ಬಳ್ಳಾರಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಇದೇ ಮೊದಲ ಬಾರಿಗೆ ಅನುಕಂಪದ ಮಾತನಾಡಿರುವ ಮಾಜಿ ಸಚಿವ ಬಿ.ಶ್ರೀರಾಮುಲು, ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಕಾಂಗ್ರೆಸ್ ಅಪಮಾನ ಮಾಡಿದೆ. ಕಾಂಗ್ರೆಸ್ ನಡೆಯಿಂದ ಅಹಿಂದ ವರ್ಗಕ್ಕೆ ನೋವಾಗಿದೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ನೆಮ್ಮದಿಯಿಂದ ಅಧಿಕಾರ ಮಾಡಲು ಕಾಂಗ್ರೆಸ್‌ನವರು ಬಿಡಲಿಲ್ಲ. ಒಂದು ಕಡೆ ಮಲ್ಲಿಕಾರ್ಜುನ ಖರ್ಗೆ ಮತ್ತೊಂದೆಡೆ ಡಿ.ಕೆ. ಶಿವಕುಮಾರ್ ಕಾಲೆಳೆಯುತ್ತಿದ್ದರು. ಸಿಎಂ ಖುರ್ಚಿಗೆ ಬೆಲೆ ಇಲ್ಲದಂತೆ ಮಾಡಿದರು. ಸಿಎಂ ಸ್ಥಾನದಿಂದ ಕೆಳಗಿಳಿಸುವಲ್ಲಿ ಡಿಕೆಶಿ ಯಶಸ್ವಿಯಾದರು. ರಾಹುಲ್ ಗಾಂಧಿ ಒಬಿಸಿ ನಾಯಕರನ್ನು ಬೆಂಬಲಿಸಬೇಕು ಎಂದು ಹೇಳುತ್ತಾರೆ. ಆದರೆ, ಒಬಿಸಿ ವರ್ಗಕ್ಕೆ ಸೇರಿದ ನಾಯಕ ಸಿದ್ದರಾಮಯ್ಯ ಅವರನ್ನೇ ಕೆಳಗಿಳಿಸಿದ್ದಾರೆ. ಕಾಂಗ್ರೆಸ್ ಈ ಹಂತಕ್ಕೆ ಬರಲು ಸಿದ್ದರಾಮಯ್ಯ ಕಾರಣ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಿದ್ದರಾಮಯ್ಯ ಫೋಟೋ ಇಟ್ಟುಕೊಂಡೇ ಚುನಾವಣೆಯಲ್ಲಿ ಗೆದ್ದಿದ್ದಾರೆ. ಜನಾದೇಶದಂತೆ ಅವರೇ ಐದು ವರ್ಷ ಸಿಎಂ ಆಗಿರಬೇಕಿತ್ತು. ನಾನು ರಾಜಕೀಯವಾಗಿ ಸಿದ್ದರಾಮಯ್ಯನವರ ವಿರೋಧಿಯಾಗಿರಬಹುದು. ಆದರೆ, ರಾಜಕೀಯ ಬೇರೆ, ವೈಯಕ್ತಿಕ ಸಂಬಂಧ ಬೇರೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದಂತೆಯೇ ಬಳ್ಳಾರಿಯ ಜಿಲ್ಲೆಯ ಕಾಂಗ್ರೆಸ್ ಶಾಸಕರು ನಗುನಗುತ್ತಲೇ ಡಿ.ಕೆ. ಶಿವಕುಮಾರ್‌ಗೆ ಹೂಗುಚ್ಛ ನೀಡಿ ಅಭಿನಂದಿಸಿದ್ದಾರೆ. ಸಿದ್ದರಾಮಯ್ಯನವರ ಫೋಟೋ ಇಟ್ಟುಕೊಂಡು ಗೆದ್ದವರು ಅವರು ಅಧಿಕಾರ ಕಳೆದುಕೊಳ್ಳುತ್ತಿದ್ದಂತೆಯೇ ಡಿ.ಕೆ. ಶಿವಕುಮಾರ್ ಮನೆಯ ಮುಂದೆ ನಿಂತಿದ್ದಾರೆ ಎಂದು ಶ್ರೀರಾಮುಲು ಟೀಕಿಸಿದರು.