ಕಾಂಗ್ರೆಸ್ಸಿನವರು ಇಟಲಿ ತಳಿ: ಬೆಲ್ಲದ

KannadaprabhaNewsNetwork | Published : Jan 24, 2024 2:03 AM

ಸಾರಾಂಶ

ಕಾಂಗ್ರೆಸ್‌ನವರಿಗೆ ಮೊದಲಿನಿಂದಲೂ ಹಿಂದೂ ಧರ್ಮ ಹಾಗೂ ವಿಚಾರಧಾರೆಯ ಬಗ್ಗೆ ಯಾವುದೇ ಗೌರವ ಮತ್ತು ಅಭಿಮಾನವಿಲ್ಲ ಎಂದು ಅರವಿಂದ ಬೆಲ್ಲದ ಹೇಳಿದ್ದಾರೆ.

ಹುಬ್ಬಳ್ಳಿ: ಕಾಂಗ್ರೆಸ್ಸಿನಲ್ಲಿರುವ ಎಲ್ಲರೂ ಇಟಲಿ ತಳಿಗಳೆ ಆಗಿದ್ದಾರೆ. ಅವರಿಗೆ ನಮ್ಮ ಶ್ರೀರಾಮ, ಹಿಂದೂ ಧರ್ಮ, ಸಂಸ್ಕೃತಿಯ ಹಾಗೂ ಸಂಪ್ರದಾಯದ ಬಗ್ಗೆ ಮಾತನಾಡಿದರೆ ಏನು ತಿಳಿಯಲು ಸಾಧ್ಯ? ಎಂದು ವಿಧಾನಸಭಾ ಉಪನಾಯಕ ಅರವಿಂದ ಬೆಲ್ಲದ ಪ್ರಶ್ನಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಟಲಿ ತಳಿಗಳಿಗೆ ಕೇವಲ ಪೋಪ್‌ ಮತ್ತು ಚರ್ಚ್‌ ಬಗ್ಗೆ ಮಾತನಾಡಿದರೆ ಮಾತ್ರ ತಿಳಿಯುತ್ತದೆ ಹಾಗೂ ಖುಷಿ ಆಗುತ್ತದೆ. ಅದನ್ನು ಬಿಟ್ಟು ನಮ್ಮ ಶ್ರೀರಾಮ ಮತ್ತು ವಿಶ್ವನಾಥ ದೇವರ ಬಗ್ಗೆ ಕಿಂಚಿತ್ತು ಪರಿಜ್ಞಾನವಿಲ್ಲ. ಇಟಲಿ ತಳಿಗಳ (ಗಾಂಧಿ ಕುಟುಂಬದ) ಡಿಎನ್‌ಎದಲ್ಲಿಯೇ ಹಿಂದುತ್ವದ ಬಗ್ಗೆ ಅರಿವಿಲ್ಲ ಎಂದು ಟೀಕಿಸಿದರು.

ನೆಹರೂ ಪ್ರಧಾನಿಯಾಗಿದ್ದಾಗ ಸರ್ದಾರ್‌ ವಲ್ಲಭಭಾಯಿ ಪಟೇಲರು ಹಿಂದೂಧರ್ಮದ ಜಾಗೃತಿಗಾಗಿ ಸೋಮನಾಥ ದೇವಸ್ಥಾನದ ಪುನರುತ್ಥಾನ ಮಾಡಿದರು. ಆಗ ಅದರ ಉದ್ಘಾಟನೆಗೆ ಪ್ರಧಾನಿ ನೆಹರೂ ಹೋಗದೇ, ರಾಜೇಂದ್ರ ಪ್ರಸಾದ್‌ ಅವರನ್ನೂ ಹೋಗಲು ಬಿಡಲಿಲ್ಲ. ಕಾಂಗ್ರೆಸ್‌ನವರಿಗೆ ಮೊದಲಿನಿಂದಲೂ ಹಿಂದೂ ಧರ್ಮ ಹಾಗೂ ವಿಚಾರಧಾರೆಯ ಬಗ್ಗೆ ಯಾವುದೇ ಗೌರವ ಮತ್ತು ಅಭಿಮಾನವಿಲ್ಲ. ನಾವು ಎಷ್ಟೇ ಹೇಳಿದರೂ ಅವರಿಗೆ ಹಿಂದುತ್ವದ ಬಗ್ಗೆ ಅರಿವು ಮೂಡುವುದಿಲ್ಲ. ಆದರೆ ಕಾಂಗ್ರೆಸ್‌ನ ಕೆಲವು ನಾಯಕರು ಗೊಂದಲಕ್ಕೆ ಬಿದ್ದಿದ್ದು, ನಾವು ರಾಮನ ಭಕ್ತರು, ನಾವು ಸಹ ಗಾಂಧಿ ರಾಮರಾಜ್ಯ ಪಾಲನೆ ಮಾಡುತ್ತೇವೆ ಎಂದು ಆಗಾಗ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದರು.

ಅಪ್ರಬುದ್ಧತೆ: ಹಿರಿಯ ರಾಜಕಾರಣಿ ವೀರಪ್ಪ ಮೋಯ್ಲಿ ಅವರು ಮೋದಿಯವರ ಉಪವಾಸ ವ್ರತ ಹಾಗೂ ಅವರ ಪತ್ನಿಯ ಬಗ್ಗೆ ಟೀಕೆ ಮಾಡಿರುವುದು ಅಪ್ರಬುದ್ಧತೆ ತೋರಿಸುತ್ತದೆ. ಅವರು ತಮ್ಮ ಘನತೆಗೆ ತಕ್ಕಂತೆ ಮಾತನಾಡಬೇಕು. ಕಾಂಗ್ರೆಸ್‌ನವರು ಎಷ್ಟು ಜನರು ತಮ್ಮ ಪತ್ನಿಯರ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಾರೆ? ಅವರೆಲ್ಲಾ ಯಾರ್‍ಯಾರೋ ಜತೆ ಕಾಣಿಸಿಕೊಳ್ಳುವುದನ್ನು ಎಲ್ಲರೂ ನೋಡಿದ್ದಾರೆ ಎಂದು ಬೆಲ್ಲದ ಟೀಕಿಸಿದರು.

ಊಹಾಪೋಹ ಅಷ್ಟೇ: ಮಾಜಿ ಸಿಎಂ ಜಗದೀಶ ಶೆಟ್ಟರ್‌ ಅವರು ಕಾಂಗ್ರೆಸ್‌ ಬಿಟ್ಟು ಮತ್ತೆ ಬಿಜೆಪಿಗೆ ಬರುತ್ತಾರೆ ಎಂಬುದು ತಳ-ಬುಡವಿಲ್ಲದ ಚರ್ಚೆ ಎಂದು ಬೆಲ್ಲದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಅವರು (ಶೆಟ್ಟರ್‌) ಮತ್ತೆ ಬಿಜೆಪಿಗೆ ಬರುತ್ತಾರೋ ಇಲ್ಲವೋ ಗೊತ್ತಿಲ್ಲ. ಅದೆಲ್ಲ ಊಹಾಪೋಹ. ಊಹಾಪೋಹದ ಬಗ್ಗೆ ಮಾತನಾಡಲ್ಲ ಎಂದರು.

ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಈ ಬಾರಿ ಧಾರವಾಡ ಲೋಕಸಭಾ ಟಿಕೆಟ್‌ ಅನ್ನು ಲಿಂಗಾಯತ ಸಮುದಾಯದವರಿಗೆ ನೀಡುತ್ತಾರೆ, ನಾನು ಅಭ್ಯರ್ಥಿ ಎಂದು ಕೆಲವರು ಸುದ್ದಿ ಹರಡಿಸುತ್ತಿದ್ದು, ಅದೆಲ್ಲ ಶುದ್ಧ ಸುಳ್ಳು ಎಂದರು.

ಈಗಾಗಲೇ ಮಹೇಶ ಟೆಂಗಿನಕಾಯಿ, ಎಂ.ಆರ್‌. ಪಾಟೀಲ ಹಾಗೂ ನಾನು ಸೇರಿದಂತೆ ಅನೇಕ ಲಿಂಗಾಯತ ಸಮುದಾಯದವರು ಶಾಸಕರಾಗಿದ್ದೇವೆ. ನಾವೆಲ್ಲರೂ ಒಟ್ಟಾಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಹ್ಲಾದ್‌ ಜೋಶಿ ಅವರನ್ನು ಮತ್ತೊಮ್ಮೆ ಬಹುಮತದಿಂದ ಗೆಲ್ಲಿಸಿ ತರುತ್ತೇವೆ ಎಂದರು.ಮೊಸರಲ್ಲಿ ಕಲ್ಲು ಹುಡುಕುವ ಪ್ರಯತ್ನ: ಟೆಂಗಿನಕಾಯಿಅಯೋಧ್ಯೆಯಲ್ಲಿ ಶ್ರೀರಾಮನಲಲ್ಲಾ ಮೂರ್ತಿ ಪ್ರಾಣಪ್ರತಿಷ್ಠಾಪನೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ 11 ದಿನದ ಉಪವಾಸದ ಬಗ್ಗೆ ಟೀಕಿಸುತ್ತಿರುವ ಕಾಂಗ್ರೆಸ್‌, ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಆರೋಪಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ಬಗ್ಗೆ ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಎಲ್ಲರೂ ಒಂದಾಗಿ ದೀಪೋತ್ಸವ ಮಾಡಿದ್ದಾರೆ. ಆದರೆ ಕಾಂಗ್ರೆಸ್‌ ಮಾತ್ರ ಅದರಲ್ಲಿ ರಾಜಕೀಯ ಬೆರೆಸುವ ಕೆಲಸ ಮಾಡುತ್ತಿದೆ ಎಂದರು.ಶ್ರೀರಾಮ ಮಂದಿರ ವಿಚಾರದಲ್ಲಿ ಬಿಜೆಪಿ ಯಾವುದೇ ಪ್ರಚಾರ ಪಡೆದುಕೊಂಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದ ಬಗ್ಗೆ ಜನರಿಗೆ ವಿಶ್ವಾಸವಿದೆ. ಅವರ ಅಭಿವೃದ್ಧಿ ಕೆಲಸಗಳನ್ನು ಮುಂದೆ ಇಟ್ಟುಕೊಂಡು ಲೋಕಸಭಾ ಚುನಾವಣೆಗೆ ಹೋಗುತ್ತೇವೆ. ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share this article