ಕೂಡ್ಲಿಗಿ: ಜಗತ್ತಿನಲ್ಲಿ ಮೋದಿಯ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದನ್ನು ಕಂಡು ಕಾಂಗ್ರೆಸ್ ನಾಯಕರು ಕಂಗಾಲಾಗಿದ್ದಾರೆ, ಕಾಶ್ಮೀರದಲ್ಲಿದ್ದ ಭಯದ ವಾತಾವರಣ ನಿರ್ನಾಮ ಮಾಡಿದ ಮೋದಿ ಭಾರತಮಾತೆ ಕಂಡ ಅಪರೂಪದ ವ್ಯಕ್ತಿಯಾಗಿದ್ದಾರೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.
ಪಟ್ಟಣದಲ್ಲಿ ನಮೋ ಬ್ರಿಗೇಡ್‌ನಿಂದ ಬುಧವಾರ ಹಮ್ಮಿಕೊಂಡಿದ್ದ ನಮೋ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದ ಮಹಿಳೆಯರು, ಮಕ್ಕಳು, ಕಾರ್ಮಿಕರು, ರೈತರ ಪ್ರಗತಿಗಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಾನಾ ಯೋಜನೆಗಳನ್ನು ಜಾರಿಗೊಳಿಸಿದೆ. ಅಲ್ಲದೆ, ೯೦ರ ದಶಕದಲ್ಲಿ ರಾಮಜನ್ಮಭೂಮಿ ಹೋರಾಟದಲ್ಲಿ ಭಾಗವಹಿಸಿದ್ದ ಮೋದಿಯವರು ರಾಮಮಂದಿರ ನಿರ್ಮಿಸಿಯೇ ಅಯೋಧ್ಯೆಗೆ ಭೇಟಿ ನೀಡಿದ್ದರು. ಇದಲ್ಲದೆ, ಕಲಂ ೩೭೦ ರದ್ದುಗೊಳಿಸಿದ ನಂತರ ಕಾಶ್ಮೀರದಲ್ಲಿ ಯಾವುದೇ ಭಯದ ವಾತಾವರಣವಿಲ್ಲ.ಪಾಕಿಸ್ತಾನದ ಭಯೋತ್ಪಾದಕರ ದಾಳಿಗೆ ಸರ್ಜಿಕಲ್, ಏರ್ ಸ್ಟ್ರೈಕ್ ನಡೆಸುವ ಮೂಲಕ ತಕ್ಕ ಪಾಠ ಕಲಿಸಿದ್ದಲ್ಲದೆ, ಕೊರೋನಾ ನಿಯಂತ್ರಣಕ್ಕೆ ದೇಶದಲ್ಲೇ ವ್ಯಾಕ್ಸಿನ್ ಕಂಡುಹಿಡಿಯುಂತೆ ಪ್ರೋತ್ಸಾಹ ನೀಡಿದ ಮೋದಿಯವರು ದೇಶದ ಸುರಕ್ಷತೆಗೆ ನೀಡಿದ ಪ್ರಾಧಾನ್ಯತೆ ತಿಳಿಯಲಿದೆ ಎಂದರು.
ಬಸ್ ಟಿಕೆಟ್ ಫ್ರೀ ಅಂದಿದ್ದಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ತಂದಿದ್ದೀರಿ. ಈಗೇನಾದ್ರೂ ಟ್ರೈನ್ ಟಿಕೆಟ್ ಫ್ರೀ ಆದ್ರೆ ರಾಹುಲ್ ಗಾಂಧೀನ ತರ್ತಾರಾ ಅಂತ ನಾವು ಸುತ್ತಾಡುತ್ತಿದ್ದೇವೆ. ಕಾಂಗ್ರೆಸ್ ಪರಿವಾರದ ಕೆಲಸ ಮಾಡುತ್ತಿದೆಯೇ ವಿನಾ ದೇಶದ ಕೆಲಸವನ್ನು ಎಂದೂ ಮಾಡಿಲ್ಲ. ಎಐಸಿಸಿಗೆ ನಾಮಕಾವಸ್ತೆಯ ಅಧ್ಯಕ್ಷರನ್ನಾಗಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮಾಡಿದ್ದಾರೆ. ತಮ್ಮ ಪರಿವಾರವನ್ನು ಕಾಪಾಡುವ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟರೆ ದೇಶವು ಅಭಿವೃದ್ಧಿಯಿಂದ ಹಿಂದುಳಿಯಲಿದೆ. ಹಾಗಾಗಿ ದೇಶದಲ್ಲಿ ಉತ್ತಮ ಆಡಳಿತ ನಡೆಸಿದ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಯಾರೇ ಬಿಜೆಪಿ ಅಭ್ಯರ್ಥಿಯಾದರೂ ಅವರನ್ನು ಬೆಂಬಲಿಸಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಕೂಡ್ಲಿಗಿ ಮಂಡಲ ಅಧ್ಯಕ್ಷ ಬಣವಿಕಲ್ಲು ಕಾಮಶೆಟ್ಟಿ ನಾಗರಾಜ, ಯುವ ಬ್ರಿಗೇಡ್ ತಾಲೂಕು ಅಧ್ಯಕ್ಷ ಕಿಶೋರ್, ನಮೋ ಬ್ರಿಗೇಡ್ ಕಾರ್ಯಕರ್ತ ಹಾಗೂ ಪಪಂ ಸದಸ್ಯ ಕೆ.ಎಚ್.ಎಂ. ಸಚಿನ್ ಕುಮಾರ್, ದಯಾನಂದ ಸಜ್ಜನ್, ಬಿಜೆಪಿ ಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷೆ ಶಾರದಾ ಕುಂಬಾರ, ಪೂಜಾರಹಳ್ಳಿ ಶಿಲ್ಪಾ ಬಸವರಾಜ, ಸಣ್ಣಬಾಲಪ್ಪ ಸೇರಿ ಇತರರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಭಾರತಮಾತೆಯ ಭಾವಚಿತ್ರಕ್ಕೆ ಚಕ್ರವರ್ತಿ ಸೂಲಿಬೆಲೆ ನಮಸ್ಕರಿಸಿದರು.