ಸಿಎಂ, ಡಿಸಿಎಂ ಸ್ವಾಗತಕ್ಕೆ ಯಾಲಕ್ಕಿ ನಗರ ಹಾವೇರಿ ಸಜ್ಜು

KannadaprabhaNewsNetwork |  
Published : Jan 07, 2026, 02:30 AM IST
ಮೆಡಿಕಲ್‌ ಕಾಲೇಜು ಕಟ್ಟಡ ಉದ್ಘಾಟನೆ ಹಿನ್ನೆಲೆಯಲ್ಲಿ ಸಚಿವ ಶಿವಾನಂದ ಪಾಟೀಲ ಅವರು ಕಾರ್ಯಕ್ರಮ ನಡೆಯಲಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕ ಬಸವರಾಜ ಶಿವಣ್ಣವರ್‌ ಇದ್ದರು. | Kannada Prabha

ಸಾರಾಂಶ

ಸರ್ಕಾರಿ ಮೆಡಿಕಲ್‌ ಕಾಲೇಜು ಕ್ಯಾಂಪಸ್‌ ಸೇರಿದಂತೆ ವಿವಿಧ ಇಲಾಖೆ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ಬುಧವಾರ ನಡೆಯಲಿದ್ದು, ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಹಲವು ಸಚಿವರು ಆಗಮಿಸಲಿದ್ದಾರೆ. ಸರ್ಕಾರಿ ಮೆಡಿಕಲ್‌ ಕಾಲೇಜು ಜಿಲ್ಲೆಯ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.

ಹಾವೇರಿ: ಸರ್ಕಾರಿ ಮೆಡಿಕಲ್‌ ಕಾಲೇಜು ಕ್ಯಾಂಪಸ್‌ ಸೇರಿದಂತೆ ವಿವಿಧ ಇಲಾಖೆ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ಬುಧವಾರ ನಡೆಯಲಿದ್ದು, ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೇರಿದಂತೆ ಹಲವು ಸಚಿವರು ಆಗಮಿಸಲಿದ್ದಾರೆ. ಸರ್ಕಾರಿ ಮೆಡಿಕಲ್‌ ಕಾಲೇಜು ಜಿಲ್ಲೆಯ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ.

ಕಾರ್ಯಕ್ರಮದ ಸಿದ್ಧತೆಗೆ ಎರಡು ದಿನಗಳಿಂದ ಹಾವೇರಿಯಲ್ಲಿ ವಾಸ್ತವ್ಯ ಮಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಮಂಗಳವಾರ ಮೆಡಿಕಲ್‌ ಕಾಲೇಜು, ಕಾರ್ಯಕ್ರಮದ ವೇದಿಕೆಯ ಸಿದ್ಧತೆ ವೀಕ್ಷಣೆ ಮಾಡಿದರು. ಮುಖ್ಯಮಂತ್ರಿಗಳು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಹುಕ್ಕೇರಿ ಮಠಕ್ಕೂ ತೆರಳಿ ಸ್ವಾಮೀಜಿಗಳೊಂದಿಗೆ ಚರ್ಚೆ ಮಾಡಿದರು.

ಮೆಡಿಕಲ್‌ ಕಾಲೇಜಿಗೆ ಭೇಟಿ ನೀಡಿದ ಸಚಿವ ಶಿವಾನಂದ ಪಾಟೀಲ ಅಲ್ಲಿಯ ಕೌಶಲ್ಯ ಪ್ರಯೋಗಾಲಯ, ಸಭಾಂಗಣ, ಉಪನ್ಯಾಸ ಕೊಠಡಿ, ಗ್ರಂಥಾಲಯಗಳನ್ನು ವೀಕ್ಷಣೆ ಮಾಡಿದರು. ಕಾಲೇಜು ಕ್ಯಾಂಪಸ್‌ ಅವರಣದಲ್ಲೇ ಸುಮಾರು ಆರು ಎಕರೆ ಪ್ರದೇಶದಲ್ಲಿ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ಶಿವಾನಂದ ಪಾಟೀಲ ಅವರು ಕೆಲವು ಸಲಹೆ ಸೂಚನೆ ನೀಡಿದರು.

ವೇದಿಕೆಯಲ್ಲಿ ಗೊಂದಲಗಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕಾರ್ಯಕ್ರಮದಲ್ಲಿ ಯಾವುದೇ ಲೋಪಗಳು ಆಗಬಾರದು. ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ವೇದಿಕೆಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಜನ ಸೇರದಂತೆ ಹಾಗೂ ಕಾರ್ಯಕ್ರಮದ ಶಿಸ್ತಿಗೆ ಭಂಗವಾಗದಂತೆ ನೋಡಿಕೊಳ್ಳಬೇಕು. ಇಲ್ಲಿನ ವ್ಯವಸ್ಥೆ ನಿರ್ವಹಣೆಗೆ ಪ್ರತ್ಯೇಕ ಅಧಿಕಾರಿಯನ್ನು ನಿಯೋಜನೆ ಮಾಡಬೇಕು ಎಂದು ಸೂಚನೆ ನೀಡಿದರು.

ನಂತರ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಿರುವ ನೂತನ ಅತಿಥಿ ಗೃಹ ವೀಕ್ಷಣೆ ಮಾಡಿ ಹುಕ್ಕೆರಿ ಮಠಕ್ಕೆ ತೆರಳಿದರು.

ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಹುಕ್ಕೇರಿ ಮಠಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಚಿವ ಶಿವಾನಂದ ಪಾಟೀಲ ಅವರು, ಸದಾಶಿವ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಶ್ರೀಗಳಿಂದ ಮಾಹಿತಿ ಪಡೆದು ಚರ್ಚೆ ಮಾಡಿದರು.

ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕ ಬಸವರಾಜ ಶಿವಣ್ಣವರ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸಂಜೀವಕುಮಾರ್‌ ನೀರಲಗಿ, ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ್‌, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಾಲ್‌, ಎಸ್ಪಿ ಯಶೋದಾ ವಂಟಗೋಡಿ, ಜಿಲ್ಲಾ ಸರ್ಜನ್‌ ಡಾ. ಪಿ. ಆರ್‌. ಹಾವನೂರು, ಹಿಮ್ಸ್‌ ಆರ್ಥಿಕ ಸಲಹೆಗಾರ ಡಾ. ದಿನೇಶ ಕೆ.ಎಸ್‌., ಪ್ರಿನ್ಸಿಪಾಲ್‌ ಡಾ. ಆಶಾಕಿರಣ್‌ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ದಾಖಲೆ ದಾಟಿದ ದಿನವೇ ಸಿಎಂ ಹಾವೇರಿಗೆ

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಹಾವೇರಿ ಜಿಲ್ಲೆ ಪ್ರವಾಸ ಕೈಗೊಂಡು ಹಾವೇರಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಗತಿ ಪರಿಶೀಲನೆ ನಡೆಸಿದ್ದರು. ಈಗ ದೇವರಾಜ ಅರಸು ಅವರ ದೀರ್ಘಾವಧಿ ಆಡಳಿತದ ದಾಖಲೆಯನ್ನು ದಾಟಿದ ದಿನವೇ ಹಾವೇರಿಗೆ ಆಗಮಿಸಿ ಸರ್ಕಾರಿ ವೈದ್ಯಕೀಯ ಕಾಲೇಜು ಉದ್ಘಾಟನೆ ಮಾಡುತ್ತಿರುವುದು ವಿಶೇಷವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಬಸವಣ್ಣ ಜೀವ ವೈವಿಧ್ಯ ಉದ್ಯಾನವನ
ಕೆಎಂಎಫ್‌ನಲ್ಲಿ ಉದ್ಯೋಗದ ನೆಪದಲ್ಲಿ50 ಲಕ್ಷ ವಂಚನೆ:ಇಬ್ಬರ ವಿರುದ್ಧ ಕೇಸ್‌