ಕರ್ನಾಟಕದ ಕಾಂಗ್ರೆಸ್ ಸರ್ಕಾರವು ದುಬಾರಿಯಾಗಿದೆ. ಈ ಸರ್ಕಾರ ಬಂದ ಮೇಲೆ ಜೀವನಕ್ಕೆ ಬೇಕಾದ ಎಲ್ಲ ವಸ್ತುಗಳ ಬೆಲೆ ಏರಿಸಲಾಗಿದೆ.
ಕಾಂಗ್ರೆಸ್ ಸರ್ಕಾರ ಪ್ರತಿ ಕುಟುಂಬದಿಂದ ಸುಮಾರು ₹ 8 ಸಾವಿರ ಕಿತ್ತುಕೊಳ್ಳುತ್ತಿದೆ
ಕನ್ನಡಪ್ರಭ ವಾರ್ತೆ ಹಾವೇರಿ
ಕರ್ನಾಟಕದ ಕಾಂಗ್ರೆಸ್ ಸರ್ಕಾರವು ದುಬಾರಿಯಾಗಿದೆ. ಈ ಸರ್ಕಾರ ಬಂದ ಮೇಲೆ ಜೀವನಕ್ಕೆ ಬೇಕಾದ ಎಲ್ಲ ವಸ್ತುಗಳ ಬೆಲೆ ಏರಿಸಲಾಗಿದೆ. ಈ ಸರ್ಕಾರ ಪ್ರತಿ ಕುಟುಂಬದಿಂದ ಸುಮಾರು ₹ 8 ಸಾವಿರ ಕಿತ್ತುಕೊಳ್ಳುತ್ತಿದೆ. ಹೆಣ್ಣಮಕ್ಕಳು ಸೇರಿದಂತೆ ಎಲ್ಲರೂ ಈ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವಿದ್ಯುತ್ ದರ ನಾಲ್ಕೈದು ಬಾರಿ ಹೆಚ್ಚಿಸಿದ್ದಾರೆ. ಸ್ಟಾಂಪ್ ಡ್ಯೂಟಿ, ಮೋಟಾರ್ ವೆಹಿಕಲ್ ಟ್ಯಾಕ್ಸ್, ಅಡುಗೆ ಎಣ್ಣೆ, ಕುಡಿಯುವ ಎಣ್ಣೆ, ಆಹಾರ ಧಾನ್ಯಗಳ ಮೇಲಿನ ಟ್ಯಾಕ್ಸ್ ಹಾಗೂ ಕಸದ ಮೇಲಿನ ಟ್ಯಾಕ್ಸ್ ಕೂಡ ಹೆಚ್ಚಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಬಸ್ ದರವನ್ನು ಕನಿಷ್ಠ ₹ 9ರಿಂದ ₹ 12ಗೆ ಹೆಚ್ಚಿಸಲಾಗಿದೆ ''''''''ಶಕ್ತಿ'''''''' ಯೋಜನೆ ಬಂದಾಗಲೆ ಕೆಎಸ್ಆರ್ಟಿಸಿ ಬಸ್ಸುಗಳು ಅಲ್ಲಲ್ಲಿ ನಿಲ್ಲುತ್ತವೆ. ಡೀಸೆಲ್ ಇರುವುದಿಲ್ಲ, ಪಂಕ್ಚರ್ ತಿದ್ದಿಕೊಳ್ಳಲು ದುಡ್ಡಿರುವುದಿಲ್ಲ ಎಂದು ತಾವು ಅಂದೇ ಹೇಳಿದ್ದೆವು. ಇವತ್ತು ಅದು ಸತ್ಯವಾಗಿದೆ. ರಾಜ್ಯದಲ್ಲಿ ಪ್ರತಿದಿನ ಸುಮಾರು 30ರಿಂದ 35 ಲಕ್ಷ ಜನರು ಪ್ರಯಾಣ ಮಾಡುತ್ತಾರೆ. ಅದನ್ನು ಅತ್ಯಂತ ದುಸ್ಥಿತಿಗೆ ತಂದಿದ್ದಾರೆ. ಮುಖ್ಯಮಂತ್ರಿಗಳೇ ಡೀಸೆಲ್ಗೆ ದುಡ್ಡಿಲ್ಲಪ್ಪ ಎಂದಿದ್ದಾರೆ ಎಂದು ಲೇವಡಿ ಮಾಡಿದರು.
ಎಲ್ಲ ಟ್ಯಾಕ್ಸ್ ಹಾಗೂ ದರ ಹೆಚ್ಚಳ ಲೆಕ್ಕ ಹಾಕಿದರೆ, ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಪ್ರತಿ ತಿಂಗಳು ಒಂದು ಕುಟುಂಬದಿಂದ ಸುಮಾರು ₹ 8 ಸಾವಿರ ಕಿತ್ತುಕೊಳ್ಳುತ್ತಿದೆ. ಇದು ಅತ್ಯಂತ ದರಿದ್ರ ಸರ್ಕಾರವಾಗಿದ್ದು, ಕಬ್ಬಿನ ಬೆಳೆಗಾರರ ಬಳಿ ಹೋದರೆ ಹಣವಿಲ್ಲ ಎನ್ನುತ್ತಾರೆ. ಬಸ್ಸಿಗೆ ಡೀಸೆಲ್ ಹಾಕಲು ದುಡ್ಡಿಲ್ಲ ಎನ್ನುತ್ತಾರೆ. ಅಂಗವಿಕಲರ ಮಾಸಾಶನ ಕೊಟ್ಟಿಲ್ಲ, ವಿಧವಾ ವೇತನ ಕೊಟ್ಟಿಲ್ಲ. ಯಾವ ಬಡವರ ಯೋಜನೆಗಳಿಗೂ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.
ಪರೀಕ್ಷಾ ಅಕ್ರಮ:
ವಿಎಒ ಮತ್ತು ಡಿಪ್ಲೊಮಾ ಪರೀಕ್ಷೆಗಳಲ್ಲಿ ಬಹಳ ದೊಡ್ಡ ಅವ್ಯವಹಾರ ಮತ್ತು ಒಪನ್ ಆಗಿ ಅಕ್ರಮ ನಡೆದಿದೆ. ನೀಟ್ ಬಗ್ಗೆ ಮಾತನಾಡುವವರು ತಮ್ಮ ತಟ್ಟೆಯಲ್ಲಿ ಕತ್ತೆ ಬಿದ್ದಿದೆ ಎಂಬುದನ್ನು ಮರೆತಿದ್ದಾರೆ. ಕೆಇಎಯಲ್ಲಿ ಎಲ್ಲ ನೇಮಕಾತಿಗಳಲ್ಲೂ ಭ್ರಷ್ಟಾಚಾರವಿದ್ದು, ಸಾಕಷ್ಟು ಆರೋಪಗಳು ಈಗಾಗಲೇ ಕೆಇಎ ಮೇಲೆ ಇವೆ. ಭ್ರಷ್ಟಾಚಾರಕ್ಕೆ ಸಂಪೂರ್ಣ ಪ್ರೋತ್ಸಾಹ ಕೊಡುವ ದುಷ್ಟ ಸರ್ಕಾರ ಇದಾಗಿದ್ದು, ಕೂಡಲೇ ಕೆಇಎಯಲ್ಲಿ ತನಿಖೆ ಮಾಡಬೇಕು, ಸಂಬಂಧಪಟ್ಟವರನ್ನು ಸಸ್ಪೆಂಡ್ ಮಾಡಬೇಕು ಮತ್ತು ವಿದ್ಯಾರ್ಥಿಗಳಿಗೆ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದರು.
ಕಬ್ಬಿನ ದರ ಘೋಷಿಸಲಿ:
ಕಬ್ಬಿನ ಬೆಲೆ ಕುರಿತು ರೈತರ ಹೋರಾಟದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಬ್ಬಿನ ರಿಕವರಿ ಸಮಸ್ಯೆ ದೊಡ್ಡದಿದೆ, ಫ್ಯಾಕ್ಟರಿ ಮಾಲೀಕರ ಜತೆಗೆ ಚರ್ಚೆ ಆಗುತ್ತಿದೆ. ಎಂಎಸ್ಪಿ ಅಂತಿಮ ಆದ ಮೇಲೆ ಫೈನಲ್ ರೇಟ್ ಕೊಟ್ಟು ಈಗ ಮೊದಲ ಕಂತು ಕೊಡಬೇಕು ಎನ್ನುವುದು ನಮ್ಮ ಬೇಡಿಕೆ ಇದೆ. ಮೊನ್ನೆ ಮುಖ್ಯಮಂತ್ರಿ ಭೇಟಿಯಾಗಿ ಅದರ ಬಗ್ಗೆ ಮಾತಾಡಿದ್ದೇನೆ. ಆದಷ್ಟು ಬೇಗನೆ ರಾಜ್ಯ ಸರ್ಕಾರ ದರ ಘೋಷಣೆ ಮಾಡಬೇಕು. ಮಾಲೀಕರನ್ನು ಒಪ್ಪಿಸಬೇಕು ಹಾಗೂ ರೈತರನ್ನು ಒಪ್ಪಿಸಬೇಕು, ರೈತರು, ಫ್ಯಾಕ್ಟರಿ ಮಾಲೀಕರು ಎಲ್ಲರೂ ಒಪ್ಪಿಕೊಂಡ ನಂತರ ಒಂದು ದರ ಮಾಡಿ ಇದನ್ನು ಬಗೆಹರಿಸಬೇಕು ಎಂದರು.ಸಕ್ಕರೆ ದರದ ಮೇಲೆ ಇದು ನಿರ್ಧಾರವಾಗುತ್ತದೆ, ಈಗಾಗಲೇ ಸಕ್ಕರೆ ದರ ₹54 ಇದೆ. ಹೀಗಾಗಿ ಕಾರ್ಖಾನೆ ಮಾಲೀಕರಿಗೆ ₹40 ಕೊಡೋದಕ್ಕೆ ಏನೂ ತೊಂದರೆಯಿಲ್ಲ. ಹಾವೇರಿ ರೈತರದ್ದು ರಿಕವರಿಯಲ್ಲಿ ಸಮಸ್ಯೆ ಇದೆ, ಅದಕ್ಕೆ ರೈತರು ಮತ್ತು ಕಾರ್ಖಾನೆಯವರು ಹಾಗೂ ಸರ್ಕಾರದ ಅಧಿಕಾರಿಗಳ ನಡುವೆ ಮೂರು ದಿವಸಕ್ಕೊಮ್ಮೆ ಯಾವ ಕಬ್ಬು ತೆಗೆದುಕೊಳ್ಳುತ್ತಾರೆಯೋ ಅದನ್ನು ಟೆಸ್ಟ್ ಮಾಡಿ ರೈತರು ಒಪ್ಪಿಕೊಳ್ಳುವಂತಹ ರಿಕವರಿಯನ್ನು ಮಾಡಬೇಕು ಎನ್ನುವ ತೀರ್ಮಾನ ಮಾಡಬೇಕು ಎಂದು ನಾನು ಸರ್ಕಾರಕ್ಕೆ ಒತ್ತಾಯ ಮಾಡಿದ್ದೇನೆ. ಶುಗರ್ ಕೇನ್ ಕಮಿಷನರ್ಗೂ ಮಾತನಾಡುತ್ತೇನೆ ಮತ್ತು ಡಿಸಿ ಅವರ ಜತೆಗೆ ಮಾತನಾಡುತ್ತೇನೆ ಎಂದು ಬೊಮ್ಮಾಯಿ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.