ಇದ್ದರು.