ಬಿಜೆಪಿ ರಾಜ್ಯಾಧ್ಯಕ್ಷ. ಬಿ.ವೈ.ವಿಜಯೇಂದ್ರ ಆರೋಪ
ಗದಗ: ಕಾಂಗ್ರೆಸ್ ಪಕ್ಷದವರು ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ. ಬಿ.ವೈ. ವಿಜಯೇಂದ್ರ ಆರೋಪಿಸಿದರು.ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ನಡೆಸಿ, ಮರಳಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎನ್ನುವುದು ಖಾತ್ರಿಯಾಯಿತೋ ಆವಾಗಲೇ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಬೆಂಕಿ ಹಚ್ಚುವ ಕೆಲಸ ಮಾಡಿದ್ದರು. ಡಿ.ಕೆ. ಶಿವಕುಮಾರ್ ಅವರು ಬಳ್ಳಾರಿಯಲ್ಲಿ ಈ ವಿಷಯವಾಗಿ ಕ್ಷಮೆಯನ್ನು ಕೇಳಿದ್ದರು ಎಂದರು.
ಈಗ ಲಿಂಗಾಯತ ಧರ್ಮ ವಿಷಯವಾಗಿ ಜಗದೀಶ್ ಶೆಟ್ಟರ್ ಅವರ ಹೇಳಿಕೆಯನ್ನು ಗಮನಿಸಿದ್ದೇನೆ, ರಾಜ್ಯದ ದುರಂತವೋ, ನಾಯಕರ ದುರಂತವೋ ಗೊತ್ತಿಲ್ಲ, ಮನೆ ಕಟ್ಟುವ ಕೆಲಸ ಮಾಡಬೇಕೇ ಹೊರತು ಮನೆ ಒಡೆಯುವ ಕೆಲಸ ಯಾರಿಂದಲೂ ಆಗಬಾರದು. ತಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ಯಾವ ಮಟ್ಟಕ್ಕಾದರೂ ಕಾಂಗ್ರೆಸ್‌ನವರು ಇಳಿಯುತ್ತಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ ಎಂದರು. ಜಾತಿ ಗಣತಿ ಅವೈಜ್ಞಾನಿಕ, ರಾಜ್ಯ ಸರ್ಕಾರಕ್ಕೆ ಜನಗಣತಿ ಮಾಡುವ ಅಧಿಕಾರ ಇದೆಯಾ? ರಾಜ್ಯದ ಹಿಂದುಳಿದ ಸಮಾಜಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಅಧ್ಯಯನ ಎಂದು ಹೇಳಿ, ಈಗ ಜಾತಿಗಣತಿ ಎಂದು ಪರಿವರ್ತನೆ ಮಾಡಿಕೊಂಡಿದ್ದಾರೆ. ಇದನ್ನು ಪ್ರಶ್ನೆ ಮಾಡಿದರೆ ಬಿಜೆಪಿ ವಿರೋಧ ಮಾಡುತ್ತಿದೆ ಎಂದು ಬಿಂಬಿಸುತ್ತಾರೆ. ಜಾತಿ ಗಣತಿಯನ್ನು ರಾಜಕೀಯ ದುರುಪಯೋಗ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಈ ರೀತಿ ಮಾಡುತ್ತಿರುವುದು ತೀರಾ ಖಂಡನೀಯ. ಹಿಂದುಳಿದವರಿಗೆ ಸೌಲಭ್ಯ ಸಿಗಬೇಕು ಎನ್ನುವುದು ಬಿಜೆಪಿ ನಿಲುವು, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆಯಲ್ಲಿ ಹಿಂದುಳಿದವರಿಗಾಗಿ ಅನೇಕ ಯೋಜನೆಯನ್ನು ಜಾರಿ ಮಾಡಿತ್ತು. ಆದರೆ ಕಾಂಗ್ರೆಸಿಗರು ಚುನಾವಣೆ ಬಂದಾಗ ಪ್ರತ್ಯೇಕ ಧರ್ಮ, ಜಾತಿಗಣತಿ ಬಗ್ಗೆ ಮಾತನಾಡುತ್ತಾರೆ. ಚುನಾವಣೆ ಬಂದಾಗ ಹಿಂದುಳಿದ ವರ್ಗ, ಹಿಜಾಬ್ ಇವರಿಗೆ ನೆನಪಾಗುತ್ತದೆ. ರಾಜ್ಯ ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾದ ಹಿನ್ನೆಲೆಯಲ್ಲಿ ಜಾತಿ ಗಣತಿ, ಹಿಜಾಬ್ ವಿಷಯ ತಂದಿದೆ. ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಈ ರೀತಿ ಮಾಡುತ್ತಿವೆ. ಇದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದರು.24ರಲ್ಲಿ ಮೋದಿ ಮತ್ತೆ ಅಧಿಕಾರಕ್ಕೆ: 2024ರ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. ನಿನ್ನೆ ಮೊನ್ನೆ ದೆಹಲಿಯಲ್ಲಿ ವಿಶೇಷ ಸಭೆ ನಡೆಸಲಾಗಿದೆ. ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಪ್ರಧಾನಿ ಮೋದಿ, ಅಮಿತ್ ಶಾ ಸಭೆಯಲ್ಲಿ ಕಾರ್ಯಕರ್ತರನ್ನು ಹೇಗೆ ತಯಾರು ಮಾಡಬೇಕು, ಸರ್ಕಾರದ ಯೋಜನೆಗಳನ್ನು ಹೇಗೆ ಮನೆ ಮನೆಗೆ ತಲುಪಿಸಬೇಕು ತಿಳಿಸಿದ್ದಾರೆ ಎಂದರು.
ರಾಜ್ಯದ ರೈತರಿಗೆ ಬರ ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ಹಣ ಕೊಡುತ್ತಿಲ್ಲ ಎಂದು ಕಾಂಗ್ರೆಸ್ ಹೇಳಿಕೆ ಕೊಡುತ್ತಾ ಬಂತು. ಆದರೆ ಕಷ್ಟದಲ್ಲಿರುವ ರೈತರಿಗೆ ಪರಿಹಾರ ಕೊಡಲು ಮಾತ್ರ ಸರ್ಕಾರ ಮುಂದಾಗಲಿಲ್ಲ. ರೈತರ ಸಮಸ್ಯೆ ಚರ್ಚಿಸಲು ದೆಹಲಿಗೆ ತೆರಳುವ ವೇಳೆಯಲ್ಲಿ ಐಷಾರಾಮಿ ಪ್ಲೇನ್ ನಲ್ಲಿ ಹೋಗಿದ್ದರಲ್ಲ, ಫ್ಯಾಷನ್ ಶೋಗೋ ಹೋಗಿದ್ರಾ? ಮುಖ್ಯಮಂತ್ರಿ ನಡುವಳಿಗೆ ನಿಜವಾಗಿಯೂ ತಲೆ ತಗ್ಗಿಸುವಂಥದ್ದು ಎಂದು ವಿಜಯೇಂದ್ರ ಟೀಕಿಸಿದರು.ಗದಗ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಕಂಬಳಿ, ಕುರಿ ಮರಿಯನ್ನು ಕೊಡುಗೆಯನ್ನಾಗಿ ನೀಡುವ ಮೂಲಕ ಬಿ.ವೈ.ವಿಜಯೇಂದ್ರ ಅವರನ್ನು ಸನ್ಮಾನಿಸಿದರು.