ಸೋಮಣ್ಣ ಮೇಲೆ ಕಾಂಗ್ರೆಸ್ಸಿನವರ ಹಲ್ಲೆ ಖಂಡನೀಯ

KannadaprabhaNewsNetwork |  
Published : Jan 07, 2026, 02:30 AM IST
ಪೋಟೊ6ಕೆಪಿಎಲ್10:‌ಕೊಪ್ಪಳ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಜರುಗಿದ ಸುದ್ದಿಗೋಷ್ಠಿ ಉದ್ದೇಶಿಸಿ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ ಕ್ಯಾವಟರ ಮಾತನಾಡಿದರು.   | Kannada Prabha

ಸಾರಾಂಶ

ಕಳೆದ ಹನ್ನೊಂದು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ರೈಲ್ವೆ ಯೋಜನೆ ಅಭಿವೃದ್ಧಿಗೆ ಮುಂದಾಗುವ ಮೂಲಕ ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿ ಭಾರತ ಮಾಡಲಿದ್ದಾರೆ

ಕೊಪ್ಪಳ: ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ನಡೆದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಸಂದರ್ಭದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ ಮೇಲೆ ಕಾಂಗ್ರೆಸ್ಸಿನವರು ಹಲ್ಲೆ ಮಾಡುವ ಜತೆಗೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಹೇಳಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೋಮವಾರ ಹಿಟ್ನಾಳ ಗ್ರಾಮದಲ್ಲಿ ನಡೆದ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಸಂದರ್ಭದಲ್ಲಿ ಸಚಿವ ಶಿವರಾಜ ತಂಗಡಗಿ, ಸಂಸದ ಕೆ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿ ಪಡಿಸುವ ಜತೆಗೆ ಸಚಿವ ವಿ ಸೋಮಣ್ಣ ಮೇಲೆ ಹಲ್ಲೆ ನಡೆಸಿರುವದು ಖಂಡನೀಯವಾಗಿದೆ. ಕಳೆದ ಹನ್ನೊಂದು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ರೈಲ್ವೆ ಯೋಜನೆ ಅಭಿವೃದ್ಧಿಗೆ ಮುಂದಾಗುವ ಮೂಲಕ ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿ ಭಾರತ ಮಾಡಲಿದ್ದಾರೆ. ಆ ಉತ್ತಮ ಕಾರ್ಯ ಕಾಂಗ್ರೆಸ್ಸಿನವರಿಗೆ ಸಹಿಸಿಕೊಳ್ಳಲಿಕ್ಕೆ ಆಗುತ್ತಿಲ್ಲ ಎಂದರು.

ಸಂಸದ ರಾಜಶೇಖರ ಹಿಟ್ನಾಳ ಹಾಗೂ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಸ್ವಗ್ರಾಮಕ್ಕೆ ಭೇಟಿ ನೀಡಿದ ಕೇಂದ್ರ ರೈಲ್ವೆ ರಾಜ್ಯ ಸಚಿವ ಸೋಮಣ್ಣ ಅವರಿಗೆ ಅಡ್ಡಿಪಡಿಸಿದರೂ ಸಹ ಅವರು (ಸೋಮಣ್ಣ) ಅಭಿವೃದ್ಧಿ ಹಿತದೃಷ್ಟಿಯಿಂದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಕೇಂದ್ರ ಸಚಿವರು ಕಾರ್ಯಕ್ರಮದಲ್ಲಿ ಮಾತಾಡುವಾಗ ಮೈಕ್ ಆಫ್ ಮಾಡಿಸೋದು, ಕರೆಂಟ್ ತೆಗೆಸುವುದು, ಚೇರ್ ಎಸೆಯೋದು ಮಾಡಿದ್ದು ಖಂಡನೀಯ. ಸ್ಥಳದಲ್ಲಿದ್ದ ಡಿಸಿ, ಎಸ್ಪಿ ಯಾವ ಕ್ರಮಕ್ಕೆ ಇದುವರೆಗೂ ಮುಂದಾಗಿಲ್ಲ. ಸುಮೊಟೊ ಕೇಸು ದಾಖಲಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಯಾವುದೇ ಶಿಷ್ಟಚಾರ ಉಲ್ಲಂಘನೆಯಾಗಿಲ್ಲ. ಈ ಹಿಂದೆ ಕುಷ್ಟಗಿ, ಕೊಪ್ಪಳ, ಸಿಂಧನೂರು ಸೇರಿದಂತೆ ಅನೇಕ ಕಡೆಗಳಲ್ಲಿ ಇದೆ ಪ್ರಕಾರ ಕಾರ್ಯಕ್ರಮ ಮಾಡಿದ್ದಾರೆ ಎಂದರು.

ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ರಾಜ್ಯದ ಕಾಂಗ್ರೆಸ್‌ ಶಾಸಕರು ಹತಾಶರಾಗಿದ್ದಾರೆ. ಅಭಿವೃದ್ದಿ ಮಾಡಲು ಹಣವಿಲ್ಲ. ಸಚಿವ ತಂಗಡಗಿಗೆ ಸೌಜನ್ಯದ ಪಾಠ ಅವಶ್ಯಕತೆ ಇದೆ. ಡಿ.ಕೆ.ಶಿವಕುಮಾರ ಇಂತಹ ಕೃತ್ಯ ಮಾಡಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ರೈಲ್ವೆ ಇಲಾಖೆಯ ಅಧಿಕಾರಿಗಳು ಶಿಷ್ಟಾಚಾರ ಪಾಲಿಸಿದ್ದಾರೆ. ಎಲ್ಲರಿಗೂ ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ಲೆಟರ್‌ ಕೊಟ್ಟಿದ್ದಾರೆ. ಹಿರಿಯ ಸಚಿವರಿಗೆ ಗೌರವ ಕೊಡಬೇಕು ಎನ್ನುವದು ಕಾಂಗ್ರೆಸ್‌ ನಾಯಕರಿಗೆ ಗೊತ್ತಿಲ್ಲ. ಇಲ್ಲಿಯ ಶಾಸಕರು ಹಾಗೂ ಸಚಿವರು ಗೂಂಡಾ ವರ್ತನೆ ಮಾಡುತ್ತಿದ್ದಾರೆ ಎಂದರು. ಶಾಸಕ ಹಿಟ್ನಾಳ ಕುರ್ಚಿ ಎಸೆಯಿರಿ ಎಂದು ಹೇಳಿ ಮೈಕ್‌ ಬಂದ ಮಾಡಿಸಿದರೂ ಸ್ಥಳದಲ್ಲಿದ್ದ ಡಿಸಿ ಮೂಕ ಪ್ರೇಕ್ಷಕರಾಗಿ ನಿಂತಿದ್ದರು. ಕೊಪ್ಪಳವನ್ನು ರಿಪಬ್ಲಿಕ್‌ ಆಫ್‌ ಬಳ್ಳಾರಿ ರೀತಿ ಮಾಡಲು ಹೊರಟಿದ್ದಾರೆ. ತಂದೆ ವಯಸ್ಸಿನವರಾದ ಸೋಮಣ್ಣನವರನ್ನು ತಳ್ಳಾಡಲು ಮುಂದಾಗಿದ್ದು ಅಪರಾಧ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸ್ಗೂರು ಮಾತನಾಡಿ, ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸಚಿವ ಶಿವರಾಜ ತಂಗಡಗಿಗೆ ಇಚ್ಚಾಶಕ್ತಿಯಿಲ್ಲ. ಕಾಮಗಾರಿ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಶಿವರಾಜ ತಂಗಡಗಿ ಪಟಾಲಂ ತರಹ ನಡೆದುಕೊಂಡರು. ಸದ್ಯ ಕೊಪ್ಪಳ ಜಿಲ್ಲೆಯಲ್ಲಿನ ಕಾಂಗ್ರೆಸ್‌ ಶಾಸಕರು ಸಚಿವರಲ್ಲಿ ಸೋಲಿನ ಭಯ ಕಾಡುತ್ತಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಬಸವಣ್ಣ ಜೀವ ವೈವಿಧ್ಯ ಉದ್ಯಾನವನ
ಕೆಎಂಎಫ್‌ನಲ್ಲಿ ಉದ್ಯೋಗದ ನೆಪದಲ್ಲಿ50 ಲಕ್ಷ ವಂಚನೆ:ಇಬ್ಬರ ವಿರುದ್ಧ ಕೇಸ್‌