ಬ್ಯಾಡಗಿ: ಚುನಾವಣಾ ಸವಾಲುಗಳನ್ನು ಎದುರಿಸಲು ಭಾರತದಾದ್ಯಂತ ಕಾಂಗ್ರೆಸ್ ತಳಮಟ್ಟದ ಹೆಜ್ಜೆ ಗುರುತನ್ನು ಪುನರ್ ನಿರ್ಮಿಸಲು ಕಾರ್ಯಕರ್ತರು ಶ್ರಮಿಸಬೇಕಾಗಿದೆ ಎಂದು ಎಐಸಿಸಿ ವೀಕ್ಷಕ ಹಾಗೂ ತೆಲಂಗಾಣದ ಮಾಜಿ ಶಾಸಕ ಶೇಖ್ ಮುಷ್ತಾಕ್ ವಲಿ ಹೇಳಿದರು.
ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಬಹುದೊಡ್ಡ ಪಾಠ: ಇತ್ತೀಚೆಗೆ ಮುಕ್ತಾಯಗೊಂಡ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಚುನಾವಣೆಗಳಲ್ಲಿ ನಮ್ಮದೇ ಮುಖಂಡರು ಮುಖ್ಯಮಂತ್ರಿಗಳಾಗಿ ಹೊರಹೊಮ್ಮಿದ್ದಾರೆ. ಹೀಗಾಗಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ, ಮೂಲ ಕಾರ್ಯಕರ್ತರನ್ನು ಮತ್ತೆ ಪಕ್ಷಕ್ಕೆ ಪುನರುಜ್ಜೀವನಗೊಳಿಸಲು ತೆಲಂಗಾಣ, ಮಧ್ಯಪ್ರದೇಶ, ಒಡಿಶಾ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈಗಾಗಲೇ ಸಕ್ರಿಯ ಅಭಿಯಾನಗಳು ನಡೆಯುತ್ತಿವೆ ಎಂದರು.
2028 ಕ್ಕೆ ಮತ್ತೆ ಕಾಂಗ್ರೆಸ್: ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್.ಆರ್. ಪಾಟೀಲ ಮಾತನಾಡಿ, ಮುಂಬರುವ 2028ಕ್ಕೆ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದಲ್ಲಿ ಇಂದಿನಿಂದಲೇ ಕಾರ್ಯಕರ್ತರು ಪಕ್ಷ ಸಂಘಟನೆ ಜೊತೆಗೆ ನಮ್ಮ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಕೆಲಸವಾಗಬೇಕು ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಸಮರ್ಥ ನಾಯಕತ್ವ ನೀಡಬೇಕಾಗಿದೆ ಎಂದರು.ಎಲ್ಲರೂ ಮುಖಂಡರೇ: ಜಿಲ್ಲಾ ವೀಕ್ಷಕ ಡಿ.ಬಸವರಾಜು ಮಾತನಾಡಿ, ಪಕ್ಷವನ್ನು ಬೂತ್ ಮಟ್ಟದಿಂದ ಮೇಲಕ್ಕೆ ಬಲಪಡಿಸುವ ಗುರಿ ಹೊಂದಿರುವ ಕಾರ್ಯಕರ್ತರು ತಮ್ಮ ಬೂತ ಮಟ್ಟಿಗೆ ತಾವೇ ಮುಖಂಡರು, ರಾಜಕೀಯ ಹಿನ್ನೆಲೆಯಿಲ್ಲದ ಆದರೆ ಕ್ರಿಯಾಶೀಲತೆಗೆ ಸಿದ್ಧರಾಗಿರುವ ಸೈದ್ಧಾಂತಿಕವಾಗಿ ಬದ್ಧರಾಗಿರುವ ಯುವಕರಿಗೆ ಆದ್ಯತೆ ನೀಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಕರೆ ನೀಡಿದರು.