ಕನ್ನಡಪ್ರಭ ವಾರ್ತೆ ಮುಧೋಳ
ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆಂಬುದನ್ನು ಸಮೀಕ್ಷೆ ನಡೆಸಿ ಅವರಿಗೆ ಮಾತ್ರ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಲಿದೆ. ಯಾರು ಸ್ಪರ್ಧಿಸುತ್ತಾರೆಂಬುದು ಈಗಲೇ ಚರ್ಚೆ ಮಾಡುವುದು ಬೇಡ. ಪಕ್ಷದ ಸಂಘಟನೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಮಾಜಿ ಡಿಸಿಎಂ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಹೇಳಿದರು.ಶುಕ್ರವಾರ ನಗರದ ದತ್ತ ಮಂದಿರದಲ್ಲಿ ಭಾರತೀಯ ಜನತಾ ಪಾರ್ಟಿ ನಗರ ಮತ್ತು ಗ್ರಾಮೀಣ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಬಿಎಲ್ಎ-2ರ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಕೇಂದ್ರ ಚುನಾವಣೆ ಆಯೋಗ 1987ರ ನಂತರ ಜನಿಸಿದರವರ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್.ಐ.ಆರ್) ಹಮ್ಮಿಕೊಂಡಿದೆ. ಕಾರಣ ಬಿಜೆಪಿಯ ಬಿಎಲ್ಎ-2ರ ಸದಸ್ಯರು ತಮ್ಮ ವಾರ್ಡುಗಳಿಗೆ ತೆರಳಿ, ಪ್ರತಿ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿ ಆಯಾ ಕುಟುಂಬದ ಸದಸ್ಯರು ಮತದಾರರ ಪಟ್ಟಿಯಲ್ಲಿ ಕೈಬಿಟ್ಟಿರುವ ಹೆಸರುಗಳನ್ನು, ಹೊಸದಾಗಿ ಸೇರಿಸಬೇಕಾದ ಅರ್ಹ ಮತದಾರರು, ಹೆಸರು ತಿದ್ದುಪಡಿ ಮಾಡುವುದಾಗಲಿ, ನಕಲಿ ಮತದಾರರು ಸೃಷ್ಟಿ ಆಗದಂತೆ ತಾವು ನೋಡಿಕೊಳ್ಳಬೇಕು. ಯಾವ ವ್ಯಕ್ತಿ ಮತದಾರರ ಪಟ್ಟಿಯಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳಬೇಕು. ಇದು ತಮ್ಮ ಆದ್ಯ ಕರ್ತವ್ಯ ಮತ್ತು ಜವಾಬ್ದಾರಿ ಆಗಿದೆ. ನವೆಂಬರ್ ತಿಂಗಳಲ್ಲಿ ಕಾರ್ಯಾರಂಭವಾಗಲಿದೆ. ಕನಿಷ್ಠ ಮೂರು ತಿಂಗಳವರೆಗೆ ನಡೆಯಲಿದೆ. ಹೆಚ್ಚಿನ ಮುತುವರ್ಜಿ ವಹಿಸಿ ಜವಾಬ್ದಾರಿಯುತ ಕೆಲಸ ಮಾಡಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮುಧೋಳ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುಔಊದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ನಾಯಕರು ಚುನಾವಣೆಯಲ್ಲಿ ನಕಲಿ ಮತದಾನ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ. ಹಾಗಾದರೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿನ ಸಂಖ್ಯೆ ಹೇಗೆ ಹೆಚ್ಚಾಯ್ತು ಎಂದು ಪ್ರಶ್ನಿಸಿದರು.ಕೇಂದ್ರ ಚುನಾವಣೆ ಆಯೋಗ ಮತದಾರರ ಪರಿಷ್ಕರಣೆ ಕಾರ್ಯ ಪೂರ್ಣಗೊಂಡ ನಂತರ ನಡೆಯುವ ಚುನಾವಣೆಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಲು ಸಾಧ್ಯವಿಲ್ಲ. ಏಕೆಂದರೆ ನಕಲಿ ಮತದಾನ ಮಾಡಿಸುವವರೆ ಕಾಂಗ್ರೆಸ್ ನವರು ಎಂಬುದು ಎಲ್ಲರಿಗೂ ತಿಳಿಯಲಿದೆ ಎಂದು ಕಾರಜೋಳ ಹೇಳಿದರು. ಬಿಜೆಪಿ ಮುಖಂಡ ಬಸವರಾಜ ಮಳಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬಿಎಲ್ಎ-2ರ ಸದಸ್ಯರು ಜವಾಬ್ದಾರಿಗಳೇನು ಎಂಬುದರ ಕುರಿತು ತಿಳಿಸಿಕೊಟ್ಟರು.ಬಿಜೆಪಿ ಮುಖಂಡರಾದ ಕೆ.ಆರ್. ಮಾಚಪ್ಪನವರ, ಆರ್.ಟಿ. ಪಾಟೀಲ, ಸಂಗಣ್ಣ ಕಾತರಕಿ, ಕೆ.ಎಸ್. ಹಿರೇಮಠ, ಸದಾಶಿವ ಇಟಕನ್ನವರ, ಶ್ರೀಶೈಲ ಚಿನ್ನಣ್ಣವರ, ಡಾ.ರವಿ ನಂದಗಾಂವ, ನಾಗಪ್ಪ ಅಂಬಿ, ಗುರುಪಾದ ಕುಳಲಿ, ಅನಂತ ಘೋರ್ಪಡೆ ಸೇರಿದಂತೆ ಇತರರು ವೇದಿಕೆ ಮೇಲಿದ್ದರು.