ಮನವಿ । ಪಟೇಲ್‌ರನ್ನು ಸಿಂಹದ ಮರಿಗೆ ಹೋಲಿಕೆಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಸಿಂಹದ ಗುರುತಿನಲ್ಲಿ ಎರಡು ಬಾರಿ ಗೆದ್ದಿದ್ದ ಪುಟ್ಟಸ್ವಾಮೀಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ಎಂಬ ಸಿಂಹದ ಮರಿಯನ್ನು ಈ ಬಾರಿ ಕಾಂಗ್ರೆಸ್ ಕಾರ್ಯಕರ್ತರು ಗೆಲ್ಲಿಸಿಕೊಡಬೇಕು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮನವಿ ಮಾಡಿದರು.ಬುಧವಾರ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಹಾಸನ ಲೋಕಸಭಾ ಕ್ಷೇತ್ರ ಚುನಾವಣೆ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರ ಮತ್ತು ಮುಖಂಡರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಒಂದು ಉತ್ತಮ ವ್ಯಕ್ತಿಯನ್ನು ಚುನಾವಣಾ ಕಣಕ್ಕೆ ಇಳಿಸಿದ್ದು ಶ್ರೇಯಸ್ ಪಟೇಲ್ ಅವರನ್ನು ಕಾರ್ಯಕರ್ತರು ಯಾವ ರೀತಿ ಬೆಳೆಸುತ್ತೀರಿ ಎಂಬುದೇ ಮುಖ್ಯವಾಗಿದೆ, ಹೈಕಮಾಂಡ್ ಹಾಸನ ಜಿಲ್ಲೆಯನ್ನು ಚುನಾವಣಾ ಸರ್ವೆ ಮಾಡಿಸಿಯೇ ಈ ಬಾರಿ ಶ್ರೇಯಸ್ ಪಟೇಲ್ ಅವರನ್ನು ಚುನಾವಣಾ ಕಣದಲ್ಲಿ ನಿಲ್ಲಿಸಿದ್ದು ಗೆಲ್ಲುವುದಕ್ಕೆ ಸಮರ್ಥವಾಗಿದೆ ಎಂದು ಹೇಳಿದರು.
ಆದರೆ ಅವರಿಗೆ ಬೆಂಬಲ ನೀಡಿ ಕಾರ್ಯಕರ್ತರು ಹೆಗಲು ಕೊಟ್ಟು ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷ ಜಿಲ್ಲೆಯಲ್ಲಿ ಅಸ್ಥಿತ್ವ ಉಳಿಸಿಕೊಳ್ಳಲು ಇದೊಂದೇ ಅವಕಾಶವಿರುವುದು. ಶ್ರೇಯಸ್ ಎಂಬ ಹುಡುಗನು ಹೊಳೇನರಸೀಪುರದಲ್ಲಿ ಕಳೆದ ಚುನಾವಣೆಯಲ್ಲಿ ಹೇಗೆ ಮತ ಪಡೆದಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ಶ್ರವಣಬೆಳಗೊಳ ವಿಧಾನ ಸಭಾ ಕ್ಷೇತ್ರದ ಪ್ರತೀ ಬೂತ್‌ನಲ್ಲೂ ಏಜೆಂಟರು ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡಿ ಯಾವುದೇ ಅಡ್ಡ ಮತದಾನ ಆಗದಂತೆ ತಡೆದು ಕಾಂಗ್ರೆಸ್ ಪಕ್ಷ ಗೆಲ್ಲಲು ಕೆಲಸ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸಬೇಕು ಎಂದು ಮನವಿ ಮಾಡಿದರು.ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಮಾತನಾಡಿ, ಹಾಸನ ಲೋಕಸಭಾ ಚುನಾವಣೆ ಈ ಬಾರಿ ಕಾಂಗ್ರೆಸ್ ಅಲೆ ಇದ್ದು ಹೈಕಮಾಂಡ್ ಆದೇಶದಂತೆ ಚುನಾವಣೆಗೆ ಸ್ಪರ್ಧಿಸಿದ್ದೇನೆ, ಕಳೆದ ಚುನಾವಣೆಯಲ್ಲಿ ಭಯದ ವಾತಾವರಣದಲ್ಲೇ ಚುನಾವಣೆ ಎದುರಿಸಿ ಕೇವಲ ೧೫೦೦ ಮತಗಳ ಅಂತರದಲ್ಲಿ ಸೋತಿದ್ದೆ. ಆದರೆ ಜನ ಇಷ್ಟೊಂದು ಮತ ನೀಡಿ ಧೈರ್ಯ ತುಂಬುತ್ತಾರೆ ಎಂದು ಕನಸಿನಲ್ಲಿಯೂ ತಿಳಿದಿರಲಿಲ್ಲ. ಆದರೆ ಈ ಚುನಾವಣೆಯಲ್ಲಿ ಎದೆ ತಟ್ಟಿ ಹೇಳುತ್ತೇನೆ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಗೆಲುವು ನಮ್ಮದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮಾಜಿ ಶಾಸಕ ಸಿ. ಎಸ್.ಪುಟ್ಟೇಗೌಡ, ವಿದ್ಯುತ್ ನಿಗಮ ಮಂಡಳಿ ಅಧ್ಯಕ್ಷ ಲಲಿತ್‌ರಾಘವ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಎ.ಮಂಜಣ್ಣ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಡಿ.ಕಿಶೋರ್, ಮಾಜಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಯುವರಾಜ್, ಕಾಂಗ್ರೆಸ್ ಮಹಿಳಾ ಘಟಕದ ಮಾಜಿ ಜಿಲ್ಲಾಧ್ಯಕ್ಷೆ ಲಲಿತಮ್ಮ, ಕಾಂಗ್ರೆಸ್ ಮುಖಂರಾದ ಎಚ್. ಕೆ. ಮಹೇಶ್, ಮಖಾನ್ ವಿನೋದ್ ಇತರರು ಇದ್ದರು.ಚನ್ನರಾಯಪಟ್ಟಣದಲ್ಲಿ ಹಾಸನ ಲೋಕಸಭಾ ಕ್ಷೇತ್ರ ಚುನಾವಣೆ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರ ಮತ್ತು ಮುಖಂಡರ ಸಭೆಯಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿದರು.