ಪಂಚಮುಖಿ ಆಂಜನೇಯ ಪ್ರತಿಷ್ಠಾಪನೆ: ನಗರದಲ್ಲಿ ಶೋಭಾಯಾತ್ರೆ

KannadaprabhaNewsNetwork |  
Published : Jan 19, 2024, 01:48 AM IST
ಬಾಗಲಕೋಟೆ | Kannada Prabha

ಸಾರಾಂಶ

22ರಂದು ನಗರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಪಂಚಮುಖ ಆಂಜನೇಯ ಪ್ರಾಣದೇವರ ಮೂರ್ತಿಯನ್ನು ನಗರದಾದ್ಯಂತ ಶೋಭಾಯಾತ್ರೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅಗಣಿತ ಭಕ್ತಗಣದ ಆರಾಧ್ಯ ದೈವ ಮುಚಖಂಡಿ ಕ್ರಾಸ್‌ನ ಮಾರುತೇಶ್ವರ ದೇವಸ್ಥಾನದ ಪಂಚಮುಖಿ ಆಂಜನೇಯ ಪ್ರಾಣದೇವರ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರದಲ್ಲಿ ಗುರುವಾರ ಭವ್ಯ ಶೋಭಾಯಾತ್ರೆ ಸಡಗರ ಸಂಭ್ರಮದಿಂದ ಜರುಗಿತು.

ಅಯೋಧ್ಯೆಯಲ್ಲಿ ರಾಮಮಂದಿರ ಪ್ರತಿಷ್ಠಾಪನೆ ಮಹೋತ್ಸವದ ಈ ಸಂದರ್ಭದಲ್ಲಿ ಶ್ರೀರಾಮನ ಬಂಟ ಹನುಮನ ಮೂರ್ತಿ ಬಾಗಲಕೋಟೆ ನಗರದಲ್ಲಿ ಜ.22 ರಂದು ಪಂಚಮುಖಿ ಆಂಜನೇಯ ದೇವಾಲಯ ಉದ್ಘಾಟನೆ ಅಂಗವಾಗಿ ನಡೆದ ಬೃಹತ್ ಶೋಭಾಯಾತ್ರೆ ನಗರವನ್ನು ಭಕ್ತಿಯಲ್ಲಿ ಮಿಂದೇಳುವಂತೆ ಮಾಡಿತು.

ನಗರದ ಕೊತ್ತಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆರಂಭಗೊಂಡ ಶೋಭಾಯಾತ್ರೆಗೆ ಕೆರೂರ ಚರಂತಿಮಠದ ಶ್ರೀಗಳು, ಮಳೆರಾಜೇಂದ್ರ ಸ್ವಾಮಿಗಳು ಚಾಲನೆ ನೀಡಿದರು. ಪಂಕಾ ಮಸೀದಿ, ಪೊಲೀಸ್ ಗೇಟ್, ಎಂ.ಜಿ.ರಸ್ತೆ, ಬಸವೇಶ್ವರ ಸರ್ಕಲ್, ಕುಮಟಗಿ ಶೋರಂ, ವಾಸವಿ ಟಾಕೀಜ್, ಮಹಾವೀರ ರೋಡ್‌, ಕೆರೂಡಿ ಆಸ್ಪತ್ರೆ ರಸ್ತೆ, ಮುಚಖಂಡಿ ಕ್ರಾಸ್ ರಸ್ತೆ ಮೂಲಕ ಮಾರುತೇಶ್ವರ ದೇವಾಲಯಕ್ಕೆ ತಲುಪಿ ಸಮಾಪ್ತಿಗೊಂಡಿತು.

ಮೆರವಣಿಗೆಯುದ್ದಕ್ಕೂ ಜೈಕಾರಗಳು:

ಮೆರವಣಿಗೆಯುದ್ದಕ್ಕೂ ಜೈ ಶ್ರೀರಾಮ, ಜೈ ಆಂಜನೇಯ ಘೋಷಣೆಗಳು ಮುಗಿಲು ಮುಟ್ಟಿದ್ದವು. ಪ್ರಮುಖ ಬೀದಿಗಳಲ್ಲಿ ಕೇಸರಿಧ್ವಜ, ಕಮಾನುಗಳು ರಾರಾಜಿಸಿದವು. ಕಟೌಟ್, ಬ್ಯಾನರ್‌ಗಳ ಹಬ್ಬದ ಕಳೆಯನ್ನು ನಿರ್ಮಿಸಿದ್ದವು. ಮೆರವಣಿಗೆಯಲ್ಲಿ ಸಾವಿರಾರು ಮಹಿಳೆಯರು ಪೂರ್ಣ ಕುಂಭ ಹೊತ್ತು ಬರಿಗಾಲಿನಲ್ಲಿ ಹೆಜ್ಜೆ ಹಾಕಿದ್ದು ಭಕ್ತಿಯ ಪರಾಕಾಷ್ಠೆಯನ್ನು ಸಾಕ್ಷಿಕರಿಸಿತು. ಮಾಲಗಂಭ, ಕಳಸದ ಮೆರವಣಿಗೆ ಆಕರ್ಷಣೆಯಾಗಿತ್ತು.

ಜಾಂಜ್‌ಪತಾಕ್, ಡಿಜೆ, ಮದ್ದಳೆ, ಡೊಳ್ಳು ಕುಣಿತ ಆಕರ್ಷಿಸಿದವು. ಹನುಮನ ವೇಷಧಾರಿಗಳು ಮೆರವಣಿಗೆಯುದ್ದಕ್ಕೂ ಕಲಾ ಪ್ರದರ್ಶನ ನೀಡಿ ರಾಮಾಯಣದ ಐತಿಹ್ಯವನ್ನು ಮೆಲುಕು ಹಾಕುವಂತೆ ಮಾಡಿತು. ಬಸವೇಶ್ವರ ವೃತ್ತಕ್ಕೆ ಮೆರವಣಿಗೆ ಸಮೀಪಿಸುತ್ತಿದ್ದಂತೆ ಜಯಘೋಷಗಳು ಪ್ರತಿಧ್ವನಿಸಿದವು. ಪಟಾಕಿ ಸಿಡಿಸಿ ಭಕ್ತರು ಸಂಭ್ರಮಿಸಿದರು. ಬಾಲಕರು ರಾಮ, ಕೃಷ್ಣ , ಲಕ್ಷಣ, ಸೀತಾದೇವಿ, ಹನುಮನ ವೇಷ ಧರಿಸಿ ಮಿಂಚಿದರು. ಈ ವೇಳೆ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ್, ಬಾಯಕ್ಕ ಮೇಟಿ ಭಗವಾಧ್ವಜ ಹಿಡಿದು ಡೊಳ್ಳು ವಾದನಕ್ಕೆ ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು.

ಮೆರವಣಿಗೆಯಲ್ಲಿ ಪ್ರಕಾಶ ತಪಶೆಟ್ಟಿ, ಮಲ್ಲಿಕಾರ್ಜುನ ಚರಂತಿಮಠ, ಸಂತೋಷ ಹೊಕ್ರಾಣಿ, ಬಸವರಾಜ ಕಟಗೇರಿ, ವಿಜಯ ಸುಲಾಖೆ, ನಾಗರಾಜ್ ಹದ್ಲಿ, ಸಂಜೀವ ವಾಡಕರ್, ಗಣಪತಿಸಾ ದಾನಿ, ನಾರಾಯಣ ದೇಸಾಯಿ, ಶಿವು ಮೇಲ್ನಾಡ, ರವಿ ಕುಟಮಗಿ, ಎಂ.ಆರ್.ಶಿಂಧೆ, ಅಶೋಕ ಮುತ್ತಿನಮಠ, ಅರುಣ ಲೋಕಾಪೂರ, ಆನಂದ ಜಿಗಜಿನ್ನಿ, ಬಸವರಾಜ ಧರ್ಮಂತಿ, ಕಳಕಪ್ಪ ಬಾದೋಡಗಿ, ರಾಘವೇಂದ್ರ ನಾಗೂರ, ನರೇಂದ್ರ ಕುಪ್ಪಸ್ತ, ರಾಜು ಗಾಣಿಗೇರ, ರಾಜು ಗೌಳಿ, ಭೀಮಸಿ ಮೊರೆ, ಶಂಭುಗೌಡ ಪಾಟೀಲ, ಡಾ.ಶೇಖರ ಮಾನೆ, ಮಾಧವಿ ರಾಠೋಡ, ಗುರು ಅನಗವಾಡಿ, ಶರಣಪ್ಪ ಕೆರೂರ, ರಾಜು ನಾಯಕ, ಸಂಗನಗೌಡ ಗೌಡರ, ಶಾಂತಾ ಬಾಯಿ ಗೋಣಿ, ಸಂಜು ಡಿಗ್ಗಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನಸ್ತೋಮ ಹರಿದು ಬಂದಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!