ಶಿರಹಟ್ಟಿ: ವರ್ಷದಲ್ಲಿ ಎರಡು ಬಾರಿ ವಿಶ್ವ ವಲಸೆ ಹಕ್ಕಿಗಳ ದಿನ ಆಚರಿಸಲಾಗುತ್ತಿದೆ. ವಲಸೆ ಹಕ್ಕಿಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವುಗಳನ್ನು ಸಂರಕ್ಷಿಸಲು ಅಂತಾರಾಷ್ಟ್ರೀಯ ಸಹಕಾರದ ಅಗತ್ಯವನ್ನು ಹೆಚ್ಚಿಸಲು ವಿಶ್ವ ವಲಸೆ ಹಕ್ಕಿ ದಿನವನ್ನು ಆಚರಿಸಲಾಗುತ್ತಿದ್ದು, ವಾಸ್ತವವಾಗಿ ಭೂಮಿಯ ಮೇಲಿರುವ ಜೀವಕ್ಕೆ ಪಕ್ಷಿಗಳು ಬಹಳ ಮುಖ್ಯ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಶನಿವಾರ ತಾಲೂಕಿನ ಮಾಗಡಿ ಕೆರೆಗೆ ಭೇಟಿ ನೀಡಿ ವೀಕ್ಷಣೆ ಮಾಡಿ ನಂತರ ವಿಶ್ವ ವಲಸೆ ಹಕ್ಕಿಗಳ ದಿನಾಚರಣೆ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು. ವಿಶ್ವ ವಲಸೆ ಹಕ್ಕಿಗಳ ದಿನ ಎಂಬುದು ವಾರ್ಷಿಕ ಜಾಗತಿಕ ಅಭಿಯಾನವಾಗಿದ್ದು, ವಲಸೆ ಹಕ್ಕಿಗಳ ಪ್ರಾಮುಖ್ಯತೆ ಮತ್ತು ಅವುಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.ಈ ಅಭಿಯಾನವು ವಲಸೆ ಹಕ್ಕಿಗಳ ಪರಿಸರ ಪ್ರಾಮುಖ್ಯತೆ, ಅವು ಎದುರಿಸುತ್ತಿರುವ ಬೆದರಿಕೆಗಳು ಮತ್ತು ಅವುಗಳನ್ನು ರಕ್ಷಿಸಲು ಕ್ರಮ ತೆಗೆದುಕೊಳ್ಳುವ ಅಗತ್ಯವನ್ನು ಎತ್ತಿ ತೋರಿಸುತ್ತದೆ. ವಲಸೆ ಹಕ್ಕಿಗಳು ಪ್ರಕೃತಿಯ ಸಮತೋಲನವನ್ನು ಕಾಪಾಡುವಲ್ಲಿ ಮತ್ತು ಪ್ರಪಂಚದಾದ್ಯಂತ ಪರಿಸರ ವ್ಯವಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದರು.
ಪಕ್ಷಿಗಳು ಎಲ್ಲೆಡೆ ಕಂಡು ಬರುತ್ತವೆ. ನಗರಗಳಲ್ಲಿ ಮತ್ತು ಗ್ರಾಮಾಂತರದಲ್ಲಿ, ಉದ್ಯಾನವನಗಳು, ಮನೆಯ ಹಿತ್ತಲುಗಳಲ್ಲಿ, ಕಾಡುಗಳು ಮತ್ತು ಪರ್ವತಗಳಲ್ಲಿ ಕಾಣುತ್ತವೆ. ವಲಸೆ ಹಕ್ಕಿಗಳು ನಿಯಮಿತವಾಗಿ ಪ್ರಕೃತಿಯ ಚಕ್ರಗಳನ್ನು ನಮಗೆ ನೆನಪಿಸುತ್ತವೆ. ಬೇರೆ ರೀತಿಯಲ್ಲಿ ಹೇಳುವುದಾದರೆ ಪಕ್ಷಿಗಳು ಪ್ರಕೃತಿಯ ರಾಯಭಾರಿಗಳು. ಆದ್ದರಿಂದ ವಲಸೆ ಹಕ್ಕಿಗಳ ನೈಸರ್ಗಿಕ ಚಲನೆಯನ್ನು ಹೆಚ್ಚಿಸಲು ಪರಿಸರ ಸಂಪರ್ಕ ಮತ್ತು ಸಮಗ್ರತೆಯನ್ನು ಪುನಸ್ಥಾಪಿಸಲು ಇದು ಕಡ್ಡಾಯವಾಗಿದೆ ಎಂದರು.ಪ್ರತಿ ವರ್ಷವೂ ಚಳಿಗಾಲ ಸವಿಯಲು ಪ್ರಸಿದ್ಧ ಮಾಗಡಿ ಕೆರೆಗೆ ವಿದೇಶಿ ಹಕ್ಕಿಗಳು ಬರುತ್ತಿದ್ದು, ಕೆರೆಯಲ್ಲಿ ಪಕ್ಷಿಗಳ ಕಲರವ ಪ್ರಾರಂಭವಾಗುತ್ತದೆ. ಇಲ್ಲಿ ನೈಸರ್ಗಿಕ ಆಕರ್ಷಕ ಪಕ್ಷಿಧಾಮವನ್ನೇ ಸೃಷ್ಟಿಸಿದ ರೀತಿ ಕಂಡುಬರುತ್ತದೆ. ಅರಣ್ಯ ಇಲಾಖೆ ಮಾಹಿತಿ ಪ್ರಕಾರ ದೂರದ ಜಮ್ಮು-ಕಾಶ್ಮಿರ, ಟಿಬೇಟ್, ಮಲೇಷಿಯಾ, ಶ್ರೀಲಂಕಾ ಸೇರಿದಂತೆ ಎಲ್ಲೆಡೆಯಿಂದ ವಲಸೆ ಹಕ್ಕಿಗಳು ಚಳಿಗಾಲ ಸವಿಯಲು ಆಗಮಿಸಿ ಬೀಡು ಬಿಡುತ್ತವೆ ಎಂದರು.
ವಲಸೆ ಪಕ್ಷಿಗಳು ಸುಮಾರು ೧೮ ಸಾವಿರ ಅಡಿ ಎತ್ತರಕ್ಕೆ ಹಾರಬಲ್ಲ ಸಾಮರ್ಥ್ಯ ಹೊಂದಿರುವ ಬಗ್ಗೆ ಮಾಹಿತಿ ಇದೆ. ಮಾಗಡಿ ಕೆರೆಯಲ್ಲಿ ಈ ಬಾನಾಡಿಗಳು ನಾಲ್ಕೈದು ತಿಂಗಳು ನೆಲೆಯೂರಿ ಪುನಃ ತಮ್ಮ ತವರಿಗೆ ತೆರಳುತ್ತವೆ. ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಉಂಟಾಗುವ ಹವಾಮಾನ ವೈಪರಿತ್ಯ ತಪ್ಪಿಸಿ ಕೊಳ್ಳಲು ದಕ್ಷಿಣ ಭಾರತದಲ್ಲಿ ಕಾಣಿಸಿಕೊಳ್ಳುವ ಈ ಪಕ್ಷಿಗಳು ಮಾಗಡಿ ಕೆರೆಗೆ ಆಗಮಿಸುತ್ತಿದ್ದು, ಪಕ್ಷಿಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.ಚಳಿಗಾಲದಲ್ಲಿ ಚಳಿಯಿಂದ ತಪ್ಪಿಸಿಕೊಳ್ಳಲು ವಿವಿಧ ಭಾಗಗಳಿಗೆ ಹಾರುವ ಪಕ್ಷಿಗಳನ್ನು ವಲಸೆ ಹಕ್ಕಿಗಳು ಎಂದು ಕರೆಯಲಾಗುತ್ತದೆ. ಈ ಪಕ್ಷಿಗಳು ಸಂತಾನೋತ್ಪತ್ತಿ ಮಾಡಲು, ಆಹಾರಕ್ಕಾಗಿ ಮತ್ತು ಬೆಳೆಸಲು ಪ್ರತಿಕೂಲವಾದ ಸ್ಥಳದಿಂದ ಕೆಲವು ಅನುಕೂಲಕರ ಸ್ಥಳಕ್ಕೆ ವಲಸೆ ಹೋಗುತ್ತವೆ ಎಂದು ತಿಳಿಸಿದರು.
ತಾಕೀತುಮಾಗಡಿ ಕೆರೆ ಸುತ್ತ ಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಕೆರೆಗೆ ಆಗಮಿಸುವ ವಿದೇಶಿ ಪಕ್ಷಿಗಳ ಬೇಟೆ ಆಡುವ ಪುಂಡರ ಬಗ್ಗೆ ಅರಣ್ಯ ಇಲಾಖೆ, ಗ್ರಾಮ ಪಂಚಾಯತಿಯವರು ನಿಗಾ ವಹಿಸಬೇಕು. ಅರಣ್ಯ ಇಲಾಖೆ ಅಧಿಕಾರಿಗಳು ಕೆರೆಯ ಸೌಂದರ್ಯ ಕಾಪಾಡುವಲ್ಲಿ ಮೇಲಿಂದ ಮೇಲೆ ಕೆರೆಯ ವಾಸ್ತವ ಸ್ಥಿತಿ ಗತಿ ಗಮನಿಸಬೇಕು. ಕೆರೆ ಅಕ್ಕ ಪಕ್ಕ ಇರುವ ಕೃಷರ್ ಮತ್ತು ಕ್ವಾರಿಗಳಲ್ಲಿ ಬಂಡೆ ಕಲ್ಲುಗಳ ಸ್ಫೋಟಕ ಕಾರ್ಯ ನಡೆಯುತ್ತಿದೆ. ಈ ಶಬ್ದದಿಂದ ಪಕ್ಷಿಗಳ ಜೀವಕ್ಕೆ ತೊಂದರೆಯಾಗುವ ಸಾಧ್ಯತೆ ಇದ್ದು, ಪೊಲೀಸ್, ಅರಣ್ಯ ಇಲಾಖೆ ಸಿಬ್ಬಂದಿ ಗಮನಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಸೂಚನೆ ನೀಡಿದರು. ಪ್ರಾದೇಶಿಕ ಅರಣ್ಯ ಉಪಸಂರಕ್ಷಣಾಧಿಕಾರಿ ದೀಪಿಕಾ ಬಾಜಪೇಯಿ, ವಲಯ ಅರಣ್ಯಾಧಿಕಾರಿ ರಾಮಪ್ಪ ಪೂಜಾರ, ತಾಲೂಕು ಪಂಚಾಯತ ಮಾಜಿ ಅಧ್ಯಕ್ಷ ಅಶೋಕ ಪಲ್ಲೇದ, ಬಿ.ಡಿ. ಪಲ್ಲೇದ, ನಾಗರಾಜ ಕುಲಕರ್ಣಿ, ವೀರಯ್ಯ ಮಠಪತಿ ಸೇರಿ ಅನೇಕರು ಇದ್ದರು.