ಸರ್ಕಾರದ ವಿರುದ್ಧ ಹಾಗೂ ಶಾಸಕರ ವೈಫಲ್ಯತೆ ಖಂಡಿಸಿ ಬೃಹತ್ ಪ್ರತಿಭಟನಾ ಸಭೆ
--- ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸಂತ್ರಸ್ಥರಿಗೆ ಪ್ಯಾಕೇಜ್ ಪರಿಹಾರ ನೀಡಿ
- ಒಂದೆಡೆ ಕಾಂಗ್ರೆಸ್ ಕಾರ್ಯಕರ್ತರ ದಬ್ಬಾಳಿಕೆ, ಇನ್ನೊಂದೆಡೆ ಕಾಡು ಪ್ರಾಣಿಗಳ ಹಾವಳಿ- ಕಾಂಗ್ರೆಸ್ ಕಾರ್ಯಕರ್ತರ ದಬ್ಬಾಳಿಕೆ, ದೌರ್ಜನ್ಯ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹೆಚ್ಚಳ
ಕನ್ನಡಪ್ರಭ ವಾರ್ತೆ, ಶೃಂಗೇರಿರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ. ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ದುರಾಡಳಿತ ಮಿತಿಮೀರುತ್ತಿದೆ. ಮುಂದಿನ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷದವರಿಗೆ ಠೇವಣಿ ಕೂಡ ಸಿಗುವುದಿಲ್ಲ ಎಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಎದುರು ಬಿಜೆಪಿ ಆಯೋಜಿಸಿದ್ದ ಸರ್ಕಾರದ ವಿರುದ್ಧ ಹಾಗೂ ಶಾಸಕರ ವೈಫಲ್ಯತೆ ಖಂಡಿಸಿ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ದಬ್ಬಾಳಿಕೆ, ದೌರ್ಜನ್ಯ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹೆಚ್ಚುತ್ತಿದೆ. ಜನಸಾಮಾನ್ಯರು ತತ್ತರಿಸಿಹೋಗಿದ್ದಾರೆ. ಕಚೇರಿಗಳಲ್ಲಿ ಕೆಲಸ ಆಗುತ್ತಿಲ್ಲ. ಅಧಿಕಾರಿಗಳು ಕೆಲಸ ಮಾಡಲು ಒತ್ತಡ ಹಾಕುತ್ತಿದ್ದಾರೆ. ಒಂದೆಡೆ ಕಾಂಗ್ರೆಸ್ ಕಾರ್ಯಕರ್ತರ ದಬ್ಬಾಳಿಕೆ, ಇನ್ನೊಂದೆಡೆ ಕಾಡು ಪ್ರಾಣಿಗಳ ಹಾವಳಿ ಇಂದ ಜನ ಬಸವಳಿದಿದ್ದಾರೆ ಎಂದರು.ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆ, ಜಮೀನು ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ. ಆನೆಗಳ ಹಾವಳಿ ಹೆಚ್ಚುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಮೌನವಾಗಿದ್ದಾರೆ. ರೈತರು ನೆಮ್ಮದಿ, ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಶಾಸಕರು ಕರ್ತವ್ಯ ವಿಫಲರಾಗಿದ್ದು ಜನರ ಬದುಕಿನೊಂದಿಗೆ ಚೆಲ್ಲಾಟವಾಡುವುದು ಬಿಟ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿ ಎಂದು ಹೇಳಿದರು.
ಶಾಸಕರು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಕೆಲಸ ಮಾಡಲು ಜೀವರಾಜ್ ಬಿಡುತ್ತಿಲ್ಲ ಎಂದು ನೆಪ ಹೇಳುತ್ತಿದ್ದರು. ಈಗ ಅವರದ್ದೇ ಸರ್ಕಾರವಿದೆ. ಕೆಲಸ ಯಾಕೆ ಮಾಡುತ್ತಿಲ್ಲ. ಸಾವಿನ ಮನೆಗೆ ಸೈರನ್ ಹಾಕಿಕೊಂಡು ಹೋಗುತ್ತಾರೆ. ಆದರೆ ಸೈರನ್ ಇರೊ ಆಂಬುಲೆನ್ಸ್ ಸರಿ ಮಾಡಲು ಆಗುವುದಿಲ್ಲ. ಜೀವ ಇರೋ ವ್ಯಕ್ತಿಗೆ ಆಸ್ಪತ್ರೆಗೆ ಸಾಗಿಸಲು ಇವರ ಸರ್ಕಾರದಲ್ಲಿ ಆಂಬುಲೆನ್ಸ್ ವ್ಯವಸ್ಥೆ ಸರಿ ಮಾಡಲು ಸಾಧ್ಯವಿಲ್ಲದಂತಾಗಿದೆ ಎಂದು ಕಿಡಿಕಾರಿದರು.ಶೃಂಗೇರಿ ಅಗತ್ಯ 100 ಬೆಡ್ ಆಸ್ಪತ್ರೆ ಸ್ಥಾಪಿಸಲು ಆಗಿಲ್ಲ. ಆಸ್ಪತ್ರೆ ನಿರ್ಮಾಣಕ್ಕೆ ಒತ್ತಾಯಿಸಿ ಬ್ಯಾನರ್ ಹಾಕಿದವರ ವಿರುದ್ಧ ಎಐಆರ್ ಹಾಕುತ್ತಾರೆ. ಇಷ್ಟು ವರ್ಷವಾದ್ರು ಜಾಗ ಗುರುತಿಸಲು ಆಗಿಲ್ಲ. ಈಗ ಇರುವ ಆಸ್ಪತ್ರೆಯನ್ನಾದರೂ ಮೇಲ್ದರ್ಜೆಗೇ ರಿಸಲಿ. ಅಕ್ರಮ ಮರಳು, ಮಣ್ಣು ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಸಿಕ್ಕಿಹಾಕಿಕೊಂಡರೆ ದಂಡ ಹಾಕಿ ಬಿಡ್ತಾರೆ. ಬಿಜೆಪಿಯವರಾದರೆ ಎಫ್ಐಆರ್ ಹಾಕ್ತಾರೆ. ಅಧಿಕಾರಿಗಳು ಅವರ ಒತ್ತಡಕ್ಕೆ ಕೆಲಸ ಮಾಡುವಂತಹ ದಯನೀಯ ಸ್ಥಿತಿ ಕ್ಷೇತ್ರದಲ್ಲಿದೆ ಎಂದರು.
ಜೆಜೆಎಂ ನಲ್ಲಿ ನಡೆದಿರುವ ಭ್ರಷ್ಟಾಚಾರದ ತನಿಖೆಯಾಗಬೇಕು .ಪೈಪ್ ಲೈನ್, ನಲ್ಲಿ ಆಗಿದೆ.ಆದರೆ ನೀರು ಮಾತ್ರ ಇಲ್ಲ. ಇದಕ್ಕೂ ಜೀವರಾಜ್ ಅಡ್ಡಿ ಎನ್ನುತ್ತಾರೆ. ಕ್ಷೇತ್ರದಲ್ಲಿ ಕೀಳುಮಟ್ಟದ, ದ್ವೇಷದ ರಾಜಕಾರಣ ನಡೆಯುತ್ತಿದೆ. ಹಕ್ಕುಪತ್ರ, ಸಾಗುವಳಿ ಚೀಟಿ ನೀಡುತ್ತಿಲ್ಲ. ನಮ್ಮ ಅವಧಿಯಲ್ಲಿ ನೀಡಿದ ಸಾಗುವಳಿ ಚೀಟಿಗೆ ಪಹಣಿ ಹಾಕಿಸಲು ಆಗಿಲ್ಲ. ತಮ್ಮ ಅಸಮರ್ಥತೆ, ವೈಫಲ್ಯ ಮುಚ್ಚಿಕೊಳ್ಳಲು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.ದೌರ್ಜನ್ಯ ಮಾಡಿದವರಿಗೆ ಉಳಿಗಾಲವಿಲ್ಲ. ಜನರು ತಕ್ಕ ಪಾಠ ಕಲಿಸುತ್ತಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸಿ ತಕ್ಕಂತೆ ಕೆಲಸ ಮಾಡಲಿ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸಂತ್ರಸ್ಥರಿಗೆ ಪುನರ್ ವಸತಿ ಪ್ಯಾಕೇಜ್ ಪರಿಹಾರ ನೀಡಬೇಕು. ಶಾಸಕರಾಗಿ ಜನರ ಸಮಸ್ಯೆಗೆ ಸ್ಪಂದಿಸಿ ಕೆಲಸ ಮಾಡಬೇಕು. ಇಲ್ಲದಿದ್ದರೆ ರಾಜಿನಾಮೆ ನೀಡಿ ಮನೆಗೆ ಹೋಗಬೇಕು ಎಂದರು.
ಬೆಳಿಗ್ಗೆ ಪಟ್ಟಣದ ನೂತನ ಬಸ್ ನಿಲ್ದಾಣದಿಂದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಹೊರಟು ತಾಲೂಕು ಕಚೇರಿ ಎದುರು ಸಮಾವೇಶ ಗೊಂಡಿತು. ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಬಿಜೆಪಿ ಮುಖಂಡರಾದ ಅರುಣ್ ಕುಮಾರ್. ಟಿ.ಎಸ್,ಉಮೇಶ್, ಶಿವಶಂಕರ್, ನೂತನ್, ನಟೇಶ್ ಮತ್ತಿತರರು ಇದ್ದರು.17 ಶ್ರೀ ಚಿತ್ರ 1-
ಶೃಂಗೇರಿ ಪಟ್ಟಣದ ತಾಲೂಕು ಕಚೇರಿ ಎದುರು ಬಿಜೆಪಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿದರು.17 ಶ್ರೀ ಚಿತ್ರ 2-ಪ್ರತಿಭಟಾನಾ ಸಭೆಯಲ್ಲಿ ಕಾರ್ಯಕರ್ತರು.