ಕನ್ನಡಪ್ರಭ ವಾರ್ತೆ ಮಡಿಕೇರಿ
ಬಿಜೆಪಿ ಕಾರ್ಯಕರ್ತ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವ ಮೂಲಕ ಕಾಂಗ್ರೆಸ್ ದಬ್ಬಾಳಿಕೆಯ ರಾಜಕಾರಣ ಮಾಡುತ್ತಿದ್ದು, ಇದಕ್ಕೆ ಬಿಜೆಪಿ ಜಗ್ಗುವುದಿಲ್ಲ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್ ಎಚ್ಚರಿಸಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷ ಪುರೈಸಿದೆ. ಇದುವರೆಗೆ ಕೊಡಗಿಗೆ ಪೂರಕ ಅಭಿವೃದ್ಧಿ ಕಾರ್ಯಕ್ರಮಗಳು ತಂದಿಲ್ಲ. ಪರಿಣಾಮ ಜಿಲ್ಲೆಯ ಮತದಾರರು ಲೋಕಸಭೆಯಲ್ಲಿ ಕಾಂಗ್ರೆಸ್‌ನ್ನು ತಿರಸ್ಕಾರ ಮಾಡಿದೆ. ಆ ಕಾರಣಕ್ಕೆ ಹೆದರಿಸಿದರೆ ಬಿಜೆಪಿ ನಾಶವಾಗುತ್ತದೆ ಎಂಬ ಭಾವನೆಯಲ್ಲಿ ವಿರಾಜಪೇಟೆ ಶಾಸಕರು ಇದ್ದಾರೆ. ಅದರೆ, ಬಿಜೆಪಿ ಬಗ್ಗುವುದಿಲ್ಲವೆಂದರು.
ಪೊಲೀಸ್ ಇಲಾಖೆಯ ಅನುಮತಿ ಪಡೆದು ಇತ್ತೀಚೆಗೆ ವಿರಾಜಪೇಟೆಯಲ್ಲಿ ಪೆಟ್ರೋಲ್, ಡೀಸಲ್ ದರ ಏರಿಕೆ ಖಂಡಿಸಿ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ಮಾಡಲಾಗಿತ್ತು. ಪ್ರತಿಭಟನೆಯಿಂದ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿದೆ ಎಂದು ಇಂದು ೨೯ ಜನರ ಮೇಲೆ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿ ಎಲ್ಲ ಕಡೆ ಪ್ರತಿಭಟನೆ ನಡೆದಿದೆ. ಪ್ರಕರಣ ಎಲ್ಲೂ ದಾಖಲಾಗಿಲ್ಲ. ವಿರಾಜಪೇಟೆಯಲ್ಲಿ ಮಾತ್ರ ಯಾಕೆ? ಪ್ರಕರಣ ಹಾಕಿ ಬೆದರಿಸುವ ತಂತ್ರ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದ ಅವರು, ಇಂತಹ ಬೆದರಿಕೆಗೆ ಬಿಜೆಪಿ ಹೆದರಲ್ಲ. ಕಾನೂನಾತ್ಮಕವಾಗಿ ಎದುರಿಸುತ್ತದೆ ಎಂದು ಎಚ್ಚರಿಸಿದರು.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಮಾತನಾಡಿ, ಇಂದು ಬಿಜೆಪಿಗೆ ಕಾಂಗ್ರೆಸ್ ಸಭ್ಯತೆ, ಸಂಸ್ಕೃತಿಯ ಪಾಠ ಮಾಡಲು ಬರುತ್ತಿದೆ. ಆದರೆ, ೨೦೧೩ರಲ್ಲಿ ಕಾಂಗ್ರೆಸ್‌ನಿಂದ ಬೋಪಯ್ಯ ಅವರ ಪ್ರತಿಕೃತಿ ದಹನ ಮಾಡಿದಾಗ ಕಾಂಗ್ರೆಸ್‌ಗೆ ಸಭ್ಯತೆ, ಸಂಸ್ಕೃತಿ ಎಲ್ಲಿ ಹೋಗಿತ್ತು. ಪ್ರಧಾನಿಯನ್ನು ಕೂಡ ಅವಮಾನ ಮಾಡುವ ಕಾಂಗ್ರೆಸಿಗರಿಗೆ ಅರಿವಿರಲಿಲ್ಲವೇ ಎಂದು ಪ್ರಶ್ನಿಸಿದರು.
ಜನ ವಿರೋಧಿ ನೀತಿ ಖಂಡಿಸಿ ನಾವು ಮತ್ತೆ ಹೋರಾಟ ಮಾಡುತ್ತೇವೆ. ಹೋರಾಟ ಮಾಡುವುದೇ ತಪ್ಪು ಎಂದರೆ ಹೇಗೆ ಎಂದ ಅವರು, ಶೂನ್ಯ ಸಾಧನೆಯಿಂದ ಮುಖ ತೋರಿಸಲು ಆಗುತ್ತಿಲ್ಲ. ನಮ್ಮ ಶಾಸಕರು ೨೫ ವರ್ಷದಿಂದ ಅಧಿಕಾರದಲ್ಲಿ ಇದ್ದರೂ ಇಂತಹ ದ್ವೇಷದ ರಾಜಕಾರಣವೆಂದು ಮಾಡಿಲ್ಲ. ಕೇವಲ ಒಂದೇ ವರ್ಷದಲ್ಲಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಬಿಜೆಪಿ ಜಿಲ್ಲಾ ವಕ್ತಾರರಾದ ತಳೂರು ಕಿಶೋರ್ ಕುಮಾರ್, ಅರುಣ್ ಕುಮಾರ್, ವಿರಾಜಪೇಟೆ ಮಂಡಲದ ಪ್ರದಾನ ಕಾರ್ಯದರ್ಶಿ ಮಂಜುಗಣಪತಿ, ಪ್ರಮುಖರಾದ ರಾಕೇಶ್ ಸುದ್ದಿಗೋಷ್ಠಿಯಲ್ಲಿದ್ದರು.