ಕನ್ನಡಪ್ರಭ ವಾರ್ತೆ ಮದ್ದೂರು
ಬಿಜೆಪಿ- ಜೆಡಿಎಸ್‌ನ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್‌ನಿಂದ ಪಟ್ಟಣದಲ್ಲಿ ಬೃಹತ್ ಜನಾಂದೋಲನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.ಕಾರ್ಯಕ್ರಮ ನಡೆಯಲಿರುವ ಪಟ್ಟಣದ ತಾಲೂಕು ಕ್ರೀಡಾಂಗಣದ ಸ್ಥಳಕ್ಕೆ ಭಾನುವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಜನಪ್ರತಿನಿಧಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಸೇರಿದಂತೆ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಮಾವೇಶವನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸರ್ಕಾರದ ವಿವಿಧ ಸಚಿವರು, ಜಿಲ್ಲೆಯ ಶಾಸಕರು, ನಿಗಮ ಮಂಡಳಿ ಅಧ್ಯಕ್ಷರು, ಮುಖಂಡರು ಭಾಗವಹಿಸಲಿದ್ದಾರೆ ಎಂದರು.ಕೇಂದ್ರ ಸರ್ಕಾರದ ಮಲತಾಯಿ ಧೋರಣೆ, ಎನ್.ಡಿ.ಎ ಮೈತ್ರಿ ಕೂಟದ ಅಪಪ್ರಚಾರ, ರಾಜ್ಯ ಸರ್ಕಾರ ಸಿಎಂ ಹಾಗೂ ಡಿಸಿಎಂ ವಿರುದ್ಧ ಅಪಪ್ರಚಾರ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಜನಾಂದೋಲನ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಯಾವುದೇ ರೀತಿಯಲ್ಲೂ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.ಕಾಂಗ್ರೆಸ್ ಯಾರ ಹಂಗಿಲ್ಲದೆ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಗ್ಗೂಡಿ ಜಾರಿಗೆ ತಂದಿರುವ ಜನಪರ ಯೋಜನೆಗಳ ಯಶಸ್ವಿಯನ್ನು ಸಹಿಸದೆ ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡ ಚಿದಂಬರ್, ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಪುರಸಭಾ ಸದಸ್ಯರಾದ ಎಂ.ಬಿ.ಸಚಿನ್, ಶಾಂತಮ್ಮ, ಪೂಜಾರಿ ವೆಂಕಟೇಶ್, ಮೋಹನ್ ಗೌಡ, ಮಾಜಿ ಅಧ್ಯಕ್ಷ ಎಂಪಿ ಅಮರಬಾಬು, ಮಾಜಿ ಸದಸ್ಯರಾದ ಡಾಬಾ ಮಹೇಶ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ಪಿ.ರಾಘವ, ಎಪಿಎಂಸಿ ಮಾಜಿ ಅಧ್ಯಕ್ಷ ಎಂ.ಡಿ.ಮಹಾಲಿಂಗಯ್ಯ, ಮನ್ಮುಲ್ ಮಾಜಿ ನಿರ್ದೇಶಕ ಹರೀಶ್ ಬಾಬು, ಮುಖಂಡರಾದ ಫೈರೋಜ್ ಮತ್ತಿತರರು ಇದ್ದರು.ಸಮಾವೇಶಕ್ಕೆ 20 ಸಾವಿರಕ್ಕೂ ಹೆಚ್ಚಿನ ಜನ
ಮದ್ದೂರು:ಪಟ್ಟಣದಲ್ಲಿ ಆ.5ರಂದು ಕಾಂಗ್ರೆಸ್ ಹಮ್ಮಿಕೊಂಡಿರುವ ಬೃಹತ್ ಜನಾಂದೋಲನ ಸಮಾವೇಶಕ್ಕೆ ತಾಲೂಕಿನಿಂದ ಸುಮಾರು 20 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಆಗಮಿಸುವ ಸಾಧ್ಯತೆ ಇದೆ.
ಕಾರ್ಯಕ್ರಮ ಯಶಸ್ವಿಗೊಳಿಸಲು, ವಿವಿಧ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರದ ಜನರನ್ನು ಸೇರಿಸಲು ಸ್ಥಳೀಯ ಮುಖಂಡರಿಗೆ ಜವಾಬ್ದಾರಿ ವಹಿಸಲಾಗಿದೆ.ಸಮಾವೇಶದ ಅಂಗವಾಗಿ ಬೆಂಗಳೂರು-ಮೈಸೂರು ಹಳೆ ಹೆದ್ದಾರಿಯುದ್ದಕ್ಕೂ ಪಕ್ಷದ ಬಾವುಟ ಹಾಗೂ ನಾಯಕರ ಫ್ಲೆಕ್ಸ್‌ಗಳನ್ನು ರಾತ್ರಿಯಿಡೀ ಅಳವಡಿಸಿದರು. ಜೊತೆಗೆ ಸ್ಥಳೀಯ ಮುಖಂಡರು ಸಿಎಂ, ಡಿಸಿಎಂ, ಸಚಿವರು ಸೇರಿದಂತೆ ತಮ್ಮ ನಾಯಕರಿಗೆ ಸ್ವಾಗತ ಕೋರುವ ಫ್ಲೆಕ್ಸ್‌ಗಳು ಅಲ್ಲಲ್ಲಿ ರಾರಾಜಿಸುತ್ತಿವೆ.