ಕೆರೆಗಳನ್ನು ಅಭಿವೃದ್ದಿಪಡಿಸುವುದರಿಂದ ಅಂತರ್ಜಲ ಮಟ್ಟ ಸುಧಾರಣೆಯಾಗಿ ನೀರಿನ ಸಮಸ್ಯೆ ದೂರವಾಗಲಿದೆ. ಕೆರೆಗಳನ್ನು ಪುನಶ್ಚೇತನಗೊಳಿಸುವ ದೃಷ್ಟಿಯಿಂದ ಶ್ರೀ ಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ನಮ್ಮ ಊರು ನಮ್ಮ ಕೆರೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಹೇಳಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಕೆರೆಗಳನ್ನು ಅಭಿವೃದ್ದಿಪಡಿಸುವುದರಿಂದ ಅಂತರ್ಜಲ ಮಟ್ಟ ಸುಧಾರಣೆಯಾಗಿ ನೀರಿನ ಸಮಸ್ಯೆ ದೂರವಾಗಲಿದೆ. ಕೆರೆಗಳನ್ನು ಪುನಶ್ಚೇತನಗೊಳಿಸುವ ದೃಷ್ಟಿಯಿಂದ ಶ್ರೀ ಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ನಮ್ಮ ಊರು ನಮ್ಮ ಕೆರೆ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಹೇಳಿದರು.ತಾಲೂಕಿನ ಬೆಳಗರಹಳ್ಳಿಯಲ್ಲಿ ನಮ್ಮ ಊರು ನಮ್ಮ ಕೆರೆ ಹೊಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಪರಿಸರ ನಾಶ ಮಾಡದೆ ಗಿಡಗಳನ್ನು ನೆಟ್ಟರೆ ಉತ್ತಮ ಮಳೆಯಾಗಿ ಗ್ರಾಮಗಳು ಸಮೃದ್ದಿಯಾಗಲಿವೆ. ಜತೆಗೆ ಇದರಿಂದ ಜಲಮೂಲ ಸಂರಕ್ಷಣೆಯಾಗಲಿದೆ. ಜಲವಿಲ್ಲದಿದ್ದರೆ ಸಕಲ ಜೀವ ರಾಶಿಗಳು ಬದುಕಲು ಅಸಾಧ್ಯ. ಜಲಮೂಲ ರಕ್ಷಣೆಗೆ ಪ್ರತಿಯೊಬ್ಬರು ಆದ್ಯತೆ ನೀಡಬೇಕು ಎಂದರು.
ಪ್ರಸ್ತುತ ಯೋಜನೆಯ ಸಮುದಾಯ ಅಭಿವೃದ್ದಿ ವಿಭಾಗದಿಂದ ರಾಜ್ಯದಲ್ಲಿ 770 ಕೆರೆಗಳು, ತುಮಕೂರು ಜಿಲ್ಲೆಯಲ್ಲಿ 60 ಹಾಗೂ ತಿಪಟೂರು ತಾಲೂಕಿನಲ್ಲಿ 9 ಕೆರೆಗಳ ಹೂಳೆತ್ತಿ ಕೆರೆಗಳನ್ನು ಪುನಶ್ಚೇತನಗೊಳಿಸಲಾಗುತ್ತಿದೆ. ಇದರಿಂದ ರೈತಾಪಿ ವರ್ಗದವರಿಗೆ ಕೃಷಿಗೆ ಪೂರವಾದ ವಾತಾವರಣ ಕಲ್ಪಿಸಿಕೊಟ್ಟಂತಾಗಿದೆ. ಕೆರೆ, ಕುಂಟೆ, ಕಾಲುವೆಗಳು ಸರಿಯಾಗಿದ್ದರೆ ನೀರು ಸರಾಗವಾಗಿ ಹರಿಯುತ್ತದೆ ಎಂದು ಮಾಹಿತಿ ನೀಡಿದರು.
ಹಾಗಾಗಿ ಜಲಮೂಲದ ಸಂರಕ್ಷಣೆ ನಮೆಲ್ಲರ ಕರ್ತವ್ಯವಾಗಬೇಕು. ನಮ್ಮ ಪೂರ್ವಜರು ನಮಗೆ ಕೆರೆ-ಕಟ್ಟೆಗಳನ್ನು ನೀಡಿದ್ದು ಅವುಗಳನ್ನು ಹಾಳು ಮಾಡದೆ ಹೂಳು ತುಂಬದ ರೀತಿ ನೋಡಿಕೊಳ್ಳಬೇಕು. ಕಸ ಕಡ್ಡಿ, ಗಿಡಗಂಟೆಗಳು ಬೆಳೆಯದಂತೆ ನಿಗಾವಹಿಸಬೇಕು. ಈ ನಿಟ್ಟಿನಲ್ಲಿ ಗ್ರಾಮದ ಯುವಕರು ತಮ್ಮೂರಿನ ಕೆರೆ-ಕಟ್ಟೆಗಳನ್ನು ಸ್ವಚ್ಚವಾಗಿಟ್ಟುಕೊಳ್ಳುವ ಮೂಲಕ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು ಎಂದು ಸಲಹೆ ನೀಡಿದರು.
ಗ್ರಾಮಾಂತರ ತಾಲೂಕು ಯೋಜನಾಧಿಕಾರಿ ಕೆ. ಸುರೇಶ್ ಮಾತನಾಡಿ, ಕೆರೆ-ಕಟ್ಟೆಗಳ ಸಂರಕ್ಷಣೆಯಿಂದ ಅಂತರ್ಜಲ ಮಟ್ಟ ಸುಧಾರಣೆಯಾಗಲಿದೆ. ಪ್ರತಿ ಗ್ರಾಮದಲ್ಲಿಯೂ ಸಣ್ಣ ಪುಟ್ಟ ಕೆರೆ-ಕಟ್ಟೆಗಳಿದ್ದು, ಅವುಗಳು ಅಭಿವೃದ್ದಿಯಾಗದ ಕಾರಣ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಇದನ್ನ ಮನಗಂಡ ಧರ್ಮಸ್ಥಳ ಪೂಜ್ಯರು ಕೆರೆಹೂಳೆತ್ತುವ ಕಾರ್ಯವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದಾರೆ. ತಾಲೂಕಿನಲ್ಲಿ ಈಗಾಗಲೇ ಹಲವು ಕೆರೆಗಳನ್ನು ಹೂಳೆತ್ತುವ ಮೂಲಕ ರೈತರಿಗೆ ಹಸ್ತಾಂತರ ಮಾಡಲಾಗಿದ್ದು, ಇದಕ್ಕೆ ಸ್ಥಳೀಯರ ಸಹಕಾರ ಮತ್ತು ಪ್ರೋತ್ಸಾಹ ಸಿಗಬೇಕು ಎಂದರು.
ಕೆರೆ ಸಮಿತಿ ಅಧ್ಯಕ್ಷ ಸಿದ್ದರಾಮಣ್ಣ, ತಾಲೂಕು ಕೃಷಿ ಮೇಲ್ವಿಚಾರಕ ಪ್ರದೀಪ್‌ಕುಮಾರ್, ವಲಯ ಮೇಲ್ವಿಚಾರಕ ಎನ್. ಮುನಿಕೃಷ್ಣ, ಸೇವಾಪ್ರತಿನಿಧಿ ಇಂದ್ರಮ್ಮ, ಶಿವಗಂಗಾ, ವಿಎಲ್‌ಇ ಮನೋಜ್, ಒಕ್ಕೂಟ ಅಧ್ಯಕ್ಷ ಮಲ್ಲಿಕಾರ್ಜುನ, ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ದೇವಾನಂದ, ಕೆರೆ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರ, ಪಾಲುದಾರ ಬಂಧುಗಳು ಭಾಗವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.